ಸಣ್ಣ ಕೈಗಾರಿಕೆಗಳೇ ಅಭಿವೃದ್ಧಿಯ ನೈಜ ಚಾಲಕಶಕ್ತಿ

small-industries
small-industries
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅಭಿಮತ
  • 3 ದಿನಗಳ ಗ್ಲೋಬಲ್ ಎಂಎಸ್‌ಎಂಇ ಕಾನ್‌ಕ್ಲೇವ್‌ಗೆ ಚಾಲನೆ
ಬೆಂಗಳೂರು: ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸುವ ಜತೆಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‌ಎಂಇ) ಅಭಿವೃದ್ಧಿಯ ನಿಜವಾದ ಚಾಲಕಶಕ್ತಿಯಾಗಿ ಹೊರಹೊಮ್ಮಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅಭಿಪ್ರಾಯಪಟ್ಟರು.
ನಗರದ ಅರಮನೆ ಮೈದಾನದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್​​ಕೆಸಿಸಿಐ) ಶುಕ್ರವಾರ ಆಯೋಜಿಸಿದ್ದ ಗ್ಲೋಬಲ್ ಎಂಎಸ್‌ಎಂಇ ಕಾನ್‌ಕ್ಲೇವ್ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಜಾಗತಿಕ ಆರ್ಥಿಕತೆ, ತಂತ್ರಜ್ಞಾನ ಹಾಗೂ ಬದಲಾಗುತ್ತಿರುವ ಸರಬರಾಜು ಸರಪಳಿಗಳ ಪ್ರಭಾವದಿಂದ ವೇಗವಾಗಿ ರೂಪಾಂತರಗೊಳ್ಳುತ್ತಿರುವ ವೇಳೆ ಎಂಎಸ್‌ಎಂಇಗಳು ಚುರುಕಾದ ಹಾಗೂ ಸ್ಪರ್ಧಾತ್ಮಕ ಆರ್ಥಿಕ ವ್ಯವಸ್ಥೆ ನಿರ್ಮಿಸಲು ಮಹತ್ವದ ಪಾತ್ರ ವಹಿಸಿವೆ. ಜತೆಗೆ ವಿಶ್ವದಾದ್ಯಂತ ವ್ಯಾಪಾರ ವಲಯಗಳು ತಮ್ಮ ಉತ್ಪಾದನಾ ಜಾಲವನ್ನು ಪುನರ್‌ಕಲ್ಪನೆ ಮಾಡುತ್ತಿವೆ. ಡಿಜಿಟಲ್ ವಾಣಿಜ್ಯವು ಹೊಸ ಮಾರುಕಟ್ಟೆಗಳ ಬಾಗಿಲು ತೆರೆಯುತ್ತಿದ್ದು, ಇವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಉದ್ಯಮಿಗಳಿಗೆ ಕಿವಿಮಾತು ಹೇಳಿದರು.

ನಾವೀನ್ಯತೆ ಅಳವಡಿಸಿಕೊಳ್ಳಲು ಮುಂದಾಗಿ:

ರಾಜ್ಯ ಸರ್ಕಾರವು ಎಂಎಸ್‌ಎಂಇ ಕ್ಷೇತ್ರಕ್ಕೆ ಬಲವಾದ ಮತ್ತು ಅನುಕೂಲಕರ ಪರಿಸರವನ್ನು ನಿರ್ಮಿಸಲು ಬದ್ಧವಾಗಿದೆ. ಪಾರದರ್ಶಕ, ತಂತ್ರಜ್ಞಾನ ಆಧಾರಿತ ಮತ್ತು ಹೂಡಿಕೆದಾರರಿಗೆ ಸ್ನೇಹಿಯಾದ ವ್ಯವಹಾರ ವಾತಾವರಣವನ್ನು ನಿರ್ಮಿಸಲು ಗಮನ ಹರಿಸಿದ್ದೇವೆ. ಎಂಎಸ್‌ಎಂಇಗಳ ಭವಿಷ್ಯದ ಸ್ಪರ್ಧಾತ್ಮಕತೆ ತಂತ್ರಜ್ಞಾನ ಮತ್ತು ನಾವೀನ್ಯತೆ ಅಳವಡಿಸಿಕೊಳ್ಳುವುದರ ಮೇಲೆ ಅವಲಂಬಿತವಾಗಿದೆ. ಹಾಗಾಗಿ ಡಿಜಿಟಲ್ ವೇದಿಕೆ, ಕೃತಕ ಬುದ್ಧಿಮತ್ತೆ, ಇಂಡಸ್ಟ್ರಿ 4.0 ಪರಿಹಾರಗಳು ಹಾಗೂ ಇ-ಕಾಮರ್ಸ್ ಪರಿಸರ ವ್ಯವಸ್ಥೆ ಅಳವಡಿಸಿಕೊಳ್ಳಲು ಉದ್ಯಮಗಳನ್ನು ಉತ್ತೇಜಿಸಲಾಗುತ್ತಿದೆ ಎಂದರು.
ಗಮನ ಸೆಳೆದ ವಸ್ತುಪ್ರದರ್ಶನ:
ಮೂರು ದಿನಗಳ ಕಾನ್‌ಕ್ಲೇವ್ ನೇಪಥ್ಯದಲ್ಲಿ ಕೈಗಾರಿಕೆ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಬದಲಾವಣೆ ಹಾಗೂ ಹೊಸ ಆವಿಷ್ಕಾರದ ಬಗ್ಗೆ ವಸ್ತುಪ್ರದರ್ಶನ ವೀಕ್ಷಕರ ಗಮನ ಸೆಳೆಯಿತು. ಮೇಳವು ಭಾನುವಾರ ತೆರೆ ಕಾಣಲಿದೆ.
ಕಾರ್ಯಕ್ರಮದಲ್ಲಿ ಬ್ರಿಟಿಷ್ ಉಪ ಹೈ ಕಮಿಷನರ್ ಒವೆನ್ ರೀಚರ್ಡ್ಸ್, ಭಾರತ-ಯುಎಸ್‌ನ ರಾಯಭಾರಿ ಕಾಲ್ವಿನ್ ಯಿ, ಎಸ್‌ಬಿಐನ ಮುಖ್ಯ ಪ್ರಧಾನ ವ್ಯವಸ್ಥಾಪಕಿ ಜೂಹಿ ಸ್ಮಿತಾ ಸಿನ್ಹಾ, ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ, ಪದಾಧಿಕಾರಿಗಳಾದ ಟಿ.ಸಾಯಿರಾಂ ಪ್ರಸಾದ್, ಬಿ.ಪಿ. ಶಶಿಧರ್, ಎಂ.ಸಿ. ದಿನೇಶ್ ಸೇರಿ ಹಲವಾರು ಗಣ್ಯರು ಹಾಜರಿದ್ದರು.
"

ಸಣ್ಣ ಕೈಗಾರಿಕಾ ವಲಯವು ಪರಸ್ಪರ ಸಂಪರ್ಕ ಸಾಧಿಸಲು, ಸಹಕಾರ ಬೆಳೆಸಿಕೊಳ್ಳಲು ಮತ್ತು ಹೊಸ ಅವಕಾಶಗಳನ್ನು ಅನ್ವೇಷಿಸಲು ಈ ಕಾನ್‌ಕ್ಲೇವ್ ಸಹಕಾರಿಯಾಗಿದೆ. ಪ್ರಸ್ತುತ ವಿಜ್ಞಾನ ತಂತ್ರಜ್ಞಾನ ಅತಿವೇಗವಾಗಿ ಬೆಳವಣಿಗೆಯಾಗುತ್ತಿದ್ದು, ಕೈಗಾರಿಕೆಗಳ ಬೆಳವಣಿಗೆಗೆ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮುನ್ನಡೆಯಬೇಕಿದೆ.

- ಉಮಾ ರೆಡ್ಡಿ, ಎಫ್​​​ಕೆಸಿಸಿಐ ಅಧ್ಯಕ್ಷೆ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net