ಪ್ರತಿ ಕೇಂದ್ರದ ಆರೈಕೆದಾರರಿಗೆ ಪ್ರತಿದಿನ 370 ರೂ. ಕೂಲಿ ಪಾವತಿ
ವಿನಾಯಿತಿ ನೀಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ವಾಪಸ್
ಕಾಯಂ ಸ್ವರೂಪದ ಕೆಲಸಕ್ಕೆ ನರೇಗಾ ಹಣ ಬಳಕೆ ಕಾಯ್ದೆಬಾಹಿರ
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಕೂಸಿನ ಮನೆ’ಗೆ ನರೇಗಾ ಅನುದಾನ ಬಳಕೆಗೆ ಕೇಂದ್ರ ಸರ್ಕಾರ ತಡೆಯೊಡ್ಡಿ, ಆಘಾತ ನೀಡಿದೆ. Koosina Mane
ಬಹುಪಾಲು ‘ಕೂಸಿನ ಮನೆ’ಗಳು ಹಣದ ಅಪೌಷ್ಟಿಕತೆಯಿಂದ ಬಳಲುತ್ತಿವೆ. ಇದೀಗ ಕೇಂದ್ರ ಸರ್ಕಾರ ವಿಧಿಸಿದ ನಿರ್ಬಂಧದಿಂದ ಈ ಮನೆಗಳು ಮತ್ತಷ್ಟು ಸೊರಗಿ ಮೂಲೆಗುಂಪಾಗುವ ಆತಂಕವಿದೆ.
ನರೇಗಾ ಯೋಜನೆಯಡಿ ಕ್ರಿಯಾಶೀಲ ಉದ್ಯೋಗ ಚೀಟಿ ಹೊಂದಿರುವ ಮಹಿಳೆಯರು ‘ಕೂಸಿನ ಮನೆ’ಗಳಲ್ಲಿ ಆರೈಕೆದಾರರಾಗಿ ಕೆಲಸ ನಿರ್ವಹಿಸಲು ಅವಕಾಶವಿತ್ತು.
ಅಂತಹ ಮಹಿಳೆಯರಿಗೆ ಆಯಾ ಗ್ರಾಮ ಪಂಚಾಯಿತಿಯಲ್ಲಿ ಚಾಲ್ತಿಯಲ್ಲಿರುವ ಸಾಮೂಹಿಕ ಕಾಮಗಾರಿಗಳಲ್ಲಿ ಪ್ರತ್ಯೇಕ ಅವಧಿಗೆ ಸಾಂಕೇತಿಕ ಮಸ್ಟರ್ ರೋಲ್ (ಎನ್‌ಎಂಆರ್) ಸೃಜಿಸಿ, ರಾಷ್ಟ್ರೀಯ ಮೊಬೈಲ್ ಮೇಲ್ವಿಚಾರಣಾ ವ್ಯವಸ್ಥೆ (ಎನ್‌ಎಂಎಂಎಸ್) ಗೆ ವಿನಾಯಿತಿ ನೀಡಲಾಗಿತ್ತು.
ಅಂದರೆ ಪ್ರತಿ ಮೂರು ತಿಂಗಳಿಗೆ ತಲಾ ಇಬ್ಬರು ತರಬೇತಿ ಪಡೆದ ಕೂಲಿಕಾರ ಮಹಿಳೆಯರು ‘ಕೂಸಿನ ಮನೆ‘ಗಳಲ್ಲಿ ಮಕ್ಕಳ ಆರೈಕೆ ಕೆಲಸ ಮಾಡುತ್ತಿದ್ದರು. 100 ದಿನಗಳ ಬಳಿಕ ಮತ್ತೆ ಇಬ್ಬರು ಆರೈಕೆದಾರರ ನೇಮಕವಾಗುತ್ತಿತ್ತು.
ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಎಂಟು ಜನ ಆರೈಕೆದಾರರ ಕೆಲಸ ಮಾಡುತ್ತಿದ್ದು, ನರೇಗಾದಡಿ ಪ್ರತಿ ದಿನದ ಕೂಲಿ ಮೊತ್ತ 370 ರೂ.ಗಳನ್ನು ಆರೈಕೆದಾರರಿಗೆ ಪಾವತಿಸಲಾಗುತ್ತಿದೆ. 2023-24ರಲ್ಲಿ ಈ ಯೋಜನೆ ಶುರುವಾದಾಗಿನಿಂದ ನರೇಗಾ ಅನುದಾನವನ್ನು ಬಳಸಿಕೊಳ್ಳಲಾಗುತ್ತಿದೆ.
ಸೂಚನೆ ಪಾಲನೆ
ಕೂಸಿನ ಮನೆ- ಒಂದು ಸಾಂಸ್ಥಿಕ ಮತ್ತು ಶಾಶ್ವತವಾದ ಮಕ್ಕಳ ಆರೈಕೆ ಕೇಂದ್ರವಾಗಿದೆ. ಶಾಶ್ವತ ಮಕ್ಕಳ ಆರೈಕೆ ಕೇಂದ್ರಗಳಿಗೆ ಸಿಬ್ಬಂದಿ ಮತ್ತು ಅವರ ವೇತನವನ್ನು ನರೇಗಾ ಯೋಜನೆಯಡಿ ಬಳಸಲು ನರೇಗಾ ಕಾಯ್ದೆಯಡಿ ಬಳಕೆಗೆ ಅವಕಾಶವಿಲ್ಲವೆಂದು ಕೇಂದ್ರ ಸೂಚಿಸಿದೆ.
ಎನ್‌ಎಂಆರ್ ಸೃಜಿಸಿ, ಎನ್‌ಎಂಎಂಎಸ್‌ಗೆ ವಿನಾಯಿತಿ ನೀಡಲು ಬರುವುದಿಲ್ಲವೆಂದು ಕೇಂದ್ರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ತಿಳಿಸಿ ಪತ್ರ ಬರೆದಿದೆ. ತಕ್ಷಣ ರಾಜ್ಯ ಸರ್ಕಾರ ಜಾಗೃತಗೊಂಡು ಪರ್ಯಾಯ ವ್ಯವಸ್ಥೆಗೆ ಮುಂದಾಗಿದೆ.
ಅರೈಕೆದಾರರಿಗೆ ನರೇಗಾದಡಿ ಕೂಲಿ ಮೊತ್ತ ಪಾವತಿಗೆ ಕೇಂದ್ರ ಸರ್ಕಾರ ಒಪ್ಪಿಲ್ಲ. ಆರೈಕೆದಾರರಿಗೆ ಎನ್‌ಎಂಎಂಸ್ ನಿಂದ ನೀಡಿದ್ದ ವಿನಾಯಿತಿಯನ್ನು ವಾಪಸ್ ಪಡೆದು ಗ್ರಾಮೀಣಾಭಿವೃದ್ಧಿ ಆಯುಕ್ತ ಆದೇಶಿಸಿದ್ದಾರೆ.