ನಮ್ಮ ಮೆಟ್ರೋ ಗ್ರೀನ್ ಲೈನ್ನಲ್ಲಿ ತಾಂತ್ರಿಕ ಸಮಸ್ಯೆ; ರೈಲು ಸಂಚಾರ ವಿಳಂಬ, ಸಂಕಷ್ಟಕ್ಕೀಡಾದ ಪ್ರಯಾಣಿಕರು..BMRCL
Namma Metro Green Line delay
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ, ರೈಲು ಸಂಚಾರ ವಿಳಂಬ.
ಹಸಿರು ಮಾರ್ಗದಲ್ಲಿ ಮೆಟ್ರೋ ರೈಲುಗಳ ಓಡಾಟ ಅಸ್ತವ್ಯಸ್ತ, ಪ್ರಯಾಣಿಕರಿಗೆ ತೊಂದರೆ.
ತಾಂತ್ರಿಕ ದೋಷ ಸರಿಪಡಿಸಲು ಬಿಎಂಆರ್‌ಸಿಎಲ್ ಸಿಬ್ಬಂದಿ ತುರ್ತು ಕಾರ್ಯಾಚರಣೆ ಆರಂಭ.
ಬೆಂಗಳೂರು: ಇತ್ತೀಚೆಗೆ ನೇರಳೆ ಮಾರ್ಗದ ಮೆಟ್ರೋ ಮಾರ್ಗದಲ್ಲಿ ತಾಂತ್ರಿಕ ದೋಷ ಉಂಟಾಗಿ ಪ್ರಯಾಣಿಕರು ಸಾಕಷ್ಟು ಸಂಕಷ್ಟವನ್ನು ಅನುಭವಿಸಿದ್ದರು. ಸದ್ಯ ನಮ್ಮ ಮೆಟ್ರೋ'ದ ಹಸಿರು ಮಾರ್ಗದ ಸೇವೆಯಲ್ಲಿ ದಿಢೀರ್ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ರೈಲುಗಳ ಸಂಚಾರದಲ್ಲಿ ಭಾರಿ ವಿಳಂಬ ಉಂಟಾಗಿದೆ.
ಹಸಿರು ಮಾರ್ಗದಲ್ಲಿ ಮೆಟ್ರೋ ರೈಲುಗಳ ಓಡಾಟ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಕಚೇರಿ ಹಾಗೂ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ತೆರಳಬೇಕಾಗಿದ್ದ ಸಾವಿರಾರು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಶೀಘ್ರವೇ ಪುನರಾರಂಭ
ಮೆಟ್ರೋ ಹಸಿರು ಮಾರ್ಗದಲ್ಲಿ ಉಂಟಾಗಿರುವ ತಾಂತ್ರಿಕ ದೋಷವನ್ನು ಶೀಘ್ರವಾಗಿ ಸರಿಪಡಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಸಿಬ್ಬಂದಿ ಈಗಾಗಲೇ ಸ್ಥಳಕ್ಕೆ ಧಾವಿಸಿದ್ದು, ತುರ್ತು ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಹಾಗೂ ಸಾಮಾನ್ಯ ಮೆಟ್ರೋ ಸೇವೆಯನ್ನು ಆದಷ್ಟು ಬೇಗ ಪುನಃಸ್ಥಾಪಿಸಲು ಬಿಎಂಆರ್‌ಸಿಎಲ್ ಸಿಬ್ಬಂದಿ ಯುದ್ಧೋಪಾದಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಪರ್ಯಾಯ ಮಾರ್ಗಕ್ಕೆ ಮನವಿ
ಹಸಿರು ಮಾರ್ಗದಲ್ಲಿ ಕಾಣಿಸಿಕೊಂಡಿರುವ ತಾಂತ್ರಿಕ ದೋಷವನ್ನು ಸರಿಪಡಿಸಿದ ನಂತರವಷ್ಟೇ ಹಂತ ಹಂತವಾಗಿ ಸಾಮಾನ್ಯ ಸೇವೆಯನ್ನು ಪುನರಾರಂಭಿಸಲಾಗುವುದು. ಸದ್ಯಕ್ಕೆ ಈ ಮಾರ್ಗದಲ್ಲಿ ಪ್ರಯಾಣಿಸುವ ಸಾರ್ವಜನಿಕರು ಹಾಗೂ ಉದ್ಯೋಗಿಗಳು ಸಮಯವನ್ನು ಪರಿಗಣಿಸಿ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿಕೊಂಡಿದೆ.
ರೈಲು ಸಂಚಾರ ವಿಳಂಬದಿಂದಾಗಿ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ಬಿಎಂಆರ್‌ಸಿಎಲ್ ಸಂಸ್ಥೆಯು ಅಧಿಕೃತವಾಗಿ ವಿಷಾದ ವ್ಯಕ್ತಪಡಿಸಿದೆ. ಹಸಿರು ಮಾರ್ಗದ ಮೆಟ್ರೋ ಸೇವೆ ಪುನಃಸ್ಥಾಪನೆ ಕುರಿತು ಶೀಘ್ರದಲ್ಲೇ ಮತ್ತಷ್ಟು ಮಾಹಿತಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ, (ಏಜೆನ್ಸೀಸ್).