ನೀರಿನ ಬಿಲ್​ನ ಅಸಲು ಮಾತ್ರ ಕಟ್ಟಲು ಅವಕಾಶ | water bill

ನೀರು
ನೀರು
Published on

ಪ್ರಮುಖ ಮುಖ್ಯಾಂಶಗಳು

  • ಹೊಸ ವರ್ಷಕ್ಕೆ ಜಲಮಂಡಳಿ ಆಫರ್
  • ಬಡ್ಡಿ, ದಂಡ, ಇತರೆ ಶುಲ್ಕ ಸಂಪೂರ್ಣ ಮನ್ನಾ
ಪವನ್​ ಆಚಾರ್ಯ ನೀರ್ಚಾಲು ಬೆಂಗಳೂರು 
ವರ್ಷಾಚರಣೆ ಸಂಭ್ರಮ ಸಮೀಪಿಸುತ್ತಿದ್ದಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ತನ್ನ ಗ್ರಾಹಕರಿಗೆ ಭರ್ಜರಿ ಉಡುಗೊರೆ ಕೊಟ್ಟಿದೆ. ಬಾಕಿ ಇರುವ ನೀರಿನ ಬಿಲ್​ನ ಅಸಲು ಮೊತ್ತವನ್ನು ಏಕಕಾಲದಲ್ಲಿ ಪಾವತಿಸಿದರೆ, ಬಡ್ಡಿ, ದಂಡ ಹಾಗೂ ಇತರೆ ಶುಲ್ಕಗಳು ಶೇ.100 ಮನ್ನಾ ಮಾಡುವುದಾಗಿ ಜಲಮಂಡಳಿ ಘೋಷಣೆ ಮಾಡಿದೆ. 
ಜಲಮಂಡಳಿ ಪ್ರಸ್ತಾಪಿಸಿದ್ದ ಒನ್​ ಟೈಮ್​ ಸೆಟ್ಲ್​ಮೆಂಟ್​ (ಒಟಿಎಸ್​) ಯೋಜನೆಗೆ ರಾಜ್ಯ ಸರ್ಕಾರವು ಹಸಿರುನಿಶಾನೆ ತೋರಿದ್ದು, ಯೋಜನೆ ಅನುಷ್ಠಾನಕ್ಕೆ ತರುವಂತೆ ಆದೇಶ ಹೊರಡಿಸಿದೆ. ರಿಯಾಯಿತಿ ಪಾವತಿಗೆ 2026ರ ಜ.1ರಿಂದ ಮಾ.31ವರೆಗೆ ಅವಕಾಶ ಕಲ್ಪಿಸಲು ಜಲಮಂಡಳಿ ತೀರ್ಮಾನಿಸಿದೆ. ಏಕಕಾಲಿಕ ಸೆಟ್ಲ್​ಮೆಂಟ್​ ಯೋಜನೆಯನ್ನು 3 ತಿಂಗಳ ಸೀಮಿತ ಅವಧಿಗೆ ಜಾರಿಗೊಳಿಸಲಾಗುತ್ತಿದ್ದು, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಬಾಕಿಯಾದ ಮೊತ್ತಗಳನ್ನು ಲೆಕ್ಕಪತ್ರದಲ್ಲಿ ಸಮನ್ವಯಗೊಳಿಸಲು ಈ ಯೋಜನೆ ರೂಪಿಸಲಾಗಿದೆ. 
ಯೋಜನೆಯಿಂದ ಗೃಹ ಮತ್ತು ವಾಣಿಜ್ಯ ಸಂಪರ್ಕ ಹೊಂದಿರುವ ಗ್ರಾಹಕರು ತಮ್ಮ ಬಾಕಿ ಹಣವನ್ನು ಸುಲಭವಾಗಿ ತೀರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಬಡ್ಡಿ, ದಂಡ ಹಾಗೂ ದಂಡದ ಶುಲ್ಕಗಳನ್ನು ಸಂಪೂರ್ಣವಾಗಿ ಮನ್ನಾ ಮಾಡುವುದರಿಂದ ಗ್ರಾಹಕರ ಮೇಲಿನ ಹೊರೆ ಕಡಿಮೆಯಾಗಲಿದೆ. ನೀರಿನ ಬಿಲ್​ ಬಾಕಿ ಇರುವ ಪ್ರಕರಣಗಳು ದಿನದಿನಕ್ಕೆ ಹೆಚ್ಚಾಗುತ್ತಿರುವುದಲ್ಲದೆ, ಬಾಕಿ ಮೊತ್ತಕ್ಕೆ ಬಡ್ಡಿ ಮೊತ್ತವೂ ಹೆಚ್ಚಾಗುತ್ತಿದೆ. ಇದರಿಂದ ಹಲವು ಗ್ರಾಹಕರು ದೀರ್ ಕಾಲದಿಂದ ನೀರಿನ ಬಿಲ್​ ಪಾವತಿಸದೇ ಉಳಿದಿದ್ದಾರೆ. ೆಬ್ರವರಿವರೆಗೆ ಗ್ರಾಹಕರು ಉಳಿಸಿಕೊಂಡಿರುವ ನೀರಿನ ಬಾಕಿ ಒಟ್ಟು ಮೊತ್ತವು 701.71 ಕೋಟಿ ರೂ. ಇದ್ದು, ಈ ಮೊತ್ತದಲ್ಲಿ ಅಸಲು ಮೊತ್ತವು 439.03 ಕೋಟಿ ರೂ. ಇದೆ. ಅಲ್ಲದೆ, 262.68 ಕೋಟಿ ರೂ. ಕೇವಲ ಬಾಕಿ ಇರುವ ಬಡ್ಡಿ ಮೊತ್ತವಾಗಿದೆ.
ಸರ್ಕಾರದ ಅನುಮತಿ
ಗ್ರಾಹಕರಿಂದ ನೀರಿನ ಬಿಲ್​ನ ಬಾಕಿ ಮೊತ್ತವನ್ನು ಸಂಗ್ರಹಿಸುವ ದೃಷ್ಟಿಯಿಂದ ಬಡ್ಡಿ ಮೊತ್ತವನ್ನು ಮನ್ನಾ ಮಾಡಿ, ಅಸಲು ಮಾತ್ರ ಪಡೆದುಕೊಳ್ಳಲು ಜಲಮಂಡಳಿ ತೀರ್ಮಾನಿಸಿದೆ. ಸದರಿ ಯೋಜನೆ ಜಾರಿಗೆ ತರಲು ಜಲಮಂಡಳಿ ಮಾ. 18ರಂದು ನಡೆದ ಸಭೆಯಲ್ಲಿ ಸರ್ಕಾರದ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಿತ್ತು. ನವೆಂಬರ್​ನಲ್ಲಿ ಈ ಯೋಜನೆಗೆ ಸರ್ಕಾರ ಅನುಮೋದನೆ ಲಭಿಸಿದೆ.

ಏಕಕಾಲಿಕ ಸೆಟ್ಲ್​ಮೆಂಟ್​ ಯೋಜನೆಯನ್ನು ಹೊಸ ವರ್ಷದ ಆರಂಭದಿಂದಲೇ ಶುರು ಮಾಡಲು ಸಿದ್ಧತೆ ನಡೆಸುತ್ತಿದ್ದೇವೆ. ಗ್ರಾಹಕರಿಗೆ ಈ ಯೋಜನೆ ಅನುಕೂಲವಾಗಲಿದ್ದು, ಯೋಜನೆಯನ್ನು ಸುಲಭದಲ್ಲಿ ಗ್ರಾಹಕರಿಗೆ ತಲುಪವಂತೆ ಮಾಡುವ ನಿಟ್ಟಿನಲ್ಲಿ ನೂತನ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ. ಅದಕ್ಕಾಗಿ ಆ್ಯಪ್​ ಒಂದನ್ನು ತರುವ ಮೂಲಕ ಗ್ರಾಹಕರಿಗೆ ಬಾಕಿ ಇರುವ ಬಿಲ್​ ಪಾವತಿಯು ತ್ವರಿತ ಹಾಗೂ ಸುಲಭದಲ್ಲಿ ನಡೆಯಲಿದೆ. ದಂಡ, ಇತರೆ ಶುಲ್ಕಗಳು ಸಂಪೂರ್ಣವಾಗುವುದರಿಂದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಲಭಿಸಲಿದೆ.

ಲೆಕ್ಕ ಚುಕ್ತಾ ಮಾಡಿ
ನೀರು ಮೂಲಭೂತ ಅಗತ್ಯವಾಗಿರುವ ಕಾರಣ ಸಂಪರ್ಕ ಕಡಿತಗೊಳಿಸುವುದು ಕಷ್ಟ. ಸಾರ್ವಜನಿಕರಿಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ನೀರಿನ ಸರಬರಾಜನ್ನು ಸ್ಥಗಿತಗೊಳಿಸಲಾಗಲಿಲ್ಲ. ಇದನ್ನೇ ಕೆಲವು ಸಂಸ್ಥೆಗಳು ದುರುಪಯೋಗ ಮಾಡಿಕೊಂಡು ನಿರಂತರವಾಗಿ ಬಾಕಿ ಉಳಿಸಿಕೊಂಡಿವೆ. ಆದರೆ, ಈ ಆರ್​ ಮೂಲಕ ಬಾಕಿ ಮೊತ್ತವನ್ನು ಪಾವತಿಸಲು ಬಾಕಿ ಇರುವವರು 3 ತಿಂಗಳ ಒಳಗಾಗಿ ತಮ್ಮ ಲೆಕ್ಕ ಚುಕ್ತಾ ಮಾಡಬಹುದು. ಇದರಿಂದ ಜಲಮಂಡಳಿಯಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಕಡಿತವಾಗಲಿದೆ. ಆ್ಯಪ್​ ಮೂಲಕ ಅಸಲು ಸಂಗ್ರಹಣೆಗೆ ಜಲಮಂಡಳಿ ಸಿದ್ಧತೆ ನಡೆಸುತ್ತಿದ್ದು, ಸುಲಭದಲ್ಲಿ ಸೇವೆ ಲಭಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಅಂಕಿಅಂಶಗಳು

* ಜಲಮಂಡಳಿ ಒಟ್ಟು ಸಂಪರ್ಕ: 10.15 ಲಕ್ಷ
* ತಿಂಗಳ ಸಂಗ್ರಹ: 120ರಿಂದ130 ಕೋಟಿ ರೂ.
* ವಾರ್ಷಿಕ ಆದಾಯ: 1,489 ಕೋಟಿ ರೂ.
* ನೀರಿನ ಬಿಲ್​ ಬಾಕಿ ಪಾವತಿ ಮೊತ್ತ: 701 ಕೋಟಿ ರೂ.
* ಬಾಕಿ ಮೊತ್ತದಲ್ಲಿನ ಅಸಲು: 439.03 ಕೋಟಿ ರೂ.
* ಬಡ್ಡಿ ಮತ್ತು ದಂಡ: 262.6 ಕೋಟಿ ರೂ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net