ನಗರದಲ್ಲಿ ಆನ್​ಲೈನ್​ ಫುಡ್​ ಡೆಲಿವರಿ ದುಬಾರಿ!

ಜಿಬಿಎ
ಜಿಬಿಎ
Published on

ಪ್ರಮುಖ ಮುಖ್ಯಾಂಶಗಳು

  • ಸಮಸ್ಯೆ ಸರಿಪಡಿಸದಿದ್ದರೆ ವ್ಯವಹಾರ ಸ್ಥಗಿತ
  • ಹೋಟೆಲ್​ ಮಾಲೀಕರ ಎಚ್ಚರಿಕೆ
ಪವನ್​ ಆಚಾರ್ಯ ನೀರ್ಚಾಲು ಬೆಂಗಳೂರು
ಆನ್​ಲೈನ್​ ಆಹಾರ ವಿತರಣಾ ವೇದಿಕೆಗಳಾದ ಸ್ವಿಗ್ಗಿ ಮತ್ತು ಜೊಮ್ಯಾಟೊ ವಿರುದ್ಧ ಬೆಂಗಳೂರಿನ ಹೋಟೆಲ್​ ಹಾಗೂ ಉಪಹಾರ ಗೃಹ ಮಾಲೀಕರ ಅಸಮಾಧಾನ ಹೊರಹಾಕಿದ್ದು, ಅತಿಯಾದ ಕಮಿಷನ್​, ವಿವಿಧ ಹೆಸರಿನಲ್ಲಿ ಶುಲ್ಕಗಳ ಕಡಿತ, ಅನುಮತಿಯಿಲ್ಲದೆ ಜಾಹೀರಾತು ಹಾಗೂ ರಿಯಾಯಿತಿ ಯೋಜನೆಗಳನ್ನು ಜಾರಿಗೊಳಿಸುವುದರಿಂದ ಹೋಟೆಲ್​ ಉದ್ದಿಮೆಗೆ ಕಂಟಕವಾಗಿದೆ ಎಂದು ಮಾಲೀಕರು ಆರೋಪಿಸಿದ್ದಾರೆ.
ಇತ್ತೀಚೆಗೆ ಆಟೋ, ಟ್ಯಾಕ್ಸಿ ಚಾಲಕರಿಗೆ ಸಮಸ್ಯೆ ಎಂದು ಓಲಾ, ಉಬರ್​ನಂತಹ ಬೈಕ್​ ಟ್ಯಾಕ್ಸಿಗಳಿಗೆ ಕಡಿವಾಣ ಹಾಕುವ ಪ್ರಯತ್ನ ಸರ್ಕಾರ ನಡೆಸಿತ್ತು. ಆದರೆ, ಸಂಪೂರ್ಣ ನಿಷೆಧವನ್ನು ತಳ್ಳಿ ಹಾಕಿದ್ದ ಹೈ ಕೋರ್ಟ್​ ಹಳದಿ ಬೋರ್ಡ್​ ಹಾಕಿ ಅಧಿಕೃತವಾಗಿ ಚಲಾಯಿಸಲು ಅನುಮತಿ ನೀಡಿತ್ತು. ಆದರೆ ಆ ಆದೇಶ ಇನ್ನೂ ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ. ಇದೀಗ ಅದೇರೀತಿ ಹೋಟೆಲ್​ ಮಾಲೀಕರು ಜೊಮ್ಯಾಟೊ, ಸ್ವಿಗಿ ಸೇವೆಗಳನ್ನು ಸ್ಥಗಿತಗೊಳಿಸಲು ಪಟ್ಟು ಹಿಡಿದಿದ್ದು, ಮುಂದೆ ಆನ್​ಲೈನ್​ ುಡ್​ ಡೆಲಿವರಿಗೂ ನಿಯಂತ್ರಣ ಬೀಳುವ ಸಾಧ್ಯತೆ ಇದೆ.
ಸಮಸ್ಯೆಗಳ ಕುರಿತು ಹಲವಾರು ಬಾರಿ ಸ್ವಿಗ್ಗಿ ಪ್ರತಿನಿಧಿಗಳನ್ನು ನೇರವಾಗಿ ಭೇಟಿ ಮಾಡಿ ಚರ್ಚೆ ನಡೆಸಿದ್ದೇವೆ. ತಕ್ಷಣವೇ ಕೆಲವು ಸಮಸ್ಯೆಗಳನ್ನು ಸರಿಪಡಿಸುವುದಾಗಿ ಅವರು ಭರವಸೆ ನೀಡಿದ್ದರೂ ಸಮಸ್ಯೆಗಳು ಇನ್ನೂ ಮುಂದುವರಿಯುತ್ತಿರುವುದು ಖಂಡನೀಯ. ಎಲ್ಲ ವ್ಯವಹಾರಗಳನ್ನು ಪಾರದರ್ಶಕ ಹಾಗೂ ನ್ಯಾಯಸಮ್ಮತ ರೀತಿಯಲ್ಲಿ ಸರಿಪಡಿಸಿಕೊಂಡು ಆನ್​ಲೈನ್​ ಸೇವೆಯನ್ನು ಮುಂದುವರಿಸುವುದರ ಜತೆಗೆ ಈಗಾಗಲೇ ನಡೆದಿರುವ ಎಲ್ಲ ತಪ್ಪುಗಳನ್ನು ಕೂಡಲೇ ಸರಿಪಡಿಸಬೇಕು. ಇಲ್ಲದಿದ್ದರೆ ಎಲ್ಲ ಹೋಟೆಲ್​ ಮಾಲೀಕರು ಒಮ್ಮತದಿಂದ ಆ.15ರಿಂದ ಸ್ವಿಗ್ಗಿಯೊಂದಿಗಿನ ವ್ಯವಹಾರವನ್ನು ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಮುಖ ಆಕ್ಷೇಪಣೆ ಏನು?
ಪ್ರತಿ ಆರ್ಡರ್​ಗೆ ಕಮಿಷನ್​, ಪ್ಲಾಟ್​ಫಾಮ್​ರ್ ಶುಲ್ಕ, ಸಂಗ್ರಹಣೆ ಶುಲ್ಕ, ಪಾವತಿ ಗೇಟ್​ವೇ ಶುಲ್ಕ, ಸೇವಾ ಶುಲ್ಕದ ಮೇಲಿನ ಜಿಎಸ್​ಟಿ, ಆರ್ಡರ್​ ರದ್ದುಪಡಿಸುವ ಶುಲ್ಕ, ದೂರದ ವಿತರಣಾ ಶುಲ್ಕ ಹಾಗೂ ಪ್ರಚಾರ ವೆಚ್ಚ ಸೇರಿ ಹಲವು ಕಡಿತಗಳನ್ನು ಮಾಡಲಾಗುತ್ತಿದೆ. ಇದರಿಂದ ಒಟ್ಟು ಮಾರಾಟ ಮೌಲ್ಯದ ಅರ್ಧಕ್ಕಿಂತಲೂ ಕಡಿಮೆ ಮೊತ್ತವೇ ಹೋಟೆಲ್​ಗಳಿಗೆ ತಲುಪುತ್ತಿದೆ.
ಸಮಸ್ಯೆ ಏನು?
ರೆಸ್ಟೋರೆಂಟ್​ನಲ್ಲಿ 30&35 ರೂ.ಗೆ ದೊರೆಯುವ ಇಡ್ಲಿ, ಆನ್​ಲೈನ್​ನಲ್ಲಿ 80&90ಕ್ಕೆ ಮಾರಾಟವಾಗುತ್ತಿದೆ. ಗ್ರಾಹಕರು ಹೆಚ್ಚುವರಿ ದರವನ್ನು ಭರಿಸಬೇಕಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ರೆಸ್ಟೋರೆಂಟ್​ನ ದರ ಒಂದೇ ಆಗಿರಬೇಕು, ವಿತರಣಾ ಶುಲ್ಕ ಮಾತ್ರ ಪ್ರತ್ಯೇಕವಾಗಿರಬೇಕು ಎಂದು ಮಾಲೀಕರು ಒತ್ತಾಯಿಸಿದ್ದಾರೆ. ಆನ್​ಲೈನ್​ ವೇದಿಕೆಗಳಿಂದ ಹೆಚ್ಚುವರಿ ವ್ಯವಹಾರ ದೊರೆತಿರುವುದನ್ನು ಒಪ್ಪಿಕೊಂಡರೂ, ಪ್ರಸ್ತುತ ಅನುಸರಿಸುತ್ತಿರುವ ವ್ಯವಹಾರ ಮಾದರಿಯೇ ಸಮಸ್ಯೆಯ ಮೂಲ ಎಂಬುದು ಹೋಟೆಲ್​ ಮಾಲೀಕರ ವಾದ.
ಯಾವುದೇ ಜಾಹೀರಾತು ಆರಂಭಿಸುವ ಮೊದಲು ಹೋಟೆಲ್​ ಮಾಲೀಕರಿಂದ ಲಿಖಿತ ಅಥವಾ ಡಿಜಿಟಲ್​ ಅನುಮತಿ ಪಡೆಯಬೇಕು. ಆದರೆ ಯಾವುದೇ ಪೂರ್ವ ಸಮಾಲೋಚನೆ ಅಥವಾ ಅನುಮೋದನೆ ಪಡೆಯದೆ, ಜಾಹೀರಾತು ಮತ್ತು ಪ್ರಚಾರ ವೆಚ್ಚಗಳನ್ನು ಹೊಟೇಲ್​ ಮಾಲೀಕರ ಬ್ಯಾಂಕ್​ ಖಾತೆಗಳಿಂದ ಕಡಿತಗೊಳಿಸಲಾಗುತ್ತಿದೆ. ಜಾಹೀರಾತುಗಳನ್ನು ಯಾವಾಗ ಬೇಕಾದರೂ ಒಂದೇ ಕ್ಲಿಕ್​ನಲ್ಲಿ ನಿಲ್ಲಿಸುವ ಅವಕಾಶವನ್ನು ನೀಡಬೇಕು. ನಿಲ್ಲಿಸಿದ ನಂತರ ಯಾವುದೇ ಶುಲ್ಕ ವಿಧಿಸಬಾರದು. ಜಿಎಸ್ಟಿ, ಜಾಹೀರಾತು, ಕೊಡುಗೆ ಹಾಗೂ ಪ್ರಚಾರ ಸೇರಿ ಎಲ್ಲ ಶುಲ್ಕಗಳನ್ನು ಸ್ಪಷ್ಟವಾಗಿ ತೋರಿಸಬೇಕು. ಸ್ವಿಗ್ಗಿಯ ಪಾವತಿ ವಿವರಗಳಲ್ಲಿ ಪಾರದರ್ಶಕತೆಯ ಕೊರತೆ ಇರುವುದರಿಂದ, ಮಾಲೀಕರಿಗೆ ವಹಿವಾಟುಗಳ ಹೊಂದಾಣಿಕೆ ನಿಖರವಾಗಿ ಮಾಡಲು ಸಾಧ್ಯವಾಗುತ್ತಿಲ್ಲ. ಗ್ರಾಹಕರಿಂದ ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸಬೇಕಾದ ಜಿಎಸ್​ಟಿ ಮೊತ್ತದ ಮೇಲೆಯೂ ಸೇವಾಶುಲ್ಕ ವಿಧಿಸಿ, ಅದನ್ನೂ ಹೊಟೇಲ್​ ಮಾಲೀಕರಿಂದಲೇ ವಸೂಲಿ ಮಾಡುತ್ತಿರುವುದು ಸಮಂಜಸವಲ್ಲ ಎಂದು ಮಾಲೀಕರು ಕಿಡಿಕಾರಿದ್ದಾರೆ.
ಅನಗತ್ಯ ಕಡಿತಗಳು ಹಾಗೂ ಲೆಕ್ಕಪತ್ರ ವ್ಯವಸ್ಥೆಯಲ್ಲಿನ ವ್ಯತ್ಯಾಸಗಳ ಪರಿಣಾಮವಾಗಿ, ಹೊಟೇಲ್​ ಮಾಲೀಕರ ಬಿಲ್​ಗಳ ಒಟ್ಟು ಮೊತ್ತದ ಮೇಲೆ ಶೇ. 50 ಕ್ಕಿಂತಲೂ ಕಡಿಮೆ ಪಾವತಿಯನ್ನು ಮಾಡುತ್ತಿದ್ದಾರೆ. ಇದರಿಂದ ಅವರಿಗೆ ತೀವ್ರ ಆರ್ಥಿಕ ಸಂಕಷ್ಟ ಉಂಟಾಗಿದೆ ಎಂದು ತಿಳಿಸಿದ್ದಾರೆ.

ಹೋಟೆಲ್​ ಮಾಲೀಕರ ಅನುಮತಿ ಪಡೆಯದೆ ಜಾಹೀರಾತು ಹಾಗೂ ರಿಯಾಯಿತಿ ಅಭಿಯಾನಗಳನ್ನು ನಡೆಸಿ ಅದರ ವೆಚ್ಚವನ್ನು ಪಾಲುದಾರ ಹೋಟೆಲ್​ಗಳ ಮೇಲೆಯೇ ಹೊರಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಕೇವಲ ಇ-&ಮೇಲ್​ ಮೂಲಕ ಮಾಹಿತಿ ನೀಡುವುದನ್ನು ಅನುಮತಿ ಎಂದು ಪರಿಗಣಿಸಲು ಸಾಧ್ಯವಿಲ್ಲ.

— ಪಿ.ಸಿ. ರಾವ್​, ಬೆಂಗಳೂರು ಹೋಟೆಲ್ಸ್​ ಅಸೋಸಿಯೇಷನ್​ ಗೌರವಾಧ್ಯಕ್ಷ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net