ಫುಟ್​​ಪಾತ್​ ಒತ್ತುವರಿ ತೆರವು; ಜನರ ಒಲವು

footpath-encroachment
footpath-encroachment
Published on

ಪ್ರಮುಖ ಮುಖ್ಯಾಂಶಗಳು

  • ಪಾಲಿಕೆಗಳ ನಡೆಗೆ ಬೀದಿಬದಿ ವ್ಯಾಪಾರಿಗಳ ಭಾರಿ ವಿರೋಧ
  • ರಾಜಧಾನಿಯಲ್ಲಿ ಬೃಹತ್​ ಕಾರ್ಯಾಚರಣೆಗೆ ಚಾಲನೆ
  • ಸ್ವಯಂಪ್ರೇರಿತವಾಗಿ ತೆರವುಗೊಳಿಸಲು ಜಿಬಿಎ, ಸಚಿವರ ಮನವಿ
ಬೆಂಗಳೂರು: ರಾಜಧಾನಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಪಾಲಿಕೆ ಕೈಗೆತ್ತಿಕೊಂಡಿರುವ ಪಾದಚಾರಿ ಮಾರ್ಗಗಳಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆಗೆ ಬುಧವಾರ ಚಾಲನೆ ದೊರೆತಿದೆ. ಪಂಚ ಪಾಲಿಕೆಗಳಲ್ಲಿ ಏಕಕಾಲದಲ್ಲಿ ಆರಂಭವಾಗಿರುವ ಈ ತೆರವು ಕಾರ್ಯವನ್ನು ನಾಗರಿಕರು ಸ್ವಾಗತಿಸಿದ್ದರೆ, ಬೀದಿಬದಿ ವ್ಯಾಪಾರಿಗಳು ಹಾಗೂ ವರ್ತಕ ವೃಂದ ಭಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಡೆಗೆದಾರರಿಗೆ ಗುಣಮಟ್ಟದ ಹಾಗೂ ಪಾದಚಾರಿ ಸ್ನೇಹಿ ಫುಟ್‌ಪಾತ್ ಸೌಲಭ್ಯ ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ, ಜಿಬಿಎ ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರ ನೇತೃತ್ವದಲ್ಲಿ ಆರಂಭವಾಗಿರುವ ‘ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನ’ ಕೈಗೊಂಡಿದೆ. ಮೊದಲ ದಿನವೇ ಐದೂ ಪಾಲಿಕೆಗಳ ವ್ಯಾಪ್ತಿಯಲ್ಲಿ 75ಕ್ಕೂ ಹೆಚ್ಚು ಕಡೆಗಳಲ್ಲಿ ನಡೆದ ತೆರವು ಕಾರ್ಯಾಚರಣೆಯಲ್ಲಿ 50 ಕಿ.ಮೀ. ಉದ್ದ ಫುಟ್‌ಪಾತ್‌ಅನ್ನು ಒತ್ತುವರಿಮುಕ್ತ ಮಾಡಲಾಗಿದೆ.
ಪಂಚ ಪಾಲಿಕೆಗಳು ಪ್ರತ್ಯೇಕವಾಗಿಯೇ ತಮ್ಮ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ತೆರವುಗೊಳಿಸುವಿಕೆ ಕಾರ್ಯವನ್ನು ಭರ್ಜರಿಯಾಗಿ ನಡೆಸಿದವು. ಹತ್ತಾರು ಜೆಸಿಬಿಗಳು, ಹಲವು ಟ್ರ್ಯಾಕ್ಟರ್ ಸಹಿತ ಇತರ ವಾಹನಗಳಲ್ಲಿ ಫುಟ್‌ಪಾತ್ ಮೇಲಿದ್ದ ತ್ಯಾಜ್ಯ ಅವಶೇಷಗಳನ್ನು ಬೇರೆಡೆಗೆ ಸಾಗಿಸಲಾಯಿತು. ಇದೇ ವೇಳೆ ಅನಧಿಕೃತವಾಗಿ ನಿರ್ಮಿಸಿದ್ದ ನಾಮಫಲಕಗಳು, ಅಂಗಡಿಗಳ ಮೇಲ್ಭಾಗದಲ್ಲಿ ಅಳವಡಿಸಿರುವ ಶೀಟ್‌ಗಳು, ತಳ್ಳು ಗಾಡಿಗಳು, ಶಾಶ್ವತ ಪೆಟ್ಟಿಗೆಗಳು, ಅನಧಿಕೃತ ಕಬ್ಬಿಣದ ರಚನೆಗಳು ಸೇರಿ ನಾಗರಿಕರ ಓಡಾಟಕ್ಕೆ ಅಡ್ಡಿಯಾಗಿರುವ ಎಲ್ಲ ರೀತಿಯ ಅತಿಕ್ರಮಣವನ್ನು ತೆರವುಗೊಳಿಸಲಾಗಿದೆ.

ವ್ಯಾಪಾರಿಗಳಿಗೆ ಭಾರಿ ವಿರೋಧ:

ಒತ್ತುವರಿ ಕಾರ್ಯಾಚರಣೆ ವೇಳೆ ಫುಟ್‌ಪಾತ್ ಮೇಲಿದ್ದ ಅನಧಿಕೃತ ಭಾಗಗಳನ್ನು ತೆರವು ಮಾಡಲಾಯಿತು. ಜತೆಗೆ ಅಂಗಡಿಗಳ ಮುಂದೆ ನಿರ್ಮಿಸಿದ್ದ ಅನಧಿಕೃತ ಭಾಗಗಳನ್ನು ಪಾಲಿಕೆ ಸಿಬ್ಬಂದಿ ಒಡೆದುಹಾಕಿದರು. ಜತೆಗೆ ಪಾದಚಾರಿ ಮಾರ್ಗಗಳ ಮೇಲಿದ್ದ ನೂರಾರು ಸಂಖ್ಯೆಯ ತಳ್ಳುಗಾಡಿಗಳು, ಕಿರಾಣಿ ಅಂಗಡಿಗಳ ಪರಿಕರಗಳು ಸೇರಿ ಇತರ ಸಾಮಗ್ರಿಯನ್ನು ಜಪ್ತಿ ಮಾಡಿ ಪಾಲಿಕೆ ಸಿಬ್ಬಂದಿ ವಾಹನಗಳಲ್ಲಿ ಹೊರಗೆ ಸಾಗಿಸಿದರು. ದೊಡ್ಡ ಸಂಖ್ಯೆಯಲ್ಲಿ ಬೀದಿ ವ್ಯಾಪಾರಿಗಳನ್ನು ಬೇರೆಡೆಗೆ ಕಳುಹಿಸಲಾಯಿತು. ಇದಕ್ಕೆ ವರ್ತಕರು ಹಾಗೂ ಫುಟ್‌ಪಾತ್ ವ್ಯಾಪಾರಿಗಳು ತೀವ್ರವಾಗಿ ವಿರೋಧಿಸಿದರು. ಏಕಾಏಕಿ ತೆರವು ಕಾರ್ಯಾಚರಣೆ ಮಾಡುವುದು ಸರಿಯಲ್ಲ. ಕಾಲಾವಕಾಶ ನೀಡಿ ತೆರವು ಮಾಡಿದ್ದರೆ ನಾವು ಆಕ್ಷೇಪಿಸುತ್ತಿರಲಿಲ್ಲ. ಈಗ ನಮ್ಮ ವ್ಯಾಪಾರ ವಸ್ತುಗಳನ್ನು ಪಾಲಿಕೆಯವರು ಎತ್ತಿಕೊಂಡು ಹೋಗಿದ್ದಾರೆ. ಈಗ ನಾವು ವ್ಯಾಪಾರ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವುದು ಹೇಗೆ ಎಂದು ಹಲವು ವರ್ತಕರು ಅಲವತ್ತುಕೊಂಡರು.
ಇದರ ಮಧ್ಯೆಯೂ ಪಾಲಿಕೆಗಳ ಅಧಿಕಾರಿಗಳು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು. ಅನಧಿಕೃತ ಭಾಗಗಳನ್ನು ಮಾತ್ರ ತೆರವು ಮಾಡುತ್ತಿದ್ದೇವೆ. ಅನುಮತಿ ಪಡೆದವರಿಗೆ ಯಾವ ತೊಂದರೆ ಮಾಡಿಲ್ಲ. ಮುಂದೆಯೂ ಮಾಡಿಲ್ಲ. ಪಾದಚಾರಿಗಳಿಗೆ ಸುಗಮವಾಗಿ ನಡೆದುಹೋಗಲು ಅವಕಾಶ ಕಲ್ಪಿಸಲಷ್ಟೇ ನಮ್ಮ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪ್ರತಿಕ್ರಿಯಿಸಿದರು. ಇದರ ಹೊರತಾಗಿಯೂ ಕೆಲವೆಡೆ ಅಧಿಕಾರಿಗಳು ಹಾಗೂ ವರ್ತಕರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪೊಲೀಸ್ ಭದ್ರತೆ ಇದ್ದ ಕಾರಣ ಹೆಚ್ಚಿನ ಗಲಾಟೆ ಆಗದೆ ವ್ಯಾಪಾರಿಗಳನ್ನು ಸಮಾಧಾನಪಡಿಸುವ ಯತ್ನ ನಡೆಯಿತು.

ಮರುಕಟ್ಟೆಯಲ್ಲಿ ಜಾಗೃತಿ, ದಂಡದ ಎಚ್ಚರಿಕೆ:

ಮಡಿವಾಳ ಮಾರುಕಟ್ಟೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ನಿಗದಿಪಡಿಸಿರುವ ಜಾಗದಲ್ಲೇ ಇಟ್ಟುಕೊಳ್ಳಬೇಕು, ಕಸ ಅಲ್ಲೆ ಇಟ್ಟುಕೊಂಡು ವಾಹನ ಬಂದಾಗ ತ್ಯಾಜ್ಯವನ್ನು ಕೊಡಬೇಕು. ಮುಂದಿನ ಶುಕ್ರವಾರ ತೆರವು ಕಾರ್ಯದ ಜತೆಗೆ ದಂಡ ವಿಧಿಸಲಾಗುವುದು. ಮತ್ತೆ ಇದೇ ರೀತಿ ತಪ್ಪು ಮುಂದುವರಿದರೆ 5000 ರೂ. ದಂಡ ವಿಧಿಸುವ ಜತೆಗೆ ಫುಟ್‌ಪಾತ್ ಮೇಲಿಟ್ಟಿರುವ ವಸ್ತುಗಳನ್ನು ಜಪ್ತಿ ಮಾಡಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ರವಾನಿಸಿದರು.

ಎಲ್ಲೆಲ್ಲಿ ತೆರವು ಕಾರ್ಯಾಚರಣೆ?:

ಪೂರ್ವ ಪಾಲಿಕೆ: ಮಾರತಹಳ್ಳಿ, ಇಬ್ಲೂರು ಜಂಕ್ಷನ್, ಹೋಪ್ ಫಾರ್ಮ್‌ನಿಂದ ವರ್ತೂರು, ಐಟಿಪಿಎಲ್ ಮುಖ್ಯರಸ್ತೆ, ಟಿನ್ ಫ್ಯಾಕ್ಟರಿ, ರಾಮಮೂರ್ತಿನಗರ ಮುಖ್ಯರಸ್ತೆ, ಕುಂದಲಹಳ್ಳಿ, ಹೂಡಿ ರಸ್ತೆ.
ಕೇಂದ್ರ ಪಾಲಿಕೆ: ಟ್ರಿನಿಟಿ ಜಂಕ್ಷನ್‌ನಿಂದ ಎಂ.ಜಿ. ಉದ್ಯಾನದವರೆಗೆ, 100 ಅಡಿ ಇಂದಿರಾನಗರದಿಂದ ದೊಮ್ಮಲೂರು ಮೇಲ್ಸೇತುವೆಯವರೆಗೆ, ಅಶೋಕ ಪಿಲ್ಲರ್‌ನಿಂದ ಮಾಧವನ್ ಪಾರ್ಕ್‌ವರೆಗೆ, ಆರ್.ವಿ. ರಸ್ತೆ ಟೀಚರ್ಸ್ ಕಾಲೇಜಿನಿಂದ ಸೌತ್ ಎಂಡ್ ಸರ್ಕಲ್ ವರೆಗೆ, ಓಕಳೀಪುರಂ, ಮೆಜೆಸಿಕ್ ಪ್ರದೇಶ.
ದಕ್ಷಿಣ ಪಾಲಿಕೆ: ಉತ್ತರಹಳ್ಳಿ, 80 ಅಡಿ ರಸ್ತೆ ಆರ್.ವಿ. ಇನ್‌ಸ್ಟಿಟ್ಯೂಟ್, ಕೊತ್ತನೂರು, ಪದ್ಮನಾಭನಗರದ ಗುರುರಾಜ ಲೇಔಟ್, ಜಯನಗರ ಆರ್.ವಿ.ರಸ್ತೆ, ಜೆ.ಪಿ.ನಗರ, ಎಚ್‌ಎಸ್‌ಆರ್ ಲೇಔಟ್, ಕೋರಮಂಗಲ, ಬಿಟಿಎಂ ಬಡಾವಣೆಯ 2ನೇ ಹಂತ.
ಉತ್ತರ ಪಾಲಿಕೆ: ಯಲಹಂಕ ಉಪನಗರದ ಸಂದೀಪ್ ಉನ್ನಿಕೃಷ್ಣನ್ ರಸ್ತೆ, ಮುನಿರೆಡ್ಡಿಪಾಳ್ಯ ರಸ್ತೆ, ವಿದ್ಯಾರಣ್ಯಪುರ ಮುಖ್ಯರಸ್ತೆ, ಸಹಕಾರನಗರ (ರೈಲ್ವೆ ಸಮಾನಾಂತರ ರಸ್ತೆ), ಕ್ಲಾರ್ಕ್ ರಸ್ತೆ, ಬಾಣಸವಾಡಿ ಮುಖ್ಯರಸ್ತೆ.
ಪಶ್ಚಿಮ ಪಾಲಿಕೆ: ತುಮಕೂರು ಮುಖ್ಯರಸ್ತೆ, ಮೈಸೂರು ರಸ್ತೆ, ಮಾಗಡಿ ಮುಖ್ಯರಸ್ತೆ, ಎಂಇಐ ರಸ್ತೆ, ದಾಸರಹಳ್ಳಿ (ಲೇಕ್ ರಸ್ತೆ), ಚಂದ್ರ ಲೇಔಟ್, ಗೋವಿಂದರಾಜನಗರ, ಪಾಲಿಕೆ ಬಜಾರ್, ಸಂಪಿಗೆ ರಸ್ತೆ, ರಾಜಾಜಿನಗರ, ಡಿವಿಜಿ ರಸ್ತೆ, ಬುಲ್ ಟೆಂಪಲ್ ರಸ್ತೆ, ಕತ್ರಿಗುಪ್ಪೆ ರಸ್ತೆ, ಭುವನೇಶ್ವರಿನಗರದ ರಸ್ತೆ.

ನಡಿಗೆದಾರರಿಗೆ ಅಡ್ಡಿಯಾಗುವೆಡೆ ಮಾತ್ರ ತೆರವು:

ಐದೂ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ಪಾದಾಚಾರಿ ಮಾರ್ಗದ ಒತ್ತುವರಿ ತೆರವು ಕಾಯಾಚರಣೆ ಮುಂದುವರಿಯಲಿದೆ. ನಡೆಗೆದಾರರಿಗೆ ತೊಮದರೆಯಾಗುವ ಕಡೆಗಳಲ್ಲಿ ಮಾತ್ರ ತೆರವು ಮಾಡಲಾಗುತ್ತಿದೆ. ಪಾಲಿಕೆಯಿಂದ ಅನುಮತಿ ಪಡೆದಿರುವ ಮಳಿಗೆಗಳು ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ತೊಂದರೆ ನೀಡುವುದಿಲ್ಲ ಎಂದು ಸಚಿವ ಕೃಷ್ಣಬೈರೇಗೌಡ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುಮಾರು 15 ಸಾವಿರ ಕಿ.ಮೀ. ಉದ್ದ ಪಾದಚಾರಿ ಮಾರ್ಗವಿದ್ದು, ಈಗ 2 ಸಾವಿರ ಕಿ.ಮೀ. ಮಾತ್ರ ಒತ್ತುವರಿ ತೆರವು ಮಾಡಲಾಗುತ್ತಿದೆ. ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಓಡಾಟ ಮಾಡುವ ಸ್ಥಳಗಳನ್ನು ಒತ್ತುವರಿಮುಕ್ತ ಮಾಡುವ ಗುರಿ ಹೊಂದಲಾಗಿದೆ. ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈ ಕ್ರಮ ಆಗುತ್ತಿದೆಯೇ ವಿನಾ ಬೇರೆ ಉದ್ದೇಶ ಇಲ್ಲ. ಜಿಬಿಎ ಕೈಗೊಂಡಿರುವ ಅಭಿಯಾನಕ್ಕೆ ನಾಗರಿಕರು ಸೇರಿ ಎಲ್ಲರೂ ಸಹಕರಿಸಬೇಕು ಎಂದು ಸಚಿವರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net