ಬೆಂಗಳೂರು: ರಾಜಧಾನಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಕರಡು ಪ್ರತಿ ಪ್ರಕಟವಾದ ಬೆನ್ನಲ್ಲೇ, ಮ್ಯಾಪಿಂಗ್ ಆಗದ ಹಾಗೂ ಅಸ್ಪಷ್ಟ ಹೆಸರು, ವಿಳಾಸವುಳ್ಳ ವೋಟರ್ಸ್‌ಗೆ ಗುರುವಾರದಿಂದ (ಆ.27) ನೋಟಿಸ್ ನೀಡುವ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.
ಬೆಂಗಳೂರು ಮಹಾನಗರದಲ್ಲಿ 56.99 ಲಕ್ಷ ಮತದಾರರ ಹೆಸರನ್ನು ಕರಡು ಪಟ್ಟಿಗೆ ಸೇರಿಸಲಾಗಿದೆ. ಆದರೂ, 2002ರ ಎಸ್‌ಐಆರ್ ವೇಳೆ ಇದ್ದ ಮತಪಟ್ಟಿಗೆ ತಾಳೆ ಆಗದವು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇನ್ನೂ ಹಲವರ ಹೆಸರು ಮತ್ತು ವಿಳಾಸದಲ್ಲಿ ಅಸ್ಪಷ್ಟತೆ ಇದೆ. ಈ ಎರಡೂ ಕಾರಣದಿಂದಾಗಿ 24.06 ಲಕ್ಷ ಮತದಾರರಿಗೆ ನೋಟಿಸ್ ನೀಡಿ ಅವರಿಂದ ಮಾಹಿತಿ ಕೋರಲಾಗುತ್ತದೆ. ಈ ಪ್ರಕ್ರಿಯೆಯನ್ನು ಮತದಾರರ ನೋಂದಣಾಧಿಕಾರಿ/ಸಹಾಯಕ ಮತದಾರರ ನೋಂದಣಾಧಿಕಾರಿ/ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವ ಅವಕಾಶ ಇರಲಿದೆ.
ಈ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ ಬಳಿಕ ಪ್ರಕರಣವಾರು ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ. ವಿಚಾರಣೆಗಾಗಿ ಮತದಾರರು ನಿಗದಿತ ದಿನಾಂಕ ಹಾಗೂ ಸಮಯಕ್ಕೆ ಹಾಜರಾಗಿ ಅಗತ್ಯ ದಾಖಲೆಗಳನ್ನು ಒದಗಿಸಿದರೆ ಮತಪಟ್ಟಿಯಲ್ಲಿ ಹೆಸರು ಮುಂದುವರಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.
ಮತದಾರರ ಹಾಜರಾತಿ ಕಡ್ಡಾಯ:
ಕರಡು ಪಟ್ಟಿಯಲ್ಲಿರುವ 24.06 ಲಕ್ಷ ಮತದಾರರಿಗೆ ಖುದ್ದಾಗಿ (ವಾಸದ ಸ್ಥಳ) ನೋಟಿಸ್ ತಲುಪಿಸಲಾಗುತ್ತದೆ. ನೋಟಿಸ್‌ಅನ್ನು ಮತದಾರ ಅಥವಾ ಅವರ ಕುಟುಂಬದವರು ಸ್ವೀಕರಿಸಬಹುದಾಗಿದ್ದು, ಇದರ ಖಾತ್ರಿಗೆ ಸಹಿ ಪಡೆಯಲಾಗುತ್ತದೆ. ವಿಚಾರಣೆ ಸಮಯದಲ್ಲಿ ಮತದಾರರ ಹಾಜರಾತಿ ಕಡ್ಡಾಯವಾಗಿದ್ದು, ಹಾಜರಾತಿ ವಹಿಯಲ್ಲಿ ಸಹಿ ಹಾಕಬೇಕಾಗುತ್ತದೆ. ಈ ಪ್ರಕ್ರಿಯೆ ಬಳಿಕ ಮತದಾರರ ನೋಂದಣಾಧಿಕಾರಿಯು ಕರಡುಪಟ್ಟಿಯಲ್ಲಿನ ಹೆಸರನ್ನು ದೃಢೀಕರಿಸಲಿದ್ದಾರೆ.
ನಗರ ಜಿಲ್ಲೆಯಲ್ಲಿ ಹೆಚ್ಚು ಪ್ರಕರಣ:
ಬೆಂಗಳೂರು ಮಹಾನಗರದ 4 ಅಪರ ಜಿಲ್ಲೆಗಳಲ್ಲಿ 24.06 ಲಕ್ಷ ಪ್ರಕರಣಗಳಿಗೆ ಸಂಬಂಧಿಸಿ ನೋಟಿಸ್ ನೀಡಲಾಗುತ್ತಿದೆ. ಈ ಪೈಕಿ ಮ್ಯಾಪಿಂಗ್ ಆಗದ 17.81 ಲಕ್ಷ ಪ್ರಕರಣ ಹಾಗೂ ಹೆಸರು/ವಿಳಾಸದ ಅಸ್ಪಷ್ಟವಿರುವ 6.24 ಲಕ್ಷ ಪ್ರಕರಣಗಳಿವೆ. ಇವುಗಳಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅತಿಹೆಚ್ಚು ಪ್ರಕರಣಗಳಿವೆ.
ಮ್ಯಾಪಿಂಗ್ ಆಗದ, ಅಸ್ಪಷ್ಟ ಪ್ರಕರಣಗಳ ವಿವರ:
ಅಪರ ಜಿಲ್ಲೆ
ಹಕ್ಕು/ಆಕ್ಷೇಪಣೆ ಸಲ್ಲಿಕೆಗೆ 11ರಲ್ಲಿ 1 ದಾಖಲೆ ಅಗತ್ಯ:
ಕರಡು ಮತಪಟ್ಟಿಗೆ ಸಂಬಂಧಿಸಿದ ಸಾರ್ವಜನಿಕರು ತಮ್ಮ ಹಕ್ಕು ಹಾಗೂ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಸೆ.23ರವರೆಗೆ ಗಡುವು ಇದ್ದು, ನಮೂನೆ 6ರೊಂದಿಗೆ ಘೋಷಣಾ ಪತ್ರವನ್ನೂ ನೀಡಬೇಕಾಗುತ್ತದೆ. ಜತೆಗೆ ಚುನಾವಣಾ ಆಯೋಗ ನಿಗದಿಪಡಿಸಿರುವ 11 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಿ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದಾಗಿದೆ.
* ಕೇಂದ್ರ/ರಾಜ್ಯ/ಸಾರ್ವಜನಿಕ ಕ್ಷೇತ್ರದ ಸಂಸ್ಥೆ (ಪಿಎಸ್‌ಯು) ನೌಕರರು/ಪಿಂಚಣಿದಾರರಿಗೆ ನೀಡಿರುವ ಗುರುತಿನ ಚೀಟಿ.
* 1987ರ ಜು.1ರ ಮುನ್ನ ಪಿಎಸ್‌ಯು, ಎಲ್‌ಐಸಿ, ಅಂಚೆಕಚೇರಿ, ಬ್ಯಾಂಕ್, ಸ್ಥಳೀಯ ಸಂಸ್ಥೆಗಳು ವಿತರಿಸಿರುವ ಗುರುತಿನ ಚೀಟಿ ಅಥವಾ ಪ್ರಮಾಣಪತ್ರ.
* ಸಕ್ಷಮ ಪ್ರಾಧಿಕಾರ ವಿತರಿಸಿರುವ ಜನ್ಮ ಪ್ರಮಾಣಪತ್ರ.
* ಪಾಸ್‌ಪೋರ್ಟ್
* ಎಸ್‌ಎಸ್‌ಎಲ್‌ಸಿ, ಮಾನ್ಯತೆ ಪಡೆದ ಮಂಡಳಿ/ವಿವಿಗಳು ನೀಡಿರುವ ಪ್ರಮಾಣಪತ್ರ.
* ರಾಜ್ಯದ ಸಕ್ಷಮ ಪ್ರಾಧಿಕಾರ ವಿತರಿಸಿರುವ ಕಾಯಂ ವಾಸಸ್ಥಳದ ಪ್ರಮಾಣಪತ್ರ.
* ಅರಣ್ಯ ಹಕ್ಕು ಪ್ರಮಾಣಪತ್ರ.
* ಒಬಿಸಿ/ಎಸ್‌ಸಿ/ಎಸ್‌ಟಿ ಅಥವಾ ಯಾವುದೇ ಜಾತಿ ಪ್ರಮಾಣಪತ್ರ.
* ರಾಷ್ಟ್ರೀಯ ಪೌರತ್ವ ನೋಂದಣಿ ಪತ್ರ (ಅಗತ್ಯವಿದ್ದಲ್ಲಿ)
* ರಾಜ್ಯ/ಸ್ಥಳೀಯ ಸಂಸ್ಥೆಗಳು ಸಿದ್ಧಪಡಿಸಿರುವ ಕುಟುಂಬಗಳ ರಿಜಿಸ್ಟ್ರಿ.
* ಸರ್ಕಾರದಿಂದ ಮಂಜೂರಾದ ಯಾವುದೇ ಮನೆ, ಜಮೀನಿನ ಪ್ರಮಾಣಪತ್ರ.
ಆನ್‌ಲೈನ್‌ನಲ್ಲಿ ಹೆಸರು ಸೇರ್ಪಡೆಗೆ ಬೇಕಿರುವ ದಾಖಲೆ:
ಮತದಾರರು ಚುನಾವಣಾ ಆಯೋಗದ ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ತಮ್ಮ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ವಯಸ್ಸಿನ ದೃಢೀಕರಣ, ವಿಳಾಸ, ಇತ್ತೀಚಿನ ಪಾಸ್‌ಪೋಟ್ ಅಳತೆಯ ವರ್ಣ ಛಾಯಾಚಿತ್ರ ಹಾಗೂ ಹಿಂದಿನ ಎಸ್‌ಐಆರ್ ಘೋಷಣಾ ನಮೂನೆಯನ್ನು ಸಲ್ಲಿಸಬೇಕಾಗುತ್ತದೆ. ಹಿಂದಿನ ಎಸ್‌ಐಆರ್ ಮಾಹಿತಿ ನೀಡದಿದ್ದಲ್ಲಿ ಅರ್ಜಿ ಪರಿಶೀಲನೆ ವೇಳೆ ಸೂಚಿಸುವ ಇತರ ದಾಖಲೆಯನ್ನು ಒದಗಿಸಬೇಕಾಗುತ್ತದೆ.