ಬೆಂಗಳೂರು ನಗರದ ಸ್ಥಳೀಯ ಆಡಳಿತ ಚುನಾಯಿತ ಸದಸ್ಯರಿಲ್ಲದೆ ಐದೂವರೆ ವರ್ಷ ಕಳೆದಿದೆ. ಬಿಬಿಎಂಪಿಯಿಂದ ಜಿಬಿಎಗೆ ಬದಲಾವಣೆಗೊಂಡು ಚುನಾವಣೆ ನಡೆಸುವ ಕಸರಸ್ತು ನಡೆದಿದೆ. ಆದರೆ, ಸುಪ್ರೀಂಕೋರ್ಟ್ ಆದೇಶಿಸಿರುವಂತೆ ಮುಂಬರುವ ಜೂನ್ ತಿಂಗಳಾಂತ್ಯದ ವೇಳೆಗೆ ಎಲೆಕ್ಷನ್ ನಡೆಯುವುದೇ ಎಂಬ ಅನುಮಾನ ಎದ್ದಿದೆ. ಈ ಪ್ರಶ್ನೆ ಏಳಲು ಸರ್ಕಾರವೇ ಕಾರಣ ಎನ್ನಬಹುದು. ಚುನಾವನೆ ಹೊಸ್ತಿಲಿನಲ್ಲಿ ಜನಪ್ರಿಯ ಯೋಜನೆಗಳ ಜತೆಗೆ ಹೆಚ್ಚಿನ ಅನುದಾನವನ್ನು ಬಜೆಟ್‌ನಲ್ಲಿ ನಿಗದಿ ಮಾಡುವುದು ಆಡಳಿತ ಪಕ್ಷವೊಂದರ ತಂತ್ರಗಾರಿಕೆ ಆಗಿರುತ್ತದೆ. ಆದರೆ, ಸಿಎಂ ಸಿದ್ದರಾಮಯ್ಯ ಅವರ ಈಗಿನ ಆಯವ್ಯಯದಲ್ಲಿ ಚುನಾವಣೆಗೆ ಸಂಬಂಧಿಸಿ ಅಧಿಕ ಮೊತ್ತ ಅನುದಾನ ಅಥವಾ ಕಾರ್ಯಕ್ರಮಗಳು ಸೇರಿಲ್ಲ. ಅಂದರೆ, ಇನ್ನು 3 ತಿಂಗಳೊಳಗೆ ಎಲೆಕ್ಷನ್ ಎದುರಿಸುವ ಮಾತುಗಳು ಕೃತಿರೂಪಕ್ಕೆ ಇಳಿಸುವುದು ಕಷ್ಟ. ಸದ್ಯ ಪಂಚ ಪಾಲಿಕೆಗಳಲ್ಲಿನ ವಾರ್ಡ್ ವಿಂಗಡಣೆ ಪೂರ್ಣಗೊಂಡು ವಾರ್ಡ್‌ವಾರು ಮೀಸಲಿನ ಕರಡು ಬಿಡುಗಡೆಯಾಗಿದೆ. ಆದರೆ, ಈವರೆಗೂ ಅಂತಿಮ ಅಧಿಸೂಚನೆ ಹೊರಡಿಸಿಲ್ಲ. ಕಳೆದ ಫೆಬ್ರವರಿ ಅಂತ್ಯದಲ್ಲೇ ಸುಪ್ರೀಂಕೋರ್ಟ್‌ಗೆ ಮೀಸಲು ಪಟ್ಟಿ ಸಲ್ಲಿಸಬೇಕಿದ್ದರೂ, ಆ ಕೆಲಸವನ್ನು ಸರ್ಕಾರ (ನಗರಾಭಿವೃದ್ಧಿ ಇಲಾಖೆ) ಮಾಡಿಲ್ಲ. ಮುಖ್ಯವಾಗಿ ಆಯವ್ಯಯದಲ್ಲಿ ಬೆಂಗಳೂರಿಗೆ ದೊಡ್ಡ ಮೊತ್ತವನ್ನು ನಿಗದಿ ಮಾಡದಿರುವುದು ಎಲೆಕ್ಷನ್ ಜೂನ್ ಬದಲು ಮುಂಬರುವ ಅಕ್ಟೋಬರ್ ಅಥವಾ ಇನ್ನೂ ಸ್ವಲ್ಪ ದಿನಗಳ ಕಾಲ ಮುಂದಕ್ಕೆ ಹೋಗುವ ಕುರುಹು ಕಾಣುತ್ತಿವೆ.