ಬೆಂಗಳೂರು: ನಗರದ ಐದು ಪಾಲಿಕೆಗಳಲ್ಲಿ ರಸ್ತೆ ಅಗಲೀಕರಣ ಹಾಗೂ ಅನಧಿಕೃತ ಕಟ್ಟಡಗಳ ಮೇಲ್ವಿಚಾರಣೆಗಾಗಿ ಪ್ರತ್ಯೇಕ ಕಾರ್ಯಪಡೆ ರಚಿಸುವಂತೆ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಕಾರ್ಪೋರೇಷನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪಂಚ ಪಾಲಿಕೆಗಳ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಅನುಷ್ಠಾನದ ವೇಳೆ ಉದ್ಭವಿಸುವ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಬುಧವಾರ ವಿವಿಧ ಇಲಾಖೆಗಳ ಪ್ರಮುಖರೊಂದಿಗೆ ಸಮನ್ವಯ ಸಭೆಯಲ್ಲಿ ಅವರು ಈ ನಿರ್ದೇಶನ ನೀಡಿದ್ದಾರೆ.
ಆಯಾ ಪಾಲಿಕೆಗಳು ತಮ್ಮ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಮತ್ತು ಅನಧಿಕೃತ ಬಿಲ್ಡಿಂಗ್ ನಿರ್ಮಾಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಪ್ರತ್ಯೇಕ ಟಾಸ್ಕ್ ಫೋರ್ಸ್ ರಚಿಸಬೇಕು. ಇವುಗಳನ್ನು ಬೇಗನೆ ರಚಿಸಿ ಕಾರ್ಯೋನ್ಮುಖರಾಗಬೇಕು. ಕಾರ್ಪೋರೇಷನ್‌ಗಳ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ಕಟ್ಟಡ ಮೇಲೇಳುವಂತೆ ನಿಗಾ ವಹಿಸಬೇಕು ಎಂದು ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ರಸ್ತೆ ಅಗಲೀಕರಣಕ್ಕೆ ಯೋಜನೆ ರೂಪಿಸಿ:
ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಪಣತ್ತೂರು ಸಿಬಿಡಿ ರಸ್ತೆ ಭಾಗಶಃ ಪೂರ್ಣಗೊಂಡಿದ್ದು, ರೈಲ್ವೆ ಮಾರ್ಗದ ಮೇಲೆ ಹಾಗೂ ಅರಣ್ಯ ಇಲಾಖೆಯ ಜಾಗದಲ್ಲಿ ರಸ್ತೆ ನಿರ್ಮಿಸಬೇಕಿದೆ. ಜತೆಗೆ ನಾಗವಾರ ಮುಖ್ಯರಸ್ತೆ, ಹೊಸೂರು ರಸ್ತೆ (ಆನೆಪಾಳ್ಯ ಜಂಕ್ಷನ್) ಅಗಲೀಕರಣಕ್ಕೆ ಸಂಬಂಧಿಸಿದಂತೆ ಪರಿಶೀಲಿಸಿ, ತ್ವರಿತಗತಿಯಲ್ಲಿ ಕಾರ್ಯಪ್ರವೃತ್ತರಾಗಲು ಸೂಚನೆ ನೀಡಿದರು.
ಸಮನ್ವಯದೊಂದಿಗೆ ವೈಟ್ ಟಾಪಿಂಗ್ ಗೆ ವೇಗ:
ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ರಸ್ತೆಗಳಲ್ಲಿ ಜಲಮಂಡಳಿ ಹಾಗೂ ಬೆಸ್ಕಾಂ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ನಂತರ ಸಂಚಾರ ಪೊಲೀಸರಿಂದ ಅನುಮತಿ ಪಡೆದು, ವೈಟ್ ಟಾಪಿಂಗ್ ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಬೇಕು. ಇದಕ್ಕಾಗಿ ಬಿ-ಸ್ಮೈಲ್‌ನ ಮುಖ್ಯ ಅಭಿಯಂತರರು, ಆಯಾ ಪಾಲಿಕೆಗಳ ಆಯುಕ್ತರುಗಳು ಇತರ ಇಲಾಖೆಗಳೊಂದಿಗೆ ಸಮನ್ವಯ ನಡೆಸಿ ಕಾಮಗಾರಿಗಳ ವೇಗ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಮಹೇಶ್ವರ್ ರಾವ್ ಸೂಚಿಸಿದರು.
ಸಭೆಯಲ್ಲಿ ಜಿಬಿಎ ವಿಶೇಷ ಆಯುಕ್ತ ಡಾ. ಕೆ. ಹರೀಶ್ ಕುಮಾರ್, ಬೆಸ್ಕಾಂ ಎಂಡಿ ಡಾ. ಶಿವಶಂಕರ್, ಘನತ್ಯಾಜ್ಯ ನಿರ್ವಹಣಾ ನಿಗಮದ ಸಿಇಒ ಕರೀಗೌಡ ಸೇರಿ ವಿವಿಧ ಪಾಲಿಕೆಗಳ ಆಯುಕ್ತರು, ಜಲಮಂಡಳಿ, ಅಗ್ನಿಶಾಮಕ ದಳ, ಬೆಸ್ಕಾಂ, ಮೆಟ್ರೋ, ಬಿಡಿಎ, ಸಂಚಾರ ಪೊಲೀಸ್ ವಿಭಾಗದ ಅಧಿಕಾರಿಗಳು ಹಾಜರಿದ್ದರು.
ಪೌರಕಾರ್ಮಿಕರಿಗೆ ಮುಖಚಹರೆ ಹಾಜರಾತಿ ವ್ಯವಸ್ಥೆ:
ಜಿಬಿಎ ವ್ಯಾಪ್ತಿಯ ಪೌರಕಾರ್ಮಿಕರಿಗೆ ಮುಖಚಹರೆ (ಫೇಸ್ ರಿಕಗ್ನಿಷನ್) ಹಾಜರಾತಿ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದ್ದು, ಈಗಾಗಲೇ ಎಲ್ಲ ಪಾಲಿಕೆಗಳಲ್ಲಿ ಬಯೋಮೆಟ್ರಿಕ್ ಪದ್ಧತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದು, ಮುಂದಿನ ಎರಡು ವಾರಗಳೊಳಗೆ ಇತರ ಪಾಲಿಕೆಗಳಲ್ಲಿಯೂ ಈ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಮುಖ್ಯ ಆಯುಕ್ತರು ಸೂಚಿಸಿದ್ದಾರೆ.
101 ಸ್ಥಳಗಳಲ್ಲಿ ಸ್ಕೈವಾಕ್ ನಿರ್ಮಾಣ:
ನಾಗರಿಕರು ಸುರಕ್ಷಿತವಾಗಿ ರಸ್ತೆ ದಾಟುವ ಸಲುವಾಗಿ ಸಂಚಾರ ಪೊಲೀಸ್ ವಿಭಾಗವು 101 ಸ್ಥಳಗಳಲ್ಲಿ ಪಾದಚಾರಿ ಮೇಲ್ಸೇತುವೆ (ಸ್ಕೈವಾಕ್) ನಿರ್ಮಾಣಕ್ಕೆ ಪಟ್ಟಿ ನೀಡಿದೆ. ಅದರಂತೆ ಆಯಾ ಪಾಲಿಕೆಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ, ಸಾಧ್ಯವಿರುವೆಡೆ ತಕ್ಷಣವೇ ಕಾಮಗಾರಿ ಆರಂಭಿಸಬೇಕು ಎಂದು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ನಿರ್ದೇಶಿಸಿದರು.