ಎಸ್‌ಐಆರ್ ನಮೂನೆ ಹಿಂದಿರುಗಿಸಲು ನಾಲ್ಕೇ ದಿನ ಬಾಕಿ

sir-form
sir-form
Published on

ಪ್ರಮುಖ ಮುಖ್ಯಾಂಶಗಳು

  • ಜಿಬಿಎ ವ್ಯಾಪ್ತಿಯಲಿ ಶೇ.50 ಮತದಾರರ ಡಿಜಿಟಲೀಕರಣ ಪೂರ್ಣ
  • ತವರಿನಲ್ಲಿ ಮತಹಕ್ಕು ಉಳಿಸಿಕೊಳ್ಳಲು ಹೆಚ್ಚಿನ ವಲಸಿಗರು ಉತ್ಸುಕ

ಬೆಂಗಳೂರು: ರಾಜಧಾನಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮತದಾರರು ಸ್ವೀಕರಿಸಿರುವ ನಮೂನೆಗಳನ್ನು ವಾಪಸ್ ಮಾಡಲು ನಾಲ್ಕು ದಿನಗಳು ಮಾತ್ರ ಉಳಿದಿದ್ದು, ಗಡುವಿನೊಳಗೆ ಭರ್ತಿ ಮಾಡಿದ ಫಾರ್ಮ್ ಹಿಂದಿರುಗಿಸಬೇಕಿದೆ. ಭಾನುವಾರದಿಂದ (ಆ.9) ಯಾವುದೇ ಫಾರ್ಮ್ ಸ್ವೀಕರಿಸುವುದಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

ಪ್ರಸ್ತುತ ಬೆಂಗಳೂರಿನಲ್ಲಿರುವ 1.03 ಕೋಟಿ ಮತದಾರರಿಗೆ ಎಸ್‌ಐಆರ್ ನಮೂನೆ ವಿತರಿಸುವ ಕಾರ್ಯ ಪೂರ್ಣಗೊಂಡಿದೆ. ಈ ಪೈಕಿ ಫಾರ್ಮ್ ಹಿಂದಿರುಗಿಸುವವರಲ್ಲಿ ಶೇ.51 ಮತದಾರರ ಹೆಸರನ್ನು ಡಿಜಿಟಲೀಕರಣ ಮಾಡಲಾಗಿದೆ. ಈ ಪ್ರಮಾಣ ಇಡೀ ರಾಜ್ಯದಲ್ಲೇ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯ ವಲಸಿಗರು ನೆಲೆಸಿದ್ದು, ಇವರ ಪೈಕಿ ಹೆಚ್ಚಿನವರು ಈಗ ತಮ್ಮ ತವರಿನಲ್ಲೇ ಮತ ಹಕ್ಕು ಉಳಿಸಿಕೊಳ್ಳಲು ಉತ್ಸುಕತೆ ತೋರಿಸುತ್ತಿದ್ದಾರೆ. ಈ ಕಾರಣದಿಂದ ಹಲವರು ನಮೂನೆಗಳನ್ನೇ ಹಿಂದಿರುಗಿಸುತ್ತಿಲ್ಲ ಎಂದು ಹೇಳಲಾಗಿದೆ.
ಗಡುವಿನೊಳಗೆ ಭರ್ತಿ ಮಾಡಿದ ನಮೂನೆಗಳನ್ನು ವಾಪಸ್ ಮಾಡುವಂತೆ ಆಯೋಗ ಹಲವು ಬಾರಿ ಮನವಿ ಮಾಡಿದೆ. ಆದರೂ, ಕೆಲವರು ಇದಕ್ಕೆ ಸೊಪ್ಪು ಹಾಕಿಲ್ಲ. ನಮೂನೆ ವಾಪಸ್ ಮಾಡದಿದ್ದಲ್ಲಿ ಅಂತಹವರ ಹೆಸರನ್ನು ಕರಡು ಪಟ್ಟಿಯಲ್ಲಿ ಸೇರ್ಪಡೆ ಮಾಡುವುದಿಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ. ಆ.17ರಂದು ಕರಡು ಮತದಾರರ ಪಟ್ಟಿಯು ಪ್ರಕಟವಾಗಲಿದ್ದು, ಆ ಬಳಿಕ ಮತದಾರರು ತಮ್ಮ ಹೆಸರು ಸೇರ್ಪಡೆ ಮಾಡಲು ಧಾವಂತ ಮಾಡಬಹುದುದು ಎಂದು ಹೆಸರು ಹೇಳಲಿಚ್ಛಿಸದ ಬಿಎಲ್‌ಒ ಒಬ್ಬರು ತಿಳಿಸಿದ್ದಾರೆ.

ಶೇ.50 ಮಾತ್ರ ಡಿಜಿಟಲೀಕರಣ:

ರಾಜಧಾನಿಯಲ್ಲಿ ಒಂದಿಷ್ಟು ಮತದಾರರು ಭರ್ತಿ ಮಾಡಿರುವ ಫಾರ್ಮ್ ಹಿಂದಿರುಗಿಸಿಲ್ಲ. ಇದು ಮತದಾರರ ಹೆಸರನ್ನು 2002ರ ಎಸ್‌ಐಆರ್‌ನೊಂದಿಗೆ ತಾಳೆ ಹಾಕಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸದ್ಯ ಅರ್ಧದಷ್ಟು ಮಾತ್ರ ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ. ಈ ಪ್ರಮಾಣವನ್ನು ಶೇ.60ಕ್ಕೆ ಹೆಚ್ಚಿಸಲು ಆಯೋಗ ಕಸರತ್ತು ನಡೆಸುತ್ತಿದ್ದು, ಬಿಎಲ್‌ಒಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಚುನಾವಣಾ ದೃಷ್ಟಿಯಿಂದ ಬೆಂಗಳೂರನ್ನು 4 ಜಿಲ್ಲೆಗಳನ್ನಾಗಿ ವಿಂಗಡಿಸಲಾಗಿದೆ (ಉತ್ತರ, ದಕ್ಷಿಣ, ಕೇಂದ್ರ ಹಾಗೂ ನಗರ ಜಿಲ್ಲೆ). ಈ ಜಿಲ್ಲೆಗಳಿಗೆ ರಾಜಧಾನಿಯ 28 ವಿಧಾನಸಭಾ ಕ್ಷೇತ್ರಗಳನ್ನು ತಲಾ ಏಳರಂತೆ ಹಂಚಿಕೆ ಮಾಡಲಾಗಿದೆ. ಸದ್ಯ ಇಷ್ಟೂ ಮತಕ್ಷೇತ್ರಗಳಲ್ಲಿ ಯಲಹಂಕ ಹೊರತುಪಡಿಸಿ ಇನ್ನುಳಿದ ಕ್ಷೇತ್ರಗಳಲ್ಲಿ ಡಿಜಿಟಲೀಕರಣ ಶೇ.60 ದಾಟಿಲ್ಲ. ಹಾಗಾಗಿ ಆಯೋಗವು ಬೆಂಗಳೂರಿನಲ್ಲಿ ಶೇ.60 ಡಿಜಿಟಲೀಕರಣಕ್ಕೆ ಗುರಿ ಹೊಂದಿದ್ದು, ಉಳಿದ ಪ್ರಮಾಣವನ್ನು ಗೈರು, ಶಾಶ್ವತ ಸ್ಥಳಾಂತರ, ಮರಣ, ಒಂದಕ್ಕಿಂತ ಹೆಚ್ಚು ಕಡೆ ಮತಹಕ್ಕು ಹಾಗೂ ಇತರ (ಎಎಸ್‌ಡಿಡಿಒ) ಎಂದು ವಿಂಗಡಿಸುವತ್ತ ಲಕ್ಷ್ಯ ಹರಿಸಲಾಗಿದೆ.

ಜಿಲ್ಲಾವಾರು ಡಿಜಿಟಲೀಕರಣದ ಪ್ರಗತಿ:

ಜಿಲ್ಲೆ

ಬಿಎಲ್‌ಒಗಳಿಂದ ಮೊಬೈಲ್ ಕರೆ:

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಕ್ರಿಯರಾಗಿರುವ ಬಿಎಲ್‌ಒಗಳಿಗೆ 2002ರ ಮತಪಟ್ಟಿಯಲ್ಲಿರುವವರನ್ನು ಗುರುತಿಸುವುದು ಹರಸಾಹಸವಾಗಿದೆ. ಬಾಡಿಗೆ ಮನೆಯಲ್ಲಿದ್ದವರು ಮನೆ ಖಾಲಿ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. ಇನ್ನೂ ಕೆಲವರು ತವರು ಜಿಲ್ಲೆಗಳಿಗೆ ತೆರಳಿದ್ದಾರೆ. ಇಂತಹವನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಆದರೂ ಹಲವು ಮಂದಿಯ ವಿವರವನ್ನು ಬಿಎಲ್‌ಒಗಳು ಪತ್ತೆ ಹಚ್ಚಿ ನಮೂನೆ ಭರ್ತಿ ಮಾಡಿಕೊಡುವಂತೆ ನಿತ್ಯವೂ ಮೊಬೈಲ್ ಮೂಲಕ ಕರೆಗಳನ್ನು ಮಾಡುತ್ತಿದ್ದಾರೆ. ಬಿಎಲ್‌ಒಗಳಲ್ಲಿ ಹೆಚ್ಚಿನವರು ಶಿಕ್ಷಣ ವೃಂದದವರೇ ಇದ್ದು, ಮಾಹಿತಿ ಕಲೆ ಹಾಕಲು ಹೈರಾಣರಾಗಿದ್ದಾರೆ. ಮೇಲ್ಚಿಚಾರಕರು ಸೇರಿ ಹಿರಿಯ ಅಧಿಕಾರಿಗಳು ಫೀಲ್ಡಿಗೆ ಬಾರದ ಕಾರಣ ಒಂದಿಷ್ಟು ಸಮಸ್ಯೆ ಹಾಗೆಯೆ ಉಳಿದಿದೆ ಎಂಬುದು ನಗರ ಜಿಲ್ಲೆಯ ಕೆಲ ಬಿಎಲ್‌ಎ-2 (ರಾಜಕೀಯ ಪ್ರತಿನಿಧಿಗಳು) ಅನಿಸಿಕೆ ವ್ಯಕ್ತಪಡಿಸಿದ್ದಾರೆ.

1950 ಸಹಾಯವಾಣಿಯಲ್ಲಿ ಸಿಗುವ ನೆರವು:

* ಗಣತಿದಾರರು/ಬಿಎಲ್‌ಒ ಮನೆಗೆ ಭೇಟಿ ನೀಡದಿರುವುದು
* ನಮೂನೆ ಭರ್ತಿ ವಿಧಾನ ಹಾಗೂ ಅಗತ್ಯ ದಾಖಲೆ ಮಾಹಿತಿ
* ಸಲ್ಲಿಸಿದ ನಮೂನೆ ಸ್ವೀಕಾರ, ಪರಿಶೀಲನೆಗೆ ಸಂಬಂಧಿಸಿದ ಸಮಸ್ಯೆ
* ಮತದಾರರ ವಿವರಗಳಲ್ಲಿನ ತಿದ್ದುಪಡಿ, ಸೇರ್ಪಡೆ ಅಥವಾ ಇತರ ಎಸ್‌ಐಆರ್ ಮಾರ್ಗದರ್ಶನ
* ಎಸ್‌ಐಆರ್‌ಗೆ ಸಂಬಂಧಿಸಿದ ದೂರು ದಾಖಲಿಸಿ ಅದರ ತ್ವರಿತ ಪರಿಹಾರ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net