ಚಿಕ್ಕಪೇಟೆಯ ಕಟ್ಟಡಗಳ ಸರ್ವೆಗೆ ವಿಶೇಷ ತಂಡ ರಚಿಸಿ ಅಧಿಕಾರಿಗಳಿಗೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಸೂಚನೆ
ಅಗ್ನಿ ಸುರಕ್ಷತಾ ಫೈರ್ ಆಡಿಟ್ ಕೈಗೊಳ್ಳಲು ನಿರ್ದೇಶನ
ಬೆಂಗಳೂರು: ಚಿಕ್ಕಪೇಟೆ ವಿಭಾಗದ ಎಲ್ಲ ಕಟ್ಟಡಗಳ ಸಮಗ್ರ ಸರ್ವೆ ನಡೆಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್ ಅವರು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಬಿಎ ಕಚೇರಿಯಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸರ್ವೆ ವೇಳೆ ಅನಧಿಕೃತ ಕಟ್ಟಡಗಳನ್ನು ಗುರುತಿಸಿ, ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಬೇಕು. ಜತೆಗೆ ನಿಯಮಾನುಸಾರ ತಪ್ಪುಗಳು ಕಂಡಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಚಿಕ್ಕಪೇಟೆ ಸೇರಿ ಸೂಕ್ಷ್ಮ ಪ್ರದೇಶಗಳಲ್ಲಿ ಅಗ್ನಿ ಅವಘಡಗಳ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆಗಳು, ತುರ್ತು ನಿರ್ಗಮನ ಮಾರ್ಗಗಳು ಹಾಗೂ ತುರ್ತು ಪರಿಸ್ಥಿತಿಯಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಕೂಡಲೇ ಫೈರ್ ಆಡಿಟ್ ನಡೆಸುವಂತೆಯೂ ಮುಖ್ಯ ಆಯುಕ್ತರು ಸೂಚಿಸಿದರು.
ಕೇಬಲ್ ಮ್ಯಾಪ್ ಸಲ್ಲಿಕೆಗೆ ಸೂಚನೆ:
ನಗರದ ಮೂಲಸೌಕರ್ಯ ಕಾಮಗಾರಿಗಳ ಸಮನ್ವಯಕ್ಕಾಗಿ ಅಂಡರ್ ಗ್ರೌಂಡ್ ಕೇಬಲ್‌ಗಳ ಸಮಗ್ರ ನಕ್ಷೆ (ಮ್ಯಾಪ್) ಅನ್ನು ಶೀಘ್ರದಲ್ಲೇ ಸಲ್ಲಿಸುವಂತೆ ಅವರು ಬೆಸ್ಕಾಂ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇದೇ ವೇಳೆ, ಕೆ-100 ಜಲಮಾರ್ಗದ ಕೆಲವು ಸ್ಥಳಗಳಲ್ಲಿ ಕೊಳಚೆ ನೀರು ಸೇರುತ್ತಿರುವುದು ಗಮನಕ್ಕೆ ಬಂದಿದ್ದು, ಅದನ್ನು ಸಂಪೂರ್ಣವಾಗಿ ತಡೆಯಲು ತುರ್ತು ಕ್ರಮ ಕೈಗೊಳ್ಳುವಂತೆ ಮಹೇಶ್ವರ ರಾವ್ ಸೂಚನೆ ನೀಡಿದರು.
ಸಭೆಯಲ್ಲಿ ನಗರ ಪಾಲಿಕೆಗಳ ಆಯುಕ್ತರುಗಳು ವರ್ಚುವಲ್ ಮೂಲಕ ಭಾಗಿಯಾಗಿದ್ದು, ಬೆಸ್ಕಾಂ, ಜಲಮಂಡಳಿ, ಕೆಆರ್‌ಡಿಸಿಎಲ್, ಬೆಂಗಳೂರು ನಗರ ಪೊಲೀಸ್ ಇಲಾಖೆ, ಗೇಲ್ ಸೇರಿ ವಿವಿಧ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ರಸ್ತೆ ಕಾಮಗಾರಿಗಳಿಗೆ ವೇಗ ನೀಡಿ:
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಡಿಸಿಎಲ್) ವತಿಯಿಂದ ಕೈಗೊಳ್ಳಲಾಗುತ್ತಿರುವ ರಸ್ತೆ ಕಾಮಗಾರಿಗಳ ಪ್ರಗತಿ ಕುರಿತು ಮಾಹಿತಿ ಪಡೆದ ಮುಖ್ಯ ಆಯುಕ್ತರು, ಭೂಸ್ವಾಧೀನ ಅಗತ್ಯವಿರುವ ಪ್ರದೇಶಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸಿ, ಪ್ರಕ್ರಿಯೆಯನ್ನು ತ್ವರಿತಗೊಳಿಸಿ, ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ನಿರ್ದೇಶಿಸಿದರು.