ಗಾಜಿನ ಮನೆಯ ಪ್ರವೇಶ ದ್ವಾರದ ಇಕ್ಕೆಲಗಳಲ್ಲಿ ಗಂಗರ ಕಾಲದ ದೇವಾಲಯಗಳ ಆಕರ್ಷಕ ಪ್ರವೇಶದ್ವಾರ ಮತ್ತು ಕಂಬಗಳ ಮಾದರಿ ಇರಲಿದೆ. ಕೇಂದ್ರ ಭಾಗದ ಮುಂಭಾಗ ಇಂಡೋ-&ಅಮೇರಿಕನ್ ಹೈಬ್ರಿಡ್ ಸೀಡ್ಸ್ ಕಂಪನಿಯ ಆಕರ್ಷಕ ಹೂ ಜೋಡಣೆ ಕಣ್ಮನ ಸೆಳೆಯಲಿದೆ. ಕ್ಯಾಲಿದ್ರೋಚಿ, ವೈವಿಧ್ಯಮಯ ಜಿರೇನಿಯಂಗಳು, ಇಂಪೇಷನ್ಸ್, ಆಂಥೋರಿಯಂಗಳು ಗಾರಿವಿನಿಯಾ, ಜೆರ್ಬೆರಾ, ವಿವಿಧ ಬಗೆಯ ಎಕ್ಸಾಟಿಕ್ ಹೂವುಗಳು, ವಿವಿಧ ಫೋಲಿಯೇಜ್ ಗಿಡಗಳ ಜೋಡಣೆ ಇರುತ್ತದೆ. ಒಟ್ಟಾರೆ 2.75 ಲಕ್ಷಕ್ಕೂ ಹೆಚ್ಚಿನ ವಿಶೇಷ ಹೂ ಮತ್ತು ಎಲೆ ಜಾತಿಯ ಗಿಡಗಳನ್ನು ಪ್ರದರ್ಶಿಸಲಿದ್ದಾರೆ. ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಗಂಗರ ಕಾಲದ ಬೇಗೂರು ದೇವಾಲಯದ ಪುಷ್ಪ ಮಾದರಿ ಪ್ರಮುಖ ಆಕರ್ಷಣೆಯಾಗಲಿದೆ. ಗಂಗರ ಕಾಲದ ನಗರೇಶ್ವರ ದೇವಾಲಯವು ಸರಳ ಹಾಗೂ ಸುಂದರವಾದ ಚೌಕಾಕಾರದ ಗರ್ಭಗುಡಿ ಮತ್ತು ಮುಖಮಂಟಪವನ್ನು ಹೊಂದಿದೆ. ದೇವಾಲಯದ ಆವರಣದಲ್ಲಿ ಸುಂದರವಾದ ಕೆತ್ತನೆಗಳುಳ್ಳ ಕಂಬಗಳು, ವೀರಗಲ್ಲುಗಳು ಮತ್ತು ಪ್ರಾಚಿನ ಶಿಲ್ಪಗಳನ್ನು ಕಾಣಬಹುದಾಗಿದೆ. ಪ್ರತಿರೂಪವನ್ನು 50 ಅಡಿ ಉದ್ದ, 24 ಅಡಿ ಅಗಲ ಹಾಗೂ 26 ಅಡಿ ಎತ್ತರದಲ್ಲಿ ನಿರ್ಮಿಸಲಿದ್ದು, ಒಂದು ಬಾರಿಗೆ 2.15 ಲಕ್ಷ ಶ್ವೇತ, ಹಳದಿ, ಪಿಂಕ್ ಮತ್ತು ರಸ್ಟ್ ವರ್ಣಗಳ ಸೇವಂತಿಗೆ ಹೂಗಳು ಮತ್ತು 90 ಸಾವಿರ ಕೆಂಪು ಮತ್ತು ಕಿತ್ತಳೆ ವರ್ಣದ ಆಕರ್ಷಕ ಗುಲಾಬಿ ಹೂಗಳು ಸೇರಿ ಒಟ್ಟಾರೆ 3.05 ಲಕ್ಷ ಹೂಗಳನ್ನು, ಬಳಸಲಾಗುತ್ತಿದೆ.