ಶಿಕ್ಷಕರ ನೇಮಕಾತಿ: ಆದಾಯ ಪ್ರಮಾಣಪತ್ರದ ಇಬ್ಬಂದಿತನವೇಕೆ? ವಿವಾಹಿತ ಮಹಿಳಾ ಅಭ್ಯರ್ಥಿಗಳ ಪ್ರಶ್ನೆ

ಶಿಕ್ಷಕರ ನೇಮಕಾತಿ ಅಧಿಸೂಚನೆ
ಶಿಕ್ಷಕರ ನೇಮಕಾತಿ ಅಧಿಸೂಚನೆ
Published on

ಪ್ರಮುಖ ಮುಖ್ಯಾಂಶಗಳು

  • ಕೆಇಎ ಸೇರಿ ಇತರೆ ಪರೀಕ್ಷಾ ಪ್ರಾಧಿಕಾರಗಳು ವಿವಾಹಿತ ಮಹಿಳಾ ಅಭ್ಯರ್ಥಿಗಳು ಕಡ್ಡಾಯವಾಗಿ ಪತಿಯ ಆದಾಯ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂಬ ಸೂಚನೆ ನೀಡಿವೆ.
  • ಆದರೆ, ಶಿಕ್ಷಣ ಇಲಾಖೆ ಮಾತ್ರ ಏಕೆ ಈ ಹೊಸ ನಿಯಮವನ್ನು ಅಳವಡಿಸಿಕೊಳ್ಳಲು ಹಿಂದೇಟು ಹಾಕುತ್ತಿದೆ?,
  • ಇದರ ಹಿಂದಿರುವ ಉದ್ದೇಶವೇನು?, ಶಿಕ್ಷಣ ಇಲಾಖೆಯ ಈ ದ್ವಂದ್ವ ನೀತಿಯು ಅಭ್ಯರ್ಥಿಗಳಲ್ಲಿ ಗೊಂದಲ ಮತ್ತು ಅನುಮಾನ ಮೂಡಿಸುತ್ತಿದೆ ಎಂಬ ಅಭಿಪ್ರಾಯ
ಬೆಂಗಳೂರು:

ಶಿಕ್ಷಕರ ನೇಮಕಾತಿ ಅಧಿಸೂಚನೆ- 2022ರಲ್ಲಿ ಸಾಕಷ್ಟು ಕಾನೂನು ಹೋರಾಟಕ್ಕೆ ಸಾಕ್ಷಿಯಾಗಿದ್ದರೂ ಶಾಲಾ ಶಿಕ್ಷಣ ಇಲಾಖೆಯು ವಿವಾಹಿತ ಮಹಿಳಾ ಅಭ್ಯರ್ಥಿಗಳ ಆದಾಯ ಪ್ರಮಾಣಪತ್ರದ ವಿಷಯದಲ್ಲಿ ಸ್ಪಷ್ಟನೆ ನೀಡದೆ, ಇಬ್ಬಂದಿ ನೀತಿ ಅನುಸರಿಸುತ್ತಿರುವುದು ಏಕೆ ಎಂದು ಅಭ್ಯರ್ಥಿಗಳು ಪ್ರಶ್ನಿಸಿದ್ದಾರೆ.

ಇಂದಿನಿಂದ (ಆ.18) 15 ಸಾವಿರ ಶಿಕ್ಷಕರ ನೇಮಕಾತಿ ಅರ್ಜಿ ಆರಂಭವಾಗುತ್ತಿದೆ. ಅರ್ಜಿಯಲ್ಲಿ ತಂದೆ/ಪತಿಯ ಯಾವುದೇ ಆದಾಯ ಪ್ರಮಾಣಪತ್ರವನ್ನು ಸ್ವೀಕರಿಸುವುದಾಗಿ ಶಿಕ್ಷಣ ಇಲಾಖೆ ತಿಳಿಸಿದೆ. ಆದರೆ, ಕೆಇಎ ಸೇರಿ ಇತರೆ ಪರೀಕ್ಷಾ ಪ್ರಾಧಿಕಾರಗಳು ವಿವಾಹಿತ ಮಹಿಳಾ ಅಭ್ಯರ್ಥಿಗಳು ಕಡ್ಡಾಯವಾಗಿ ಪತಿಯ ಆದಾಯ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂಬ ಸೂಚನೆ ನೀಡಿವೆ.
ಆದರೆ, ಶಿಕ್ಷಣ ಇಲಾಖೆ ಮಾತ್ರ ಏಕೆ ಈ ಹೊಸ ನಿಯಮವನ್ನು ಅಳವಡಿಸಿಕೊಳ್ಳಲು ಹಿಂದೇಟು ಹಾಕುತ್ತಿದೆ?, ಇದರ ಹಿಂದಿರುವ ಉದ್ದೇಶವೇನು?, ಶಿಕ್ಷಣ ಇಲಾಖೆಯ ಈ ದ್ವಂದ್ವ ನೀತಿಯು ಅಭ್ಯರ್ಥಿಗಳಲ್ಲಿ ಗೊಂದಲ ಮತ್ತು ಅನುಮಾನ ಮೂಡಿಸುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಶಿಕ್ಷಣ ಇಲಾಖೆಯು ಪತಿಯ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂಬ ನಿಯಮವನ್ನು ದಾಖಲಿಸಲು ಸಮಸ್ಯೆ ಏನು?, ಹಿಂದಿನ ಅಧಿಸೂಚನೆಯಲ್ಲಿಯೂ ಇದೇ ರೀತಿ ನಿಯಮಗಳನ್ನು ರೂಪಿಸಿ ವರ್ಷಾನುಗಟ್ಟಲೆ ಅರ್ಹ ಅಭ್ಯರ್ಥಿಗಳು ನ್ಯಾಯಾಲಯಗಳಿಗೆ ಅಲೆದಿದ್ದಾರೆ. ಹೀಗಿದ್ದರೂ ಶಿಕ್ಷಣ ಇಲಾಖೆ ಏಕೆ ಬುದ್ಧಿ ಕಲಿತಿಲ್ಲ? ಒಂದು ವೇಳೆ ಮತ್ತೆ ಇದೇ ರೀತಿ ಪ್ರಕರಣಗಳು ಮರುಕಳಿಸಿದರೆ, ಆಗ ಅರ್ಹತೆ ಪಡೆದ ಅಭ್ಯರ್ಥಿಗಳ ಗತಿ ಏನು? ಎಂದು ಹತ್ತಾರು ಪ್ರಶ್ನೆಗಳನ್ನು ಕೇಳುತ್ತಿರುವ ಅಭ್ಯರ್ಥಿಗಳು ಕೂಡಲೇ ಶಿಕ್ಷಣ ಇಲಾಖೆಯು ಇದಕ್ಕೆ ಪ್ರತಿಕ್ರಿಯೆ ನೀಡಬೇಕು.
ಅಭ್ಯರ್ಥಿಗಳು ಮತ್ತು ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡುವ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸುಗಮವಾಗಿ ನಡೆಯುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net