ಬೆಂಗಳೂರು: ಸಾಮಾಜಿಕ ಭದ್ರತಾ ಯೋಜನೆಗಳ ನೋಂದಣಿಯಲ್ಲಿ ಗುರಿ ಸಾಧನೆ ಮಾಡಲು ವಿಫಲವಾದ ವಿವಿಧ ಬ್ಯಾಂಕ್‌ಗಳ ಕಾರ್ಯವೈಖರಿ ವಿರುದ್ಧ ಸಂಸದ ಪಿ.ಸಿ. ಮೋಹನ್ ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಗರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ (ಡಿಎಲ್‌ಆರ್‌ಸಿ) ಮತ್ತು ಜಿಲ್ಲಾ ಸಮಾಲೋಚಕ ಸಮಿತಿ (ಡಿಸಿಸಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಕಿ-ಅಂಶಗಳಿಲ್ಲದೆ ಬಂದ ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಸಂಬಂಧಿಸಿ ಯಾವ ಬ್ಯಾಂಕ್ ಅಧಿಕಾರಿಗಳ ಬಳಿಯು ಸರಿಯಾದ ಮಾಹಿತಿ ಇರಲಿಲ್ಲ. ಇದಕ್ಕೆ ಆಕ್ಷೇಪಿಸಿದ ಸಂಸದರು, ಮಾಹಿತಿ ಇಲ್ಲದೆ ಸಭೆಗೆ ಏಕೆ ಹಾಜರಾಗುತ್ತೀರಿ. ತಮ್ಮ ಬಳಿ ಮಾಹಿತಿ ಇಲ್ಲದಿದ್ದರೆ ಸಭೆಯನ್ನು ಮಾಡುವುದರಲ್ಲಿ ಅರ್ಥವಿಲ್ಲ ಎಂದು ಅತೃಪ್ತಿ ಹೊರಹಾಕಿದರು.
ಕೆಲ ಬ್ಯಾಂಕ್‌ಗಳ ಅಧಿಕಾರಿಗಳು ಖುದ್ದು ಹಾಜರಿರದೆ ತಮ್ಮ ಕಿರಿಯ ಪ್ರತಿನಿಧಿಗಳನ್ನು ಕಳುಹಿಸಿದ್ದರು. ಇದಕ್ಕೂ ಆಕ್ಷೇಪಿಸಿದ ಸಂಸದರು, ಪ್ರಮುಖ ಸಭೆಗಳಿಗೆ ಸಂಬಂಧಿಸಿದ ಅಧಿಕಾರಿಗಳೇ ಸಭೆಗೆ ಖುದ್ದಾಗಿ ಹಾಜರಾಗಬೇಕೇ ಹೊರತು ತಮ್ಮ ಅಧೀನದ ಸಿಬ್ಬಂದಿಗಳನ್ನು ನಿಯೋಜಿಸುವಂತಿಲ್ಲ ಎಂದು ತಾಕೀತು ಮಾಡಿದರು.
ಗೃಹಸಾಲದ ಅರ್ಜಿಗಳನ್ನು ಮಾನ್ಯ ಮಾಡಿ:
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಯತೀಶ್ ಮಾತನಾಡಿ, ಗೃಹನಿರ್ಮಾಣಕ್ಕೆ ಸಮರ್ಪಕವಾಗಿ ಸಾಲ ನೀಡುವಂತೆ ಬ್ಯಾಂಕ್‌ಗಳಿಗೆ ಸೂಚಿಸಿದರು. ಸರ್ಕಾರಿ ಸಾಲ ಸೌಲಭ್ಯ ಯೋಜನೆಗಳಿಗೆ ಬಂದ ಅರ್ಜಿಗಳನ್ನು ಸುಖಾಸುಮ್ಮನೆ ತಿರಸ್ಕರ ಮಾಡಬೇಡಿ. ಅದರಲ್ಲೂ ವಿದ್ಯಾರ್ಥಿವೇತನ ಸಂಬಂಧಿಸಿ ಬಂದ ಸಂದರ್ಭದಲ್ಲಿ ನಿಯಮನುಸಾರ ಪರಿಶೀಲಿಸಿ ಸಾಲ ನೀಡಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ 2025- 26ನೇ ಸಾಲಿನ ವಿವಿಧ ಬ್ಯಾಂಕ್‌ಗಳ ಸಾಲ ಯೋಜನೆಗಳ ಕುರಿತ ಕೈಪಿಡಿಯನ್ನು ಸಂಸದರು ಬಿಡುಗಡೆ ಮಾಡಿದರು.
ಸಭೆಯಲ್ಲಿ ಆರ್‌ಬಿಐ ಸಹಾಯಕ ಪ್ರಧಾನ ವ್ಯವಸ್ಥಾಪ ಪ್ರಭಾಕರ್, ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಉದಯನ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ವಿಠ್ಠಲ್, ನಗರ ಜಿಪಂನ ಯೋಜನಾ ನಿರ್ದೇಶಕ ಮೋಹನ್ ಹಾಗೂ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಹಾಜರಿದ್ದರು.