ಮುಖ್ಯ ಆಯುಕ್ತರಿಂದ ಸಾರ್ವಜನಿಕ ಸಂಪರ್ಕ ಸಭೆ

publicrelationsmeeting
publicrelationsmeeting
Published on

ಪ್ರಮುಖ ಮುಖ್ಯಾಂಶಗಳು

  • ಮೊದಲ ಅಹವಾಲು ಆಲಿಕೆ ಇಂದು
  • ಕೇಂದ್ರ ಪಾಲಿಕೆಯಲ್ಲಿ ಆಯೋಜನೆ
ಬೆಂಗಳೂರು: ಪಂಚ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ನಾಗರಿಕರ ಅಹವಾಲು ಆಲಿಸಿ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರು ಮುಂದಿನ 2 ವಾರದಲ್ಲಿ ಸಾರ್ವಜನಿಕ ಸಂಪರ್ಕ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ವಾರದ ಮಂಗಳವಾರ ಹಾಗೂ ಗುರುವಾರದಂದು ಈ ಸಭೆಗಳು ನಡೆಯಲಿವೆ. ಆಯಾ ದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪಾಲಿಕೆ ಕಚೇರಿಗಳಿಗೆ ಭೇಟಿ ನೀಡಿ ಸ್ಥಳೀಯ ಮಟ್ಟದ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ನಂತರ ಮಧ್ಯಾಹ್ನ 2.30ರಿಂದ ಸಂಜೆ 5ರವರೆಗೆ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಜನರ ಅಹವಾಲು ಆಲಿಸಲಿದ್ದಾರೆ. ಈ ಹಿಂದೆ ನಿಕಟಪೂರ್ವ ಬಿಬಿಎಂಪಿಯಲ್ಲಿ ಮುಖ್ಯ ಆಯುಕ್ತರಾಗಿದ್ದ ತುಷಾರ್ ಗಿರಿನಾಥ್ ಅವರು ಕೈಗೊಂಡಿದ್ದ ವಲಯ ಮಟ್ಟದ ಅಹವಾಲು ಆಲಿಕೆ ಸಭೆ ಮಾದರಿಯಲ್ಲಿ ಹಾಲಿ ಚೀಫ್​​ ಕಮಿಷನರ್ ಜನರ ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ.

ಸ್ಥಳೀಯರಿಂದ ಅಹವಾಲು ಆಲಿಕೆ:

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಬರುವ ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ಪಾಲಿಕೆಗಳಲ್ಲೇ ಸಾರ್ವಜನಿಕರ ಅಹವಾಲು ಮತ್ತು ಮನವಿಗಳನ್ನು ನೇರವಾಗಿ ಸ್ವೀಕರಿಸಲು ಹಾಗೂ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ಸಾರ್ವಜನಿಕ ಸಂಪರ್ಕ ಸಭೆಗಳನ್ನು ಆಯೋಜಿಸಲಾಗಿದೆ.
ಈ ಸಭೆಗಳಲ್ಲಿ ನಾಗರಿಕರಿಂದ ರಸ್ತೆ, ಸ್ವಚ್ಛತೆ, ಒಳಚರಂಡಿ, ಮೂಲಸೌಕರ್ಯ ಸೇರಿ ಮತ್ತಿತರ ಅಹವಾಲುಗಳನ್ನು ಖುದ್ದಾಗಿ ಆಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ತ್ವರಿತ ಕ್ರಮ ಕೈಗೊಂಡು ಸಮಸ್ಯೆ ಇತ್ಯರ್ಥಪಡಿಸಲು ಸೂಚಿಸಲಾಗುತ್ತದೆ. ಸಾರ್ವಜನಿಕ ಸಂಪರ್ಕ ಸಭೆಯ ವೇಳೆ ಆಯಾ ಪಾಲಿಕೆಯ ಆಯುಕ್ತರು, ಅಭಿವೃದ್ಧಿ/ಕಂದಾಯ ಅಪರ ಆಯುಕ್ತರು, ಜಂಟಿ ಆಯುಕ್ತರು, ವಿವಿಧ ವಿಭಾಗಗಳ ಪ್ರಮುಖ ಅಧಿಕಾರಿಗಳು ಉಪಸ್ಥಿತರಿರುತ್ತಾರೆ.

ಕೇಂದ್ರ ಪಾಲಿಕೆಯಲ್ಲಿ ಮೊದಲ ಸಂಪರ್ಕ ಸಭೆ:

ಜಿಬಿಎ ಮುಖ್ಯ ಆಯುಕ್ತರು ಕೈಗೊಂಡಿರುವ ಕಾರ್ಪೋರೇಷನ್‌ವಾರು ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ಹಾಗೂ ಸಾರ್ವಜನಿಕರೊಂದಿಗೆ ಸಂಪರ್ಕ ಸಭೆ ಗುರುವಾರ (ಫೆ.26) ನಡೆಯಲಿದೆ. ನಗರದ ಎಂ.ಜಿ. ರಸ್ತೆಯಲ್ಲಿರುವ ಯುಟಿಲಿಟಿ ಬಿಲ್ಡಿಂಗ್‌ನ 10ನೇ ಮಹಡಿಯಲ್ಲಿರುವ ಕೇಂದ್ರ ಪಾಲಿಕೆ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಲಿದೆ. ನಾಗರಿಕರು, ಸಂಘ-ಸಂಸ್ಥೆಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ತಮ್ಮ ಅಹವಾಲು ಹಾಗೂ ಮನವಿಯೊಂದಿಗೆ ಸಭೆಗೆ ಹಾಜರಾಗಬಹುದು ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯ ಆಯುಕ್ತರ ಸಂಪರ್ಕ ಸಭೆಗಳ ವಿವರ:
ಪಾಲಿಕೆ ದಿನ/ವಾರ
ಕೇಂದ್ರ ಫೆ.26 (ಗುರು)
ಪೂರ್ವ ಮಾ.3 (ಮಂಗಳ)
ಪಶ್ಚಿಮ ಮಾ.5 (ಗುರು)
ಉತ್ತರ ಮಾ.10 (ಮಂಗಳ)
ದಕ್ಷಿಣ ಮಾ.12 (ಗುರು)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net