ಬೆಂಗಳೂರಿನಲ್ಲಿ ಬುಧವಾರ ಸಂಪನ್ನಗೊಂಡ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ 14ನೇ ಸಮ್ಮೇಳನದ ಸಮಾರೋಪದಲ್ಲಿ ಕೆಎಲ್ಇ ಸಂಸ್ಥೆಯ ಅಧ್ಯಕ್ಷ ಪ್ರಭಾಕರ್ ಕೋರೆ ಹಾಗೂ ಇತರ ಸಾಧಕರನ್ನು ಸನ್ಮಾನಿಸಲಾಯಿತು. ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು, ಸಾಹಿತಿ ಗೋ.ರು. ಚನ್ನಬಸಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಡಾ. ಸಿ. ಸೋಮಶೇಖರ ಇದ್ದರು.
ಬಸವಾದಿ ಶರಣರ ವೈಚಾರಿಕ ಕ್ರಾಂತಿಯ ಫಲಶ್ರುತಿಯೇ ವಚನ ಸಾಹಿತ್ಯವಾಗಿದ್ದು, ಇದು ಸಾರ್ವಕಾಲಿಕ ಸತ್ಯ ಹಾಗೂ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುವ ಜೀವಂತ ಸಾಹಿತ್ಯವಾಗಿದೆ. ಇದನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ 14ನೇ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.
ಮನುಷ್ಯರು ತಮ್ಮ ತಂದೆ-&ತಾಯಿಯನ್ನಾಗಲಿ ಅಥವಾ ತಾವು ಹುಟ್ಟಿದ ಸಮಾಜವನ್ನಾಗಲಿ ಅರ್ಜಿ ಹಾಕಿ ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಅಂತಹ ಪ್ರಕ್ರಿಯೆ ಇರುತ್ತಿದ್ದರೆ, ಜಗತ್ತಿನ ಬಹುತೇಕ ಜನ ಶರಣ ಸಮಾಜದಲ್ಲೇ ಹುಟ್ಟಲು ಬಯಸುತ್ತಿದ್ದರು. ಶರಣ ಸಮಾಜದಲ್ಲಿ ಜನಿಸಿರುವುದು ನಮ್ಮೆಲ್ಲರ ಪುಣ್ಯ ಹಾಗೂ ಅದೃಷ್ಟ ಎಂದರು.
ಶರಣ ಸಾಹಿತ್ಯದಲ್ಲಿ ಯಾವುದೇ ಕಾಲ್ಪನಿಕ ಕಥೆಗಳಿಲ್ಲ. ಶರಣ ಸಾಹಿತ್ಯದಲ್ಲಿ ಬದುಕಿನ ಸತ್ಯ ಇದೆ. ಆಧುನಿಕ ಕಲಿಯುಗದಲ್ಲಿ ಸತ್ಯ ಪರೀಕ್ಷೆಗೆ ಒಳಪಡುತ್ತದೆ. ಅದೇ ರೀತಿ ಶರಣ ಸಾಹಿತ್ಯ ಪರೀಕ್ಷೆಗೆ ಒಳಪಟ್ಟು ಪರಿಶುದ್ದವಾದ ಶಿಲೆಯಾಗಿ ನಿಂತಿದೆ. ಇದರಲ್ಲಿರುವ ಉದಾಹರಣೆಗಳು ಬದುಕಿನ ಸತ್ಯಗಳಾಗಿವೆ ಎಂದು ಹೇಳಿದರು.
ರಾಜಕಾರಣಿಗಳ ಹೇಳಿಕೆಗೆ ತಲೆ ಕೆಡಿಸಿಕೊಳ್ಳಬೇಡಿ:
ರಾಜಕಾರಣಿಗಳ ಹೇಳಿಕೆಗೆ ತಲೆಕೆಡಿಸಿಕೊಳ್ಳಬೇಡಿ, ತಮ್ಮ ಲಾಭಕ್ಕಾಗಿ ಅವರು ಸಮಾಜವನ್ನು ಒಡೆಯುವ ಅಥವಾ ಕೂಡಿಸುವ ಕೆಲಸಗಳನ್ನು ಮಾಡುತ್ತಿರುತ್ತಾರೆ. ಅವರು ತಮಗೆ ಸರಿ ಎನಿಸಿದ್ದನ್ನು ಬೇಡಿಕೆ ಇಡುತ್ತಾರೆ. ಆದ್ದರಿಂದ ಸಾರ್ವಜನಿಕರು ರಾಜಕಾರಣಿಗಳ ಹೇಳಿಕೆಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಶರಣರ ವೈಚಾರಿಕತೆಯು ಸಮಾಜವನ್ನು ಒಗ್ಗೂಡಿಸುವ ಶಕ್ತಿಯನ್ನು ಹೊಂದಿದೆ ಎಂದು ಹೇಳಿದರು.
ಬಿಎಸ್ವೈ ಕೊಡುಗೆ ಶ್ಲಾಘನೆ:
ಬಸವಕಲ್ಯಾಣದಲ್ಲಿ ಅನುಭವ ಮಂಟಪದ ನಿಮಾರ್ಣಕ್ಕೆ ದೃಢ ತೀಮಾರ್ನ ಕೈಗೊಂಡು, ಹಣಕಾಸಿನ ನೆರವು ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾರ್ಯವನ್ನು ಬೊಮ್ಮಾಯಿ ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಗೋ.ರು. ಚನ್ನಬಸಪ್ಪ, ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ಸಾನಿಧ್ಯ ವಹಿಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ನಾಡೋಜ ಎಸ್. ಷಡಕ್ಷರಿ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ. ಸೋಮಶೇಖರ ಸೇರಿ ಹಲವು ಪ್ರಮುಖರು ಹಾಜರಿದ್ದರು.
ಸಿ.ಸೋಮಶೇಖರ್ ಸೇವೆಗೆ ಪ್ರಶಂಸೆ
ಐಎಎಸ್ ಅಧಿಕಾರಿಯಾಗಿದ್ದರೂ ಶರಣ ತತ್ವವನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡು, ತಮ್ಮ ಸೇವಾವಧಿಯಲ್ಲೂ ಯಾವುದೇ ಅಂಜಿಕೆಯಿಲ್ಲದೆ ಶರಣ ಸಾಹಿತ್ಯದ ಉಳಿವಿಗಾಗಿ ಶ್ರಮಿಸಿದ ಡಾ. ಸಿ.ಸೋಮಶೇಖರ್ ಅವರ ಕಾರ್ಯವೈಖರಿಯನ್ನು ಬೊಮ್ಮಾಯಿ ಅವರು ಕೊಂಡಾಡಿದರು. ಬೆಂಗಳೂರಿನಲ್ಲಿ ಈ ಸಮ್ಮೇಳನ ಇಷ್ಟು ಯಶಸ್ವಿಯಾಗಲು ಅವರ ಶ್ರಮವೇ ಕಾರಣ ಎಂದರು. ಸಮ್ಮೇಳನದಲ್ಲಿ ಗಣ್ಯರ ಚಿಂತನೆಗಳಿಂದ ಮೂಡಿಬಂದ ಎಲ್ಲ್ಲ ಪ್ರಮುಖ ವಿಚಾರಗಳನ್ನು ಮುದ್ರಿಸಿ ಸಾರ್ವಜನಿಕರಿಗೆ ಹಂಚುವ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಭಾಕರ್ ಕೋರೆ ಸಹಿತ ಗಣ್ಯರಿಗೆ ಸನ್ಮಾನ
ಕೆಎಲ್ಇ ಸಂಸ್ಥೆಯ ಅಧ್ಯಕ್ಷ ಪ್ರಭಾಕರ್ ಕೋರೆ, ಇಸ್ರೊ ಮಾಜಿ ಅಧ್ಯಕ್ಷ ಕಿರಣ ಕುಮಾರ್, ನಿಮಾರ್ಪಕ ಬಸಂತಕುಮಾರ ಪಾಟೀಲ್, ನಿವೃತ್ತ ಡಿಜಿಪಿ ರೇವಣಸಿದ್ದಯ್ಯ, ನಿವೃತ್ತ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ, ಶರಣ ಸಂಸತಿ ಪ್ರಸಾರದ ಮುಖ್ಯಸ್ಥ ಡಾ. ಅರವಿಂದ ಜತ್ತಿ ಸೇರಿ ಹಲವು ಸಾಧಕರನ್ನು ಸನ್ಮಾನಿಸಲಾಯಿತು.