ಮೆಟ್ರೋ ಮಾರ್ಗಕ್ಕೆ ಕೇಂದ್ರ ಸರ್ಕಾರ "ರೆಡ್​' ಸಿಗ್ನಲ್​!|metro

ಮೆಟ್ರೋ
ಮೆಟ್ರೋ
Published on

ಪ್ರಮುಖ ಮುಖ್ಯಾಂಶಗಳು

  • ಹಂತ3ಎ ವಿಸ್ತರಣೆಯ ಭಾಗ ಅನುಮೋದನೆ ಸ್ಥಗಿತ
  • ಮರುಪರಿಶೀಲಿಸಿ ಹೊಸ ಪ್ರಸ್ತಾವ ಸಲ್ಲಿಕೆಗೆ ಸೂಚನೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಮ್ಮ ಮೆಟ್ರೋದ ಹಂತ3ಎ ವಿಸ್ತರಣೆಯ ಭಾಗವಾದ ಹೆಬ್ಬಾಳ& ಸರ್ಜಾಪುರ ಮೆಟ್ರೋ ಕೆಂಪು ಮಾರ್ಗ ಯೋಜನೆಗೆ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ಅನುಮೋದನೆ ಸ್ಥಗಿತಗೊಳಿಸಿ, ಯೋಜನೆಯನ್ನು ಮರುಪರಿಶೀಲಿಸುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತಕ್ಕೆ (ಬಿಎಂಆರ್​ಸಿಎಲ್​) ತಿಳಿಸಿದೆ.
ರಾಜಧಾನಿಯಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಜಟಾಪಟಿ ನಡೆಯುತ್ತಿರುವ ಬೆನ್ನಲ್ಲೇ ಕೆಂಪು ಮಾರ್ಗದಲ್ಲಿ ಮೆಟ್ರೋ ಮಾರ್ಗದ ಜತೆಗೆ ಡಬಲ್​ ಡೆಕ್ಕರ್​  ಯೋಜನೆಗೆ ಕೇಂದ್ರ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ. ಮೋಹನ್​ "ಎಕ್ಸ್​' ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಹೆಬ್ಬಾಳದಿಂದ ಸರ್ಜಾಪುರದ ವರೆಗೆ ಮೆಟ್ರೋ ಮಾರ್ಗವನ್ನು ಡಬಲ್​ ಡೆಕ್ಕರ್​ ಮೇಲ್ಸೇತುವೆ ಜತೆ ಸಂಯೋಜಿತ ಯೋಜನೆಯಾಗಿ ರೂಪಿಸಲು ರಾಜ್ಯ ಸರ್ಕಾರ ಯೋಜಿಸಿತ್ತು. ಆದರೆ, ಈ ವ್ಯವಸ್ಥೆಯಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಿಸಿದ್ದು, ಆಯ್ದ ಜಂಕ್ಷನ್​ಗಳಲ್ಲಿ ಮಾತ್ರ ಡಬಲ್​ ಡೆಕ್ಕರ್​ಗೆ ಅವಕಾಶ ನೀಡಬಹುದು ಎಂದು ಹೇಳಿದೆ.
28,405 ಕೋಟಿ ಡಿಪಿಆರ್​ಗೆ ಬ್ರೇಕ್​:: ಯೋಜನೆಗೆ ಸುಮಾರು 28,405 ಕೋಟಿ ರೂ. ವೆಚ್ಚದ ಯೋಜನಾ ವರದಿಯನ್ನು (ಡಿಪಿಆರ್​) ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿತ್ತು. ಆದರೆ, ಯೋಜನಾ ವೆಚ್ಚ ಹೆಚ್ಚಾಗಿದೆ ಮತ್ತು ಡಬಲ್​ ಡೆಕ್ಕರ್​ ಸಂಯೋಜನೆಯಿಂದ ಯೋಜನೆಯ ಉದ್ದೇಶಕ್ಕೆ ಧಕ್ಕೆ ಉಂಟಾಗಬಹುದು ಎಂಬ ನಿಟ್ಟಿನಲ್ಲಿ ಆ ಡಿಪಿಆರ್​ ಅನ್ನು ಹಿಂದಿರುಗಿಸಲಾಗಿತ್ತು. ಇದೀಗ ಮತ್ತೊಮ್ಮೆ ಅದೇ ನಡೆ ಅನುಸರಿಸಿದ್ದು, ಯೋಜನೆಯನ್ನು ಸಂಪೂರ್ಣವಾಗಿ ಮರುಪರಿಶೀಲಿಸಿ ಹೊಸ ಪ್ರಸ್ತಾವ ಸಲ್ಲಿಸುವಂತೆ ಸೂಚಿಸಿದೆ.
2031ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ
ನಮ್ಮ ಮೆಟ್ರೋದ ಕೆಂಪು ಮಾರ್ಗ ಬೆಂಗಳೂರು ಉತ್ತರ ಭಾಗವನ್ನು ದಕ್ಷಿಣ-ಪೂರ್ವ ಭಾಗದೊಂದಿಗೆ ನೇರವಾಗಿ ಸಂಪರ್ಕಿಸುವ ಪ್ರಮುಖ ಕಾರಿಡಾರ್​ ಆಗಿದೆ. ಯೋಜನೆ ಅನುಷ್ಠಾನಗೊಂಡರೆ ಐಟಿ ಕಾರಿಡಾರ್​, ಟೆಕ್​ ಪಾರ್ಕ್​ಗಳು ಮತ್ತು ವಸತಿ ಪ್ರದೇಶಗಳಿಗೆ ಭಾರೀ ಅನುಕೂಲವಾಗಲಿದೆ ಎಂಬ ನಿರೀಕ್ಷೆ ಹೊಂದಲಾಗಿದೆ. ಈ ಯೋಜನೆ 2031ರಲ್ಲಿ ಪೂರ್ಣಗೊಳ್ಳುವ ನಿರೀೆ ಇದ್ದು, ಸರ್ಜಾಪುರ& ಹೆಬ್ಬಾಳವರೆಗೆ 36.59 ಕಿಮೀ ಉದ್ದ ಹೊಂದಿರಲಿದೆ. ಹೆಬ್ಬಾಳ, ಗಂಗಾನಗರ, ಪಶುವೈದ್ಯಕಿಯ ಕಾಲೇಜು, ಮೇಖ್ರಿ ಸರ್ಕಲ್​, ಗಾಲ್ಫ್​ ಕ್ಲಬ್​, ಪ್ಯಾಲೇಸ್​ ಗುಟ್ಟಹಳ್ಳಿ, ಬಸವೇಶ್ವರ ವೃತ್ತ, ಕೆ.ಆರ್​. ಸರ್ಕಲ್​, ಪುರಭವನ, ಶಾಂತಿನಗರ, ನಿಮ್ಹಾನ್ಸ್​, ಡೇರಿ ಸರ್ಕಲ್​, ಕೋರಮಂಗಲ 2ನೇ ಬ್ಲಾಕ್​, ಕೋರಮಂಗಲ 3ನೇ ಬ್ಲಾಕ್​, ಜಕ್ಕಸಂದ್ರ, ಅಗರ, ಇಬ್ಬಲೂರು, ಬೆಳ್ಳಂದೂರು ಗೇಟ್​, ಕೈಕೊಂಡೂರು, ದೊಡ್ಡಕನ್ನಳ್ಳಿ, ಕಾರ್ಮೆಲರಾಂ, ದೊಡ್ಡಕನ್ನಳ್ಳಿ, ಅಗ್ರಹಾರ ರಸ್ತೆ ಮತ್ತು ಸರ್ಜಾಪುರಗಳಲ್ಲಿ ನಿಲ್ದಾಣಗಳಿರಲಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net