ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಿ : ನಂಜಾವಧೂತ ಶ್ರೀಗಳ ಸಲಹೆ/ drinking water
ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನದ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಶಾಖಾ ಮಠ ಉಲ್ಲಾಳದಲ್ಲಿ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ ಅವರು ಜಲ ಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಅವರೊಂದಿಗೆ ಕಾವೇರಿ ಹಾಗೂ ನೀರಾವರಿ ಯೋಜನೆಗಳ ಸಂಬಂಧ ಸಮಾಲೋಚನೆ ನಡೆಸಿದರು.
ಕ್ಷೇತ್ರದ ಉಲ್ಲಾಳ ಶಾಖಾ ಮಠಕ್ಕೆ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಭೇಟಿ ನೀಡಿದ್ದ ವೇಳೆ ಸಚಿವರೊಂದಿಗೆ ಕಾವೇರಿ ಹಾಗೂ ನೀರಾವರಿ ಯೋಜನೆಗಳ ಕುರಿತು ಸಮಾಲೋಚನೆ ನಡೆಸಿದರು.
ಈ ಬಾರಿ ಮುಂಗಾರು ಮಳೆಯ ಕೊರತೆಯಾಗಿದ್ದು ಕೃಷ್ಣರಾಜ ಸಾಗರ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣವು ಕಡಿಮೆಯಾಗಿದೆ. ಆದ್ದರಿಂದ ರಾಜಕೀಯ, ಇತರೆ ಒತ್ತಡಗಳಿಗೆ ಮಣಿಯದೆ ವಾಸ್ತವಂಶವನ್ನು ಮನವರಿಕೆ ಮಾಡಿಕೊಡಬೇಕು. ನಾಡಿನ ಜೀವನಾಡಿ ಕಾವೇರಿ ವಿಚಾರದಲ್ಲಿ ನಾಗರಿಕರು ಹಾಗೂ ರೈತರ ಹಿತಾಸಕ್ತಿಯನ್ನು ಕಾಪಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ . ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಿಕೊಡಿ ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಜಲ ಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ
200 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಮಹತ್ವಕಾಂಕ್ಷಿಯ ಮೇಕೆದಾಟು ಯೋಜನೆಗೆ
ಇದ್ದ ಅಡೆತಡೆಗಳು ಸದ್ಯ ನಿವಾರಣೆಯಾಗಿದ್ದು 6 ತಿಂಗಳಲ್ಲಿ ಅನುಷ್ಠಾನದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದರು.
ಎತ್ತಿನಹೊಳೆ ಕಾಮಗಾರಿ ಅಂತಿಮ ಹಂತದಲ್ಲಿದ್ದು ಮೂರ್ನಾಲ್ಕು ತಿಂಗಳಲ್ಲಿ ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ದಕ್ಷಿಣ ಜಿಲ್ಲೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗುವುದು.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದಿಂದ 4000 ಕೋಟಿ ರೂಪಾಯಿ ಅನುದಾನ ಸಿಗುವ ನಿರೀಕ್ಷೆಯಿದ್ದು ಹಣ ಬಂದ ಕೂಡಲೇ ಕಾಮಗಾರಿ ಪುನರಾರಂಭಿಸಲಾಗುವುದು ಎಂದ ಅವರು ನೆಲ, ಜಲ, ಭಾಷೆ ವಿಚಾರದಲ್ಲಿ ಕನ್ನಡಿಗರಿಗೆ ಅನ್ಯಾಯವಾಗಲು ಬಿಡುವುದಿಲ್ಲ ರೈತರು, ಜನಸಾಮಾನ್ಯರ ಹಿತವೇ ಸರ್ಕಾರಕ್ಕೆ ಮುಖ್ಯವಾಗಿದೆ ಎಂದರು.