ಜಿಬಿಎ ವ್ಯಾಪ್ತಿಯಲ್ಲಿರುವ 28 ವಿಧಾನಸಭಾ ಕ್ಷೇತ್ರಗಳಲ್ಲಿ 12 ಕ್ಷೇತ್ರಗಳು ಪಾಲಿಕೆ ಗಡಿ ಭಾಗದಲ್ಲಿದ್ದು, ಜನಸಂಖ್ಯೆ ಹಾಗೂ ವಿಸ್ತೀರ್ಣದಲ್ಲಿ ದೊಡ್ಡದಾಗಿವೆ. ಈ ಕ್ಷೇತ್ರಗಳಲ್ಲೇ ಮೀಸಲು ನಿಗದಿ ಪ್ರತಿಶತ 100ರಷ್ಟು ನಿಗದಿಯಾಗಿಲ್ಲ. ಅದರಲ್ಲೂ ಸಚಿವರು ಪ್ರತಿನಿಧಿಸುವ ಬ್ಯಾಟರಾಯನಪುರ, ಹೆಬ್ಬಾಳ ಹಾಗೂ ಬಿಟಿಎಂ ಲೇಔಟ್ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಕಡಿಮೆ ಸ್ಥಾನಗಳನ್ನು ನಿಗದಿ ಮಾಡಲಾಗಿದೆ. ಹಾಗಾಗಿ ಇಂತಹ ಕ್ಷೇತ್ರಗಳಲ್ಲೇ ಮಹಿಳೆಯರಿಗೆ ಖೋತಾ ಆಗಿರುವ ಸ್ಥಾನಗಳನ್ನು ಮರುನಿಗದಿ ಮಾಡಲಾಗುತ್ತದೆ. ಉತ್ತರ, ದಕ್ಷಿಣ, ಪೂರ್ವ ಪಾಲಿಕೆಗಳಲ್ಲಿ ತಲಾ 2 ಸ್ಥಾನ ಮತ್ತು ಪಶ್ಚಿಮ, ಕೇಂದ್ರ ಪಾಲಿಕೆಗಳಲ್ಲಿ ತಲಾ ಒಂದು ಸ್ಥಾನ ಸೇರಿ ಒಟ್ಟು 8 ಸ್ಥಾನಗಳು ಮಹಿಳೆಯರಿಗೆ ಮೀಸಲಿಡಲಾಗುತ್ತದೆ. ಆದರೆ, ಕಡಿಮೆಯಾಗಿದ್ದ 9ರಲ್ಲಿ ಒಂದು ಸ್ಥಾನವನ್ನು ತಾಂತ್ರಿಕ ಕಾರಣಕ್ಕಾಗಿ ಮೀಸಲಿಡಲು ಸಾಧ್ಯವಾಗದು. ಹಾಗಾಗಿ ಸ್ತ್ರೀಯರಿಗೆ ಮೀಸಲಾಗಿರುವ 176 ಸ್ಥಾನಗಳ ಸಂಖ್ಯೆಯು 185ರ ಬದಲು 184ಕ್ಕೆ ಮರುನಿಗದಿಯಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.