ಓಕಳಿಪುರ ಅಷ್ಟಪಥ ಕಾರಿಡಾರ್​: ಬಾಕಿ ಕಾಮಗಾರಿ ಪೂರ್ಣಗೊಳಿಸಸಲು ಸೂಚನೆ

okalipur-ashtapath-corridor
okalipur-ashtapath-corridor
Published on

ಪ್ರಮುಖ ಮುಖ್ಯಾಂಶಗಳು

  • ರೈಲ್ವೆ ಹಳಿ ಕೆಳಭಾಗದಲ್ಲಿ ಬಾಕ್ಸ್ ಪುಶಿಂಗ್ ಕಾರ್ಯಕ್ಕೆ ಗಡುವು
  • ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸ್ಥಳಪರಿಶೀಲನೆ
ಬೆಂಗಳೂರು: ಓಕಳಿಪುರ ಅಷ್ಟಪಥ ಕಾರಿಡಾರ್‌ನ ರೈಲ್ವೆ ಹಳಿ ಕೆಳಭಾಗದಲ್ಲಿ ಬಾಕಿಯಿರುವ ಕಾಮಗಾರಿಯನ್ನು 25 ದಿನಗಳಲ್ಲಿ ಪೂರ್ಣಗೊಳಿಸುವಂತೆ ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೇಂದ್ರ ಪಾಲಿಕೆ ಹಾಗೂ ಪಶ್ಚಿಮ ಪಾಲಿಕೆ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಅವರು ಮಂಗಳವಾರ ಮಾತನಾಡಿದರು.
ಸಿಟಿ ರೈಲ್ವೆ ನಿಲ್ದಾಣದ ಕಡೆಯಿಂದ ಸಾಗುವ ಚೆನ್ನೈ ರೈಲ್ವೆ ಹಳಿ ಮಾರ್ಗ ಮಧ್ಯೆ ರೈಲ್ವೆ ಇಲಾಖೆಯು ಈಗಾಗಲೇ ಎರಡು ಬಾಕ್ಸ್ ಪುಶಿಂಗ್ ಕಾರ್ಯ ಪೂರ್ಣಗೊಳಿಸಿದೆ. ಮೆಜೆಸ್ಟಿಕ್‌ನಿಂದ ರಾಜಾಜಿನಗರದ ಕಡೆಗೆ ತೆರಳುವ ಮಾರ್ಗದ ಒಂದು ಬಾಕ್ಸ್ ಭಾಗದಲ್ಲಿ ವಾಹನಗಳ ಸಂಚಾರಕ್ಕಾಗಿ ಸಂಪರ್ಕ ರಸ್ತೆ ನಿರ್ಮಾಣ ಕಾರ್ಯವನ್ನು 25 ದಿನಗಳಲ್ಲಿ ಪೂರ್ಣಗೊಳಿಸಬೇಕು. ಅದೇ ಸ್ಥಳದಲ್ಲಿ ರೈಲ್ವೆ ನಿಲ್ದಾಣದ ಕಡೆಗೆ ತೆರಳುವ ಬಾಕ್ಸ್ ಮಾರ್ಗದ ಸಂಪರ್ಕ ರಸ್ತೆ ನಿರ್ಮಾಣ, ಮಳೆನೀರು ಹರಿದು ಹೋಗಲು 1,200 ಮಿ.ಮೀ. ವ್ಯಾಸದ ನೀರುಗಾಲುವೆ ನಿರ್ಮಾಣ, ಸುಮಾರು 63 ಮೀ. ಉದ್ದದ ರಿಟೈನಿಂಗ್ ವಾಲ್ ಹಾಗೂ ಪಾದಚಾರಿ ಮಾರ್ಗದ ಕಾಮಗಾರಿಯನ್ನು ಕೂಡಲೇ ಆರಂಭಿಸಿ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಮಾಧವನಗರ ರೈಲ್ವೆ ಕೆಳಸೇತುವೆ ಪರಿಶೀಲನೆ:

ಶಿವಾನಂದ ವೃತ್ತದ ಸಮೀಪದ ಮಾಧವನಗರ ರೈಲ್ವೆ ಕೆಳಸೇತುವೆ ಬಳಿ ಪರಿಶೀಲನೆ ನಡೆಸಿದ ಮುಖ್ಯ ಆಯುಕ್ತರು, ಮಳೆನೀರು ಹರಿವಿಗಾಗಿ ಅಳವಡಿಸಿರುವ ಗ್ರೇಟಿಂಗ್‌ಗಳನ್ನು ಸದಾ ಸ್ವಚ್ಛವಾಗಿರಿಸಬೇಕು. ಗ್ರೇಟಿಂಗ್‌ಗಳ ಕೆಳಭಾಗ ಹಾಗೂ ಸುತ್ತಮುತ್ತಲಿನ ಚರಂಡಿಗಳಲ್ಲಿ ಹೂಳೆತ್ತುವ ಕಾರ್ಯವನ್ನು ಕೈಗೊಂಡು ಮಳೆನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಪರಿಶೀಲನೆ ವೇಳೆ ಕೇಂದ್ರ ಪಾಲಿಕೆಯ ಆಯುಕ್ತ ರಾಜೇಂದ್ರ ಚೋಳನ್, ಪಶ್ಚಿಮ ಪಾಲಿಕೆಯ ಆಯುಕ್ತ ಡಾ. ಕೆ.ವಿ. ರಾಜೇಂದ್ರ, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮದ ಸಿಇಒ ಕರೀಗೌಡ, ಮುಖ್ಯ ಅಭಿಯಂತರರಾದ ವಿಜಯ್ ಕುಮಾರ್ ಹರಿದಾಸ್, ಬಸವರಾಜ್ ಕಬಾಡೆ ಸೇರಿ ಇತರ ಅಧಿಕಾರಿಗಳು ಹಾಜರಿದ್ದರು.

ಅಕ್ಟೋಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣ:

ಡಾ. ರಾಜ್‌ಕುಮಾರ್ ರಸ್ತೆಯಲ್ಲಿ ನವರಂಗ್ ವೃತ್ತದಿಂದ ಸ್ಟಾರ್ ಬಜಾರ್ ಸಿಗ್ನಲ್‌ವರೆಗೆ 1.8 ಕಿ.ಮೀ. ಉದ್ದದ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಪ್ರಸ್ತುತ ಒಂದು ಬದಿಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ನಂತರ ಮತ್ತೊಂದು ಬದಿಯ ಕಾಮಗಾರಿಯನ್ನು ಕೈಗೆತ್ತಿಕೊಂಡು ಅಕ್ಟೋಬರ್ ಅಂತ್ಯದೊಳಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜತೆಗೆ ಮಲ್ಲೇಶ್ವರ 8ನೇ ಮುಖ್ಯರಸ್ತೆಯ 800 ಮೀ. ಉದ್ದದ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದ್ದು, ಶೇ.60 ಕಾಮಗಾರಿ ಪೂರ್ಣಗೊಂಡಿದೆ. ಸೈಡ್ ಡ್ರೇನ್, ಪಾದಚಾರಿ ಮಾರ್ಗ ಸೇರಿ ಬಾಕಿಯಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಹಾಗೆಯೇ ಚಿತ್ರಾಪುರ ಮಠದ ಕ್ರಾಸ್‌ನಿಂದ 18ನೇ ಅಡ್ಡರಸ್ತೆಯವರೆಗೆ 425 ಮೀ. ಉದ್ದದ ವೈಟ್ ಟಾಪಿಂಗ್ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಂಡಿದ್ದು, ಅದರ ನಿರ್ವಹಣೆ ಕೈಗೊಳ್ಳುವಂತೆ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net