ತೆರಿಗೆ ಮರುಪರಿಶೀಲನೆಯಲ್ಲಿ 318 ಕೋಟಿ ರೂ. ಬಾಕಿ ಪತ್ತೆ

taxreaudit
taxreaudit
Published on

ಪ್ರಮುಖ ಮುಖ್ಯಾಂಶಗಳು

  • 13,600 ಸ್ವತ್ತುಗಳಿಗೆ ನೋಟಿಸ್ ಜಾರಿ ಮಾಡಿದ್ದ ಜಿಬಿಎ
  • ಜಿಪಿಎಸ್ ಆಧಾರಿತ ಮನೆ-ಮನೆ ಭೇಟಿ ಯಶಸ್ವಿ
ಬೆಂಗಳೂರು: ಜಿಪಿಎಸ್ ಆಧಾರಿತ ಮನೆ-ಮನೆ ಭೇಟಿ ವೇಳೆ ಸ್ಚತ್ತುಗಳ ಆಸ್ತಿ ತೆರಿಗೆಯನ್ನು ಮರುಪರಿಶೀಲನೆಗೆ ಒಳಪಡಿಸಿದ ವೇಳೆ 318 ಕೋಟಿ ರೂ. ಬಾಕಿ ಇರುವುದನ್ನು ಜಿಬಿಎ ಕಂದಾಯ ವಿಭಾಗದ ಅಧಿಕಾರಿಗಳು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಆದಾಯ ಸಂಪನ್ಮೂಲ ಕ್ರೋಡೀಕರಣ ವಿಚಾರದಲ್ಲಿ ಆಸ್ತಿತೆರಿಗೆ ವಸೂಲಾತಿಗೆ ಜಿಬಿಎ ಮೊದಲ ಆದ್ಯತೆ ನೀಡಿದೆ. ಈ ಹಿನ್ನೆಲೆಯಲ್ಲಿ ತೆರಿಗೆ ಮರೆಮಾಚಿರುವ ಪ್ರಕರಣಗಳನ್ನು ಭೇದಿಸಿ ಕೋಟ್ಯಂತರ ರೂ. ಮೊತ್ತವನ್ನು ಕಡಿಮೆ ತೋರಿಸಿ ಟ್ಯಾಕ್ಸ್ ಪಾವತಿಸುತ್ತಿದ್ದವರಿಂದ ಈಗ ಹಿಂಬಾಕಿ ವಸೂಲಾತಿಗೆ ಕ್ರಮ ಜರುಗಿಸಲು ನಿರ್ಧರಿಸಲಾಗಿದೆ. ಕೆಲ ತಿಂಗಳ ಹಿಂದೆ ಕೈಗೊಂಡಿದ್ದ ಮೊದಲ ಹಂತದ ಕಾರ್ಯಾಚರಣೆಯಲ್ಲಿ 10 ಸಾವಿರ ಸ್ವತ್ತುಗಳಿಂದ 370 ಕೋಟಿ ರೂ. ಬಾಕಿ ಪತ್ತೆ ಮಾಡಲಾಗಿತ್ತು. ಈಗ ಎರಡನೇ ಹಂತದಲ್ಲಿ ಮತ್ತೆ 13,600 ಸ್ವತ್ತುಗಳಿಗೆ 318 ಕೋಟಿ ರೂ. ಪತ್ತೆ ಹಚ್ಚಿದ್ದು, 2 ಹಂತದಲ್ಲಿ ಒಟ್ಟು 23,600 ಸ್ವತ್ತುಗಳಿಂದ 688 ಕೋಟಿ ರೂ. ವಸೂಲಾತಿ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ.

67 ಸಾವಿರ ನೋಟಿಸ್ ಜಾರಿ:

ಸ್ವತ್ತುಗಳ ಮಾಲೀಕರು ಕಳೆದ 5 ವರ್ಷಗಳಿಂದ ಕಡಿಮೆ ತೆರಿಗೆ ಪಾವತಿಸಿರುವುದು ಪತ್ತೆಯಾಗಿದೆ. ಪ್ರತಿ ವರ್ಷಕ್ಕೆ ಪ್ರತ್ಯೇಕವಾಗಿ ನೀಡಲಾದ ನೋಟಿಸ್‌ಗಳನ್ನು ಒಳಗೊಂಡಂತೆ ಒಟ್ಟು 67 ಸಾವಿರ ನೋಟಿಸ್ ಜಾರಿಗೊಳಿಸಲಾಗಿದೆ. ಇವುಗಳನ್ನು ಜಿಪಿಎಸ್ ವ್ಯವಸ್ಥೆಯಡಿ ತಪಾಸಣೆಗೆ ಒಳಪಡಿಸಿದಾಗ ಬಾಕಿ ಪತ್ತೆಯಾಗಿದೆ. ಇಂತಹವರಿಗೆ ಬಾಕಿ ತೆರಿಗೆಯನ್ನು ಪಾವತಿಸುವಂತೆ ಹೊಸದಾಗಿ ನೋಟಿಸ್ ನೀಡಿ ಕಾಲಾವಕಾಶ ನೀಡುತ್ತೇವೆ. ಅಪೀಲು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕೊನೆಯ ಅಸ್ತ್ರವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.

ಕಾರ್ಯಾಚರಣೆ ವಿಧಾನ ಹೇಗೆ?:

1. ಜಿಪಿಎಸ್ ತಂಡ ಮನೆ-ಮನೆ ಭೇಟಿ ವೇಳೆ ಮೊಬೈಲ್ ಆಪ್‌ನಲ್ಲಿ ಆಸ್ತಿತೆರಿಗೆ ಮಾಹಿತಿ ಬಳಸಿಕೊಳ್ಳುತ್ತದೆ.
2. ಪ್ರತಿಯೊಂದು ಆಸ್ತಿಯನ್ನು ಜಿಪಿಎಸ್ ಲೊಕೇಶನ್ ಮೂಲಕ ಸೆರೆ ಹಿಡಿಯಲಾಗುತ್ತದೆ. ಆಸ್ತಿಯು ವಸತಿ/ವಾಣಿಜ್ಯ/ಮಿಶ್ರ ಬಳಕೆ ವಿಧಾನದಂತೆ ವಿಸ್ತೀರ್ಣ ಇತ್ಯಾದಿ ಮಾಹಿತಿ ದಾಖಲಿಸಿಕೊಳ್ಳಲಾಗುತ್ತದೆ.
3. ಆಸ್ತಿಯ ಮಹಡಿಗಳ ಸಂಖ್ಯೆ ಸೇರಿ ಎಲ್ಲ ಮಾಹಿತಿ ಮೊಬೈಲ್ ಆ್ಯಪ್ ಮೂಲಕ ಬ್ಯಾಕ್ ಎಂಡ್‌ಗೆ ಕಳುಹಿಸಲಾಗುತ್ತದೆ.
4. ಗುಣಮಟ್ಟ ಪರಿಶೀಲನೆ (ಕ್ಯೂಸಿ) ತಂಡವು ಶೇ.100 ಪರಾಮರ್ಶೆ ನಡೆಸುತ್ತದೆ. ತಿರಸ್ಕರಿತ ಪ್ರಕರಣಗಳನ್ನು ಮರುಪರಿಶೀಲನೆಗಾಗಿ ಜಿಪಿಎಸ್ ತಂಡಕ್ಕೆ ಹಿಂದಿರುಗಿಸಲಾಗುತ್ತದೆ.
5. ಕ್ಯೂಸಿ ಅನುಮೋದಿತ ಮಾಹಿತಿಯನ್ನು ಡ್ರೋನ್ ಚಿತ್ರ/ಡಿಜಿಟಲ್ ನಿರ್ಮಿತ ವಿಸ್ತೀರ್ಣದ ಮಾಹಿತಿಯೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಘೋಷಿತ ವಿಸ್ತೀರ್ಣಕ್ಕಿಂತ ಹೆಚ್ಚಿದ್ದಲ್ಲಿ ಸ್ವಯಂಚಾಲಿತವಾಗಿ ಬಡ್ಡಿ ಮತ್ತು ದಂಡದೊಂದಿಗೆ ನೋಟಿಸ್ ಜಾರಿಗೊಳಿಸುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net