ಎಸ್​​ಐಆರ್​: ಮತದಾರರ ಜಾಗೃತಿ, ಚುನಾವಣೆ ಸಿದ್ಧತೆಗೆ ಸಮನ್ವಯ ಸಭೆ

coordination-meeting
coordination-meeting
Published on

ಪ್ರಮುಖ ಮುಖ್ಯಾಂಶಗಳು

  • ಮಾರ್ಗಸೂಚಿ ಅನ್ವಯವೇ ಸ್ವೀಪ್ ಚಟುವಟಿಕೆಗೆ ಸೂಚನೆ
  • ಉತ್ತರ ನಗರ ಪಾಲಿಕೆಯಲ್ಲಿ ಎಸ್‌ಐಆರ್‌ಗೆ ಅಂತಿಮ ಸಿದ್ಧತೆ
ಬೆಂಗಳೂರು: ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಹಾಗೂ ಚುನಾವಣಾ ಸಿದ್ಧತೆ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಗುರುವಾರ ಸಮನ್ವಯ ಸಭೆ ನಡೆಯಿತು.
ಸಭೆಯಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿ ಅನುಸಾರವೇ ಎಲ್ಲ ಸ್ವೀಪ್ ಚಟುವಟಿಕೆಗಳನ್ನು ಆಯೋಜಿಸಬೇಕು. ಶಾಲಾ-ಕಾಲೇಜುಗಳು ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕೈಗೊಳ್ಳುವ ಪ್ರತಿಯೊಂದು ಕಾರ್ಯಕ್ರಮ ಹಾಗೂ ಚಟುವಟಿಕೆಯ ಸಮಗ್ರ ದಾಖಲಾತಿ ಕಡ್ಡಾಯವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯವನ್ನು ಶೇ.100ರಷ್ಟು ಯಶಸ್ವಿಯಾಗಿ ಪೂರ್ಣಗೊಳಿಸುವ ಗುರಿಯೊಂದಿಗೆ ಕೆಲಸ ಮಾಡಬೇಕು. ಮತದಾರರ ನೋಂದಣಿ, ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಇತರ ಚುನಾವಣಾ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ನಿಗದಿತ ನಮೂನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಎಲ್ಲ ಅರ್ಹ ನಾಗರಿಕರನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಒಳಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಧಿಕಾರಿಗಳು ತಿಳಿವಳಿಕೆ ನೀಡಿದರು.

ಮಾರ್ಗಸೂಚಿ ಪಾಲಿಸಲು ಸೂಚನೆ:

ಸಭೆಯಲ್ಲಿ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ್ ಅವರು ವೀಡಿಯೊ ಸಂವಾದದ ಮೂಲಕ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ, ಚುನಾವಣಾ ಆಯೋಗದ ಮಾರ್ಗಸೂಚಿ ಅನುಸಾರ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ನಿರ್ದೇಶಿಸಿದರು.
ಈ ವೇಳೆ ಉತ್ತರ ಪಾಲಿಕೆಯ ಅಪರ ಆಯುಕ್ತರಾದ (ಕಂದಾಯ) ಪಲ್ಲವಿ, ಜಂಟಿ ಆಯುಕ್ತ ಮೊಹಮ್ಮದ್ ನಯೀಮ್ ಮೊಮಿನ್, ಉಪ ಆಯುಕ್ತರಾದ ಸೋಮಶೇಖರ್, ಅಮರೇಗೌಡ ಮಾಲಿಪಾಟೀಲ್, ಮಂಗಳಗೌರಿ, ಚುನಾವಣಾ ವಿಭಾಗದ ಅಧಿಕಾರಿಗಳು ಹಾಗೂ ಜಿಲ್ಲಾ ಸಂಯೋಜಕರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net