ಪ್ರೆಸ್ಟೀಜ್ ಗ್ರೂಪ್ ಹಾಗೂ ಬಿಎಂಆರ್ಸಿಎಲ್ ನಡುವೆ ಒಪ್ಪಂದ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಮ್ಮ ಮೆಟ್ರೋ ಹಂತ-2ಎ ಹೊರ ವರ್ತುಲ ರಸ್ತೆ ಕಾರಿಡಾರ್ನ ಬೆಳ್ಳಂದೂರು ಮೆಟ್ರೋ ನಿಲ್ದಾಣದ ನಾಮಕರಣ ಹಕ್ಕುಗಳಿಗೆ ಪ್ರೆಸ್ಟೀಜ್ ಗ್ರೂಪ್ ಜತೆ ಶನಿವಾರ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಒಪ್ಪಂದ ಮಾಡಿಕೊಂಡಿದೆ.
ಈ ಒಪ್ಪಂದದಂತೆ, ವಾಣಿಜ್ಯ ಕಾರ್ಯಾಚರಣೆ ಪ್ರಾರಂಭದ ದಿನಾಂಕದಿಂದ 30 ವರ್ಷಗಳ ಕಾಲ ನಿಲ್ದಾಣವನ್ನು "ಪ್ರೆಸ್ಟೀಜ್ ಬೆಳ್ಳಂದೂರು ಮೆಟ್ರೋ ನಿಲ್ದಾಣ' ಎಂದು ಕರೆಯಲಾಗುತ್ತದೆ.
ನಾಮಕರಣ ಹಕ್ಕುಗಳು ಮತ್ತು ಇತರೆ ಅನುಕೂಲಗಳಿಗೆ ಸಂಬಂಧಿಸಿದ ಒಪ್ಪಂದದ ಮೌಲ್ಯ 80 ಕೋಟಿ ರೂ.ಆಗಿದ್ದು, ಮೆಟ್ರೋ ನಿಲ್ದಾಣದಿಂದ ಅವರ ಆವರಣಕ್ಕೆ ಸಂಪರ್ಕಿಸುವ ವಿಶೇಷ ಪಾದಚಾರಿ ಮೇತುವೆ ಆಯ್ಕೆ ಮಾಡಿದಲ್ಲಿ ಹೆಚ್ಚುವರಿ 10 ರೂ.ಕೋಟಿ ಪಾವತಿಸಬೇಕಾಗುತ್ತದೆ.
ಇದರಿಂದ ಒಟ್ಟು ಸಹಭಾಗಿತ್ವದ ಮೌಲ್ಯ 90 ಕೋಟಿ ರೂ.ಆಗಲಿದೆ.
ಟಿಕೆಟೇತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಮೆಟ್ರೋ ಜಾಲದ ಆರ್ಥಿಕ ಸ್ಥಿರತೆಯನ್ನು ಬಲಪಡಿಸುವ ಯೋಜನೆಯ ಭಾಗವಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ.