ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಭಾನುವಾರ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಕಾರ್ಯಕ್ರಮ ನಡೆಯಿತು. ಈ ದಿನ ಒಟ್ಟು ಶೇ. 96.40 ಲಸಿಕೆ ಹಾಕಲಾಗಿದೆ.
ಜಿಬಿಎ ವ್ಯಾಪ್ತಿಯಲ್ಲಿ ಒಟ್ಟು ಲಸಿಕೆ ನೀಡಬೇಕಿದ್ದ ಮಕ್ಕಳ ಸಂಖ್ಯೆ- 11,47,872 ಇದ್ದು, ಅದರಲ್ಲಿ 11,06,535 ಮಕ್ಕಳಿಗೆ ಪೋಲಿಯೋ ಹನಿ ನೀಡಲಾಯಿತು.
ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕೆ ಹಾಕಲು ಗುರಿ ನಿಗದಿಪಡಿಸಿದ 5 ವರ್ಷದೊಳಗಿನ ಮಕ್ಕಳು 2,83,923 ಇದ್ದು, ಅದರಲ್ಲಿ 2,78,880 ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಒಟ್ಟಾರೆ ಈ ದಿನ ಶೇ.98.2 ಲಸಿಕೆ ಪೂರ್ಣಗೊಂಡಿದೆ.
ನಗರದಾದ್ಯಂತ ಸ್ಥಾಪಿಸಲಾಗಿದ್ದ ಲಸಿಕಾ ಕೇಂದ್ರಗಳು, ಸಂಚಾರಿ ತಂಡಗಳು ಹಾಗೂ ಟ್ರಾನ್ಸಿಟ್ ಪಾಯಿಂಟ್ಗಳ ಮೂಲಕ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಯಿತು.
ಪಾಲಿಕೆಯ ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯಕಿಯ ಸಿಬ್ಬಂದಿ ಹಾಗೂ ಸ್ವಯಂಸೇವಕರ ಸಹಕಾರದಿಂದ ಕಾರ್ಯಕ್ರಮ ಜರುಗಿತು.
ನಗರ ಪಾಲಿಕೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಕಾರ್ಯಕ್ರಮವನ್ನು ಜು.1ರ ವರೆಗೆ ಆಯೋಜಿಸಿರುವುದರ ಜತೆಗೆ ನಗರ ಪಾಲಿಕೆಯ ಯಾವುದೇ ಮಗು ಪೋಲಿಯೋ ಹನಿಯಿಂದ ವಂಚಿತವಾಗದಂತೆ ಕ್ರಮ ವಹಿಸುವ ಸಲುವಾಗಿ ಲಸಿಕಾ ಕೇಂದ್ರಕ್ಕೆ ಭೇಟಿ ನೀಡದ ಮಕ್ಕಳನ್ನು ಗುರುತಿಸಲು ಆರೋಗ್ಯ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಲಿದ್ದಾರೆ.
ಶೇ.100 ಲಸಿಕೆ ನೀಡುವ ಗುರಿ:
ನಿಗಧಿತ ಅವಧಿಯಲ್ಲಿ ಶೇ.100 ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಗುರಿಯನ್ನು ನಗರ ಪಾಲಿಕೆ ಹೊಂದಿದ್ದು, ಸಾರ್ವಜನಿಕರು ಸಿಬ್ಬಂದಿಯೊಂದಿಗೆ ಸಹಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಹಾಗೂ ಎಲ್ಲ ಮಕ್ಕಳನ್ನು ಪೋಲಿಯೋ ಮುಕ್ತರನ್ನಾಗಿಸಲು ಪಾಲಿಕೆಯೊಂದಿಗೆ ಕೈ ಜೋಡಿಸಬೇಕಾಗಿ ನಗರ ಪಾಲಿಕೆ ಆಯುಕ್ತ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.