ಬೆಂಗಳೂರು: ಕೇಂದ್ರ ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆ ಕ್ವಿಂಟಾಲ್‌ಗೆ 2,400 ರೂ.ನಂತೆ ಮೆಕ್ಕೆಜೋಳ ನೇರ ಖರೀದಿಗೆ ಸರ್ಕಾರ ಆದೇಶಿಸಿದೆ. Maize procurement
ಆ ಮೂಲಕ ರೈತರ ಬೇಡಿಕೆ, ಧಾನ್ಯ ಆಧಾರಿತ ಎಥನಾಲ್ ಉತ್ಪಾದಿಸುವ ಡಿಸ್ಟಿಲರಿಗಳ ಕೋರಿಕೆಯನ್ನು ಏಕಕಾಲಕ್ಕೆ ಈಡೇರಿಸಿದೆ.
ಮೆಕ್ಕೆಜೋಳ ಬೆಳೆಗಾರರ ನಿರಂತರ ಹೋರಾಟ, ರೈತ ಸಂಘಟನೆಗಳ ಮನವಿಗೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿ, ಧಾನ್ಯ ಆಧಾರಿತ ಎಥೆನಾಲ್ ಉತ್ಪಾದಿಸುವ ಡಿಸ್ಟಿಲರಿಗಳ ಸಮಸ್ಯೆಯನ್ನು ಆಲಿಸಿದ್ದರು.
ರೈತರಿಂದ ನೇರ ಖರೀದಿಸಿ ಡಿಸ್ಟಿಲರಿಗಳ ಗೋದಾಮಿಗೆ ತಲುಪಿಸಲು ಸರ್ಕಾರವೇ ನೆರವಾಗಲಿದೆ ಎಂದು ಈ ಸಭೆಯಲ್ಲಿ ತೀರ್ಮಾನಿಸಿದ್ದರು. ಸಿಎಂ ಸೂಚನೆಯಂತೆ ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿಗೆ ಷರತ್ತುಗಳನ್ನು ವಿಧಿಸಿ ಸಹಕಾರ ಇಲಾಖೆ ಆದೇಶಿಸಿದೆ.
ಸೋಮವಾರದಿಂದ ನೋಂದಣಿ
ಖರೀದಿ ಪ್ರಕ್ರಿಯೆ ನಿರ್ವಹಿಸುವ ಜವಾಬ್ದಾರಿಯನ್ನು ಕರ್ನಾಟಕ ಸಹಕಾರ ಮಾರಾಟ ಮಹಾಮಂಡಳಿ (ಕೆಎಸ್‌ಸಿಎಂಎಫ್ )ಗೆ ಒಪ್ಪಿಸಲಾಗಿದೆ. ಡಿಸ್ಟಿಲರಿಗಳಿಗೆ ಸಮೀಪದ ಪ್ಯಾಕ್/ ಟಿಎಪಿಸಿಎಂಸ್‌ಗಳ ಮೂಲಕ ಮೆಕ್ಕೆಜೋಳ ಖರೀದಿಸಲು ಸೂಚಿಸಲಾಗಿದೆ.
ಬೆಂಬಲ ಬೆಲೆಯಡಿ ಒಬ್ಬ ರೈತರಿಂದ ಗರಿಷ್ಠ ಐದು ಕ್ವಿಂಟಾಲ್ ಮೆಕ್ಕೆಜೋಳ ಖರೀದಿಸಬೇಕು. ಸೋಮವಾರ (ಡಿ.1)ದಿಂದ ರೈತರ ಹೆಸರು ನೋಂದಣಿ ಪ್ರಕ್ರಿಯೆ ಮೂರು ದಿನಗಳ ನಿರ್ವಹಿಸಬೇಕು.
ನಂತರವೂ ರೈತರ ಹೆಸರು ನೋಂದಣಿ ಮುಂದುವರಿಸಿ ಖರೀದಿ ಪ್ರಕ್ರಿಯೆ ನಿಭಾಯಿಸಬೇಕು. ಖರೀದಿದಾರ ಡಿಸ್ಟಿಲರಿಗಳಿಂದ ಮೊತ್ತ ಪಡೆದ ದಿನಾಂಕದಿಂದ ಮೂರು ದಿನಗಳಲ್ಲಿ ಆಯಾ ರೈತರ ಬ್ಯಾಂಕ್ ಖಾತೆಗೆ ನಗದು ನೇರ ವರ್ಗಾವಣೆ ಮಾಡಬೇಕು.
ಧಾನ್ಯ ಆಧಾರಿತ ಎಥನಾಲ್ ಉತ್ಪಾದಿಸುವ ಡಿಸ್ಟಿಲರುಗಳಿಗೆ ಮೊದಲ ತ್ರೈಮಾಸಿಕ ಅವಧಿ (25-11-2025 ರಿಂದ 26-1-2026)ಯಲ್ಲಿ ಒಟ್ಟು 44,895 ಟನ್ ಮೆಕ್ಕೆಜೋಳ ಅಗತ್ಯವಿದೆ.
ಅಗತ್ಯದ ಶೇಕಡ 50ರಷ್ಟು ಅಂದರೆ 22,446 ಟನ್ ಮೆಕ್ಕೆಜೋಳವನ್ನು ರೈತರಿಂದ ಪ್ಯಾಕ್ಸ್/ ಟಿಎಪಿಸಿಎಂಎಸ್ ಮೂಲಕ ಖರೀದಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.