SIR ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ ಬೆನ್ನಲ್ಲೇ ಎಚ್ಚೆತ್ತ ಚುನಾವಣಾ ಆಯೋಗ: ಕಟ್ಟುನಿಟ್ಟಾಗಿ ಮಾರ್ಗಸೂಚಿ ಪಾಲಿಸಲು ಆದೇಶ!

SIR ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ ಬೆನ್ನಲ್ಲೇ ಎಚ್ಚೆತ್ತ ಚುನಾವಣಾ ಆಯೋಗ: ಕಟ್ಟುನಿಟ್ಟಾಗಿ ಮಾರ್ಗಸೂಚಿ ಪಾಲಿಸಲು ಆದೇಶ!
SIR ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ ಬೆನ್ನಲ್ಲೇ ಎಚ್ಚೆತ್ತ ಚುನಾವಣಾ ಆಯೋಗ: ಕಟ್ಟುನಿಟ್ಟಾಗಿ ಮಾರ್ಗಸೂಚಿ ಪಾಲಿಸಲು ಆದೇಶ!
Published on

ಪ್ರಮುಖ ಮುಖ್ಯಾಂಶಗಳು

  • ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಲೋಪ ಆರೋಪ
  • ಆರೋಪ ಬೆನ್ನಲ್ಲೇ ಎಚ್ಚೆತ್ತುಕೊಂಡ ಚುನಾವಣಾ ಆಯೋಗ
  • ಬಿಎಲ್‌ಒಗಳಿಗೆ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಖಡಕ್ ಸೂಚನೆ
  • ಕಟ್ಟುನಿಟ್ಟಾಗಿ ಆಯೋಗದ ಮಾರ್ಗಸೂಚಿ ಪಾಲಿಸಲು ಆದೇಶ
ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯ (SIR) ಪ್ರಕ್ರಿಯೆಯಲ್ಲಿ ಹಲವು ಗಂಭೀರ ಲೋಪದೋಷಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್, ಇಡೀ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಹಾಗೂ ಪಾರದರ್ಶಕವಾಗಿ ನಡೆಸಲು ಎಲ್ಲಾ ಚುನಾವಣಾಧಿಕಾರಿಗಳಿಗೆ ಖಡಕ್ ನಿರ್ದೇಶನಗಳನ್ನು ನೀಡಿದ್ದಾರೆ.
ಮತಗಟ್ಟೆ ಮಟ್ಟದ ಅಧಿಕಾರಿಗಳು (BLO) ನಿಯಮಾನುಸಾರ ಮತದಾರರ ಮನೆಗಳಿಗೆ ಭೇಟಿ ನೀಡದೆ, ಕಚೇರಿಗಳಲ್ಲೇ ಕುಳಿತು ಎನ್ಯುಮರೇಷನ್ ಫಾರ್ಮ್‌ಗಳನ್ನು ವಿತರಿಸುತ್ತಿದ್ದಾರೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗವು, ಇನ್ನು ಮುಂದೆ ಕಚೇರಿಗಳಿಂದ ಫಾರ್ಮ್‌ಗಳನ್ನು ವಿತರಿಸುವಂತಿಲ್ಲ ಮತ್ತು ಚುನಾವಣಾ ಆಯೋಗದ ಅಧಿಕೃತ ಮಾರ್ಗಸೂಚಿಗಳ ಪ್ರಕಾರವೇ ಎನ್ಯುಮರೇಷನ್ ಫಾರ್ಮ್‌ಗಳನ್ನು ಹಂಚಿಕೆ ಮಾಡಬೇಕು ಎಂದು ಕಟ್ಟುನಿಟ್ಟಾಗಿ ತಿಳಿಸಿದೆ.
ಇದಕ್ಕಾಗಿ ಎಲ್ಲಾ ಬಿಎಲ್‌ಒಗಳು ಕಡ್ಡಾಯವಾಗಿ ಪ್ರತಿಯೊಬ್ಬ ಮತದಾರರ ಮನೆ-ಮನೆಗೆ ಖುದ್ದಾಗಿ ಭೇಟಿ ನೀಡುವಂತೆ ಅಗತ್ಯ ನಿರ್ದೇಶನಗಳನ್ನು ಹೊರಡಿಸಬೇಕು ಎಂದು ಚುನಾವಣಾಧಿಕಾರಿಗಳಿಗೆ ಸೂಚಿಸಲಾಗಿದೆ. ವಿಶೇಷ ತೀವ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಆಯೋಗವು ನೀಡಿರುವ ನಿರ್ದೇಶನಗಳು ಮತ್ತು ಮಾರ್ಗಸೂಚಿಗಳನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸದೆ, ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮುಖ್ಯ ಚುನಾವಣಾಧಿಕಾರಿಗಳು ಎಚ್ಚರಿಸಿದ್ದಾರೆ.
ಅಲ್ಲದೆ, ಎನ್ಯುಮರೇಷನ್ ಫಾರ್ಮ್‌ಗಳನ್ನು ಭರ್ತಿ ಮಾಡಲು ಕಷ್ಟಪಡುವ ಅಥವಾ ಗೊಂದಲದಲ್ಲಿರುವ ಮತದಾರರಿಗೆ ಬಿಎಲ್‌ಒಗಳು ಸ್ಥಳದಲ್ಲೇ ಅಗತ್ಯ ಸಹಾಯ ಹಸ್ತ ಚಾಚಬೇಕು. ಇದರೊಂದಿಗೆ ಸಾರ್ವಜನಿಕರು ಹೆಚ್ಚಿನ ಮಾಹಿತಿ ಹಾಗೂ ನೆರವಿಗಾಗಿ ತಮ್ಮ ಹತ್ತಿರದ ಮತದಾರರ ಸೌಲಭ್ಯ ಕೇಂದ್ರಗಳಿಗೆ ಭೇಟಿ ನೀಡುವ ಆಯ್ಕೆಯ ಬಗ್ಗೆಯೂ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಲಾಗಿದೆ.

ಆರೋಪಗಳೇನು?

ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಗಂಭೀರ ಆರೋಪಗಳನ್ನು ಮಾಡಿವೆ. ಬಿಎಲ್‌ಒಗಳು ಚುನಾವಣಾ ಆಯೋಗದ ನಿಯಮಾವಳಿಗಳಂತೆ ಮತದಾರರ ಮನೆಗಳಿಗೆ ಭೇಟಿ ನೀಡಿ ಎನ್ಯುಮರೇಷನ್ ಫಾರ್ಮ್‌ಗಳನ್ನು ವಿತರಿಸುತ್ತಿಲ್ಲ, ಬದಲಿಗೆ ಕಚೇರಿಗಳಲ್ಲೇ ಕುಳಿತು ತಮಗೆ ಬೇಕಾದಂತೆ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಪ್ರಭಾವ ಬಳಸಿ, ತಮಗೆ ಅನುಕೂಲವಾಗುವಂತೆ ಕೆಲವು ನಿರ್ದಿಷ್ಟ ವರ್ಗ ಹಾಗೂ ಪ್ರದೇಶಗಳ ಮತದಾರರ ಹೆಸರುಗಳನ್ನು ಸೇರಿಸಲು ಮತ್ತು ವಿಪಕ್ಷಗಳ ಬೆಂಬಲಿಗರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದು ದೂರಿದ್ದಾರೆ. ಸ್ಥಳೀಯ ಆಡಳಿತ ಮತ್ತು ಬಿಎಲ್‌ಒ ಅಧಿಕಾರಿಗಳ ಮೇಲೆ ಆಡಳಿತ ಪಕ್ಷದ ನಾಯಕರು ಒತ್ತಡ ಹೇರುತ್ತಿದ್ದು, ಎಸ್‌ಐಆರ್ ಪ್ರಕ್ರಿಯೆಯ ಪಾರದರ್ಶಕತೆಯನ್ನು ಗಾಳಿಗೆ ತೂರಲಾಗಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್​ ಆರೋಪ ಮಾಡಿದೆ. ಲೋಪದೋಷಗಳು ವ್ಯಾಪಕವಾಗಿ ಕೇಳಿಬಂದ ಹಿನ್ನೆಲೆಯಲ್ಲಿಯೇ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರು ಮನೆ-ಮನೆಗೆ ಭೇಟಿ ನೀಡಿ ಕಟ್ಟುನಿಟ್ಟಾಗಿ ಮಾರ್ಗಸೂಚಿ ಪಾಲಿಸುವಂತೆ ಎಲ್ಲಾ ಚುನಾವಣಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net