ಫಾರ್ಮಾ ಪಾರ್ಕ್ ಸ್ಥಾಪಿಸಲು ಎರಡು ಸಾವಿರ ಎಕರೆ ಜಮೀನು ಲಭ್ಯ
ಉದ್ಯಮಗಳಿಗೆ ಉತ್ತೇಜಿಸಲು ಕಡಿಮೆ ದರದಲ್ಲಿ ನೀರು ಸರಬರಾಜು
ಬೆಂಗಳೂರಿನಾಚೆ ಉದ್ಯಮ, ಹೂಡಿಕೆಗಳಿಗೆ ಆಕರ್ಷಕ ರಿಯಾಯಿತಿ
ಬೆಂಗಳೂರು: ರಾಷ್ಟ್ರೀಯ ಔಷಧ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರವನ್ನು ರಾಜ್ಯದಲ್ಲಿ
ಸ್ಥಾಪಿಸಲು ಕೋರಿ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದರು. Minister M.B.Patil
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಫಾರ್ಮಾ ಸಂಸ್ಥೆಗಳ ಮುಖ್ಯಸ್ಥರ ಜತೆಗೆ ಸೋಮವಾರ ನಡೆಸಿದ ದುಂಡು ಮೇಜಿನ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಉದ್ದೇಶಿತ ಕೇಂದ್ರ ಸ್ಥಾಪನೆಗೆ ಅಗತ್ಯವಾದ ಜಮೀನು ಬೆಂಗಳೂರಿನ ಕ್ವಿನ್ ಸಿಟಿಯಲ್ಲಿ ಒದಗಿಸುವ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸುವೆ ಎಂದರು.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಫಾರ್ಮಾ ಉದ್ಯಮ ಸ್ಥಾಪನೆಗೆ ಬೇಕಾದ ಜಮೀನು ಲಭ್ಯವಿದೆ. ಬೆಂಗಳೂರಿನಾಚೆ ಹೂಡಿಕೆ, ಉದ್ಯಮ ಸ್ಥಾಪನೆಗೆ ಆಕರ್ಷಕ ರಿಯಾಯಿತಿ, ಕೈಗಾರಿಕಾ ಪ್ರದೇಶದಲ್ಲಿ ನಾಗರಿಕ ಸವಲತ್ತುಗಳ ನಿವೇಶನ ಒದಗಿಸಲಾಗುವುದು ಎಂದು ಸಚಿವ ಎಂ.ಬಿ.ಪಾಟೀಲ ಭರವಸೆ ನೀಡಿದರು.
ಫಾರ್ಮಾ ಪಾರ್ಕ್
ಫಾರ್ಮಾಸುಟಿಕಲ್ ಪಾರ್ಕ್ ಸ್ಥಾಪಿಸಲು ಉದ್ದೇಶಿಸಿರುವ ಕೋಲಾರದ ಶ್ರೀನಿವಾಸಪುರ ಮತ್ತು ಚಾಮರಾಜನಗರದಲ್ಲಿ ತಲಾ 1,000 ಎಕರೆ ಜಾಗವಿದೆ. ಔಷಧ ತಯಾರಿಕೆ ಕಂಪನಿಗಳ ಹೂಡಿಕೆಗೆ
ಪ್ರಶಸ್ತ ನೆಲೆಯಾಗಿವೆ ಎಂದರು.
ರಾಜ್ಯದಲ್ಲಿ ಉದ್ಯಮಗಳಿಗೆ ಒಂದು ಕಿಲೋ ಲೀಟರ್ ನೀರಿಗೆ 50 ರೂ. ವಿಧಿಸಲಾಗುತ್ತಿದೆ. ನೆರೆಯ ರಾಜ್ಯಗಳಲ್ಲಿ 120 ರೂ.ಗೆ ಏರಿಸಲಾಗಿದೆ. ಕೈಗಾರಿಕಾ ಪ್ರದೇಶಗಳಲ್ಲಿರುವ ಕಂಪನಿಗಳು ಪ್ರತ್ಯೇಕವಾಗಿ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ಹೊಂದುವ ಬದಲು ಸಾಮೂಹಿಕವಾಗಿ ಮಾಡಿಕೊಂಡರೆ ಮಿತವ್ಯಯ ಸಾಧಿಸಬಹುದು ಸಚಿವ ಎಂ.ಬಿ.ಪಾಟೀಲ ಸಲಹೆ ನೀಡಿದರು.
ದುಂಡು ಮೇಜಿನ ಸಭೆಯಲ್ಲಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ವಿವಿಧ ಫಾರ್ಮಾ ಕಂಪನಿಗಳ ಪ್ರಮುಖರಾದ ವಿಕ್ರಾಂತ್ ಶ್ರೋತ್ರೀಯ, ಶ್ರೀನಿವಾಸ್, ಅನಿರಾಗ್ ಬಗಾರಿಯ ಇನ್ನಿತರರು ಇದ್ದರು.