ಬೊಮ್ಮನಹಳ್ಳಿಯ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಪ್ರಾಯೋಗಿಕ ಜಾರಿ
ಮೊದಲ ಹಂತದಲ್ಲಿ 38 ವಾಹನಗಳಿಗೆ ಉಪಕರಣ ಜೋಡಣೆ
ಬೆಂಗಳೂರು: ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕ ಹಾಗೂ ಸುಧಾರಣೆಗೊಳಿಸುವ ಹಿನ್ನೆಲೆಯಲ್ಲಿ ಜಿಪಿಎಸ್ ಪೈಲಟ್ ಟ್ರ್ಯಾಕಿಂಗ್ ವ್ಯವಸ್ಥೆಗೆ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಶುಕ್ರವಾರ ಚಾಲನೆ ನೀಡಲಾಗಿದೆ.
ಕಸ ಸಂಗ್ರಹಿಸುವ ಆಟೋಗಳಿಗೆ ಪ್ರಾಯೋಗಿಕವಾಗಿ ಅಳವಡಿಸುವ ಸಂಬಂಧ ಎಚ್‌ಎಸ್‌ಆರ್ ಲೇಔಟ್‌ನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೊಮ್ಮನಹಳ್ಳಿ ಶಾಸಕ ಸತೀಶ ರೆಡ್ಡಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕ ಸತೀಶ್ ರೆಡ್ಡಿ, ಕಸ ಸಂಗ್ರಹಣೆಯಲ್ಲಿ ಪಾರದರ್ಶಕತೆ ತರಲು ಹಾಗೂ ಆರೋಪ-ಪ್ರತ್ಯಾರೋಪ ತಪ್ಪಿಸಲು ತಂತ್ರಜ್ಞಾನ ಬಳಕೆ ಅಗತ್ಯವಾಗಿದೆ. ಇಂತಹ ವಿನೂತನ ವ್ಯವಸ್ಥೆಯಿಂದ ನಗರವನ್ನು ಕಾಡುತ್ತಿರುವ ತ್ಯಾಜ್ಯ-ವ್ಯಾಜ್ಯ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದ ಅವರು, ಪೌರಕಾರ್ಮಿಕರ ಖಾಲಿ ಹುದ್ದೆಗಳಿಗೆ ತಕ್ಷಣವೇ ನೇಮಕ ಮಾಡುವಂತೆ ಆಯುಕ್ತರನ್ನು ಕೋರಿದರು.
208 ಆಟೋಗಳಿಗೆ ಜಿಪಿಎಸ್ ಅಳವಡಿಕೆ ಗುರಿ:
ದಕ್ಷಿಣ ಪಾಲಿಕೆ, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮ (ಬಿಎಸ್‌ಡಬ್ಲ್ಯುಎಂಎಲ್), ಲೆಸ್ಟ್ ಬಿ ದಿ ಚೇಂಜ್ ಎನ್‌ಜಿಒ ಹಾಗೂ ಇಂಟೆಲ್ ಕಂಪನಿಯ ಜಂಟಿ ಸಹಯೋಗದಲ್ಲಿ ಕಸ ಸಂಗ್ರಹಣಾ ಆಟೋಗಳಿಗೆ ಜಿಪಿಎಸ್ ಟ್ರ್ಯಾಕಿಂಗ್ ಅಳವಡಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಬೊಮ್ಮನಹಳ್ಳಿ ವಲಯದಲ್ಲಿ ಅಂದಾಜು 208 ತ್ಯಾಜ್ಯ ಸಂಗ್ರಹಣಾ ವಾಹನಗಳಿದ್ದು, ಈ ಪೈಕಿ ಎಚ್‌ಎಸ್‌ಆರ್ ಲೇಔಟ್‌ನ 36 ಆಟೋಗಳಿಗೆ ಪ್ರಾಯೋಗಿಕವಾಗಿ ಉಪಕರಣ ಅಳವಡಿಸಲಾಗಿದೆ. ಉಳಿದ ಆಟೋಗಳಿಗೆ ನಂತರದಲ್ಲಿ ಅಳವಡಿಸಲು ಪಾಲಿಕೆ ನಿರ್ಧರಿಸಿದೆ.
ರಿಯಲ್-ಟೈಮ್ ಟ್ರ್ಯಾಕಿಂಗ್:
ಜಿಪಿಎಸ್ ಟ್ರ್ಯಾಕಿಂಗ್ ಮೂಲಕ ಪ್ರತಿದಿನದ ಕಸ ನಿರ್ವಹಣೆ ಕುರಿತ ಮಾನಿಟರಿಂಗ್ ಕಾರ್ಯ ಹಾಗೂ ಆಟೋಗಳ ಚಲನವಲನ, ನಿಗದಿಪಡಿಸಿದ ರಸ್ತೆಗಳ ಸಂಚಾರ, ಸಮಯ, ಪ್ರಸ್ತುತ ಆಟೋ ನಿಂತರುವ ಸ್ಥಳ ಹಾಗೂ ಇನ್ನಿತರ ಮಾಹಿತಿಯನ್ನು ರಿಯಲ್-ಟೈಮ್ ಟ್ರ್ಯಾಕ್ ಮಾಡಲಾಗುತ್ತದೆ. ಜಿಪಿಎಸ್ ಜತೆಗೆ ‘ಸೇವಕ್’ ತಂತ್ರಜ್ಞಾನವನ್ನು ಬಳಸಿ ಪ್ರತಿ ಮನೆಗಳಲ್ಲಿ ಕಸದ ತೂಕ ಹಾಗೂ ವಿಂಗಡಣೆಯನ್ನು ಮಾನಿಟರ್ ಮಾಡಲಾಗುತ್ತದೆ. ಸರಿಯಾಗಿ ಕಸ ವಿಂಗಡಿಸಿ ನೀಡುವ ನಾಗರಿಕರಿಗೆ 0 ಯಿಂದ 5 ಸ್ಟಾರ್ ರೇಟಿಂಗ್ ನೀಡಲಾಗುತ್ತದೆ. ಸತತವಾಗಿ ಕಸ ನೀಡದ ಮನೆಗಳನ್ನು ಸಿಸ್ಟಮ್ ಮೂಲಕ ಗುರುತಿಸಿ ದಂಡ ವಿಧಿಸಲು ಮಾರ್ಷಲ್ಸ್‌ಗಳಿಗೆ ಅಗತ್ಯ ಡೇಟಾವನ್ನು ಈ ತಂತ್ರಜ್ಞಾನದ ಮೂಲಕ ಒದಗಿಸಲಾಗುತ್ತದೆ.
ಈ ವೇಳೆ ದಕ್ಷಿಣ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್, ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ ಸತೀಶ್ ಬಾಬು, ಇಂಟೆಲ್ ಸಂಸ್ಥೆಯ ಹಿರಿಯ ನಿರ್ದೇಶಕ ಮಾನಸ್, ಬಿಎಸ್‌ಡಬ್ಲ್ಯುಎಂಎಲ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಮಾಮಣಿ ಹಾಜರಿದ್ದರು.
ವಾಜಪೇಯಿ ಕ್ರೀಡಾಂಗಣ ವೀಕ್ಷಣೆ
ಕಾರ್ಯಕ್ರಮದ ಬಳಿಕ ಶಾಸಕ ಹಾಗೂ ಆಯುಕ್ತರು ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಹೊರಂಗಣ ಕ್ರೀಡಾಂಗಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ಭದ್ರತೆ ಒದಗಿಸುವಂತೆ ಶಾಸಕರ ಮನವಿ ಆಧರಿಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ಆಯುಕ್ತರು ನೀಡಿದರು.