ಸರ್ಕಾರಿ ಕಾಯಂ, ಗುತ್ತಿಗೆ, ಹೊರ ಗುತ್ತಿಗೆ ನೌಕರರಿಗೂ ಅನ್ವಯ
ಮಹಿಳಾ ಉದ್ಯೋಗಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಳಕ್ಕೆ ಸರ್ಕಾರ ಒತ್ತು
ಬೆಂಗಳೂರು: ಮಹಿಳಾ ನೌಕರರಿಗೆ ಋತುಚಕ್ರ ಸಮಯದಲ್ಲಿ ತಿಂಗಳಿಗೆ ಒಂದು ದಿನದಂತೆ ವಾರ್ಷಿಕ 12 ದಿನಗಳ ವೇತನಸಹಿತ ರಜೆ ನೀಡಿ ರಾಜ್ಯ ಸರ್ಕಾರ (Menstrual leave) ಆದೇಶಿಸಿದೆ.
ಈ ಸೌಲಭ್ಯ ಷರತ್ತುಗಳಿಗೆ ಒಳಪಟ್ಟು ತಕ್ಷಣದಿಂದ ಜಾರಿಯಾಗಿದೆ. ಸರ್ಕಾರಿ ಕಾಯಂ, ಗುತ್ತಿಗೆ ಮತ್ತು ಹೊರ ಗುತ್ತಿಗೆ ಮಹಿಳಾ ಉದ್ಯೋಗಿಗಳಿಗೂ ಈ ಸೌಲಭ್ಯ ಅನ್ವಯವಾಗಲಿದೆ.
ಅಧ್ಯಯನ ಸಮಿತಿ ವರದಿ, ಜಂಟಿ ಸಭೆಗಳು, ಅಭಿಪ್ರಾಯಗಳನ್ನು ಸಂಗ್ರಹಿಸಿ ಅದರ ಆಧಾರದಲ್ಲಿ ಮಹಿಳಾ ನೌಕರರ ಆತ್ಮಸ್ಥೈರ್ಯ ಹೆಚ್ಚಳ, ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಮುಟ್ಟಿನ ರಜೆ ನೀಡಬೇಕು ಎಂದು ಸಚಿವ ಸಂಪುಟ ಸಭೆ ನಿರ್ಣಯಿಸಿತ್ತು.
ರಾಜ್ಯ ಸರ್ಕಾರಿ ಮಹಿಳಾ ಉದ್ಯೋಗಿಗಳ ಜತೆಗೆ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಾಯಿತ ಎಲ್ಲ ಕೈಗಾರಿಕೆಗಳು, ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ 18 ರಿಂದ 52 ವರ್ಷದ ವಯೋಮಿತಿಯ ನೌಕರರಿಗೆ ಈ ಸೌಲಭ್ಯ ಒದಗಿಸಲು ಒಪ್ಪಿಗೆ ನೀಡಿತ್ತು.
ಅದರಂತೆಯೇ ಪ್ರತಿ ತಿಂಗಳಿಗೆ ಒಂದು ದಿನದಂತೆ ವಾರ್ಷಿಕ 12 ದಿನಗಳ ವೇತನಸಹಿತ ಋತುಚಕ್ರ ರಜಾ ಸೌಲಭ್ಯವನ್ನು ಮಂಜೂರು ಮಾಡಿ, ಆರ್ಥಿಕ ಇಲಾಖೆ ಮಂಗಳವಾರ ಆದೇಶಿಸಿದೆ.
ಷರತ್ತುಗಳು
- ಋತುಚಕ್ರ ಹೊಂದಿರುವ, 18 ರಿಂದ 52 ವಯಸ್ಸಿನ ಮಹಿಳಾ ಸರ್ಕಾರಿ ನೌಕರರು ಈ ರಜೆ
ಪಡೆಯಲು ಅರ್ಹರು
- ಸಾಂದರ್ಭಿಕ ರಜೆ ಮಂಜೂರು ಮಾಡಲು ಸಕ್ಷಮ ಪ್ರಾಧಿಕಾರಿಯು ಋತುಚಕ್ರ ರಜೆಯನ್ನು ಮಂಜೂರು ಮಾಡಬಹುದು.
- ಈ ರಜೆಯನ್ನು ಪಡೆಯಲು ಯಾವುದೇ ವೈದ್ಯಕೀಯ ಪ್ರಮಾಣಪತ್ರವನ್ನು ಒದಗಿಸುವ ಅಗತ್ಯವಿಲ್ಲ
- ರಜೆ/ಹಾಜರಾತಿ ಪುಸ್ತಕದಲ್ಲಿ ಈ ರಜೆಯನ್ನು ಪ್ರತ್ಯೇಕವಾಗಿ ನಮೂದಿಸಬೇಕು