ಒತ್ತುವರಿ ತೆರವು ನೆಪದಲ್ಲಿ ಒಕ್ಕಲೆಬ್ಬಿಸುವುದು ಸರಿಯೇ?

clearing-encroachments
clearing-encroachments
Published on

ಪ್ರಮುಖ ಮುಖ್ಯಾಂಶಗಳು

  • ಜಿಬಿಎ, ಪಾಲಿಕೆಗೆ ಬೀದಿ ಬದಿ ವ್ಯಾಪಾರಿಗಳ ಪ್ರಶ್ನೆ
  • ನಾಳೆಯಿಂದ ಮತ್ತೆ ಆಪರೇಷನ್ ಫುಟ್‌ಪಾತ್ ಶುರು
ಬೆಂಗಳೂರು: ನಗರದ ಪಂಚ ಪಾಲಿಕೆಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪಾದಚಾರಿ ಮಾರ್ಗಗಳಲ್ಲಿನ ಅನಧಿಕೃತ ಭಾಗಗಳನ್ನು ತೆರವುಗೊಳಿಸುವ ಪ್ರಕ್ರಿಯೆಗೆ ಬೀದಿ ಬದಿ ವ್ಯಾಪಾರಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ತೆರವು ಕಾರ್ಯಾಚರಣೆ ನೆಪದಲ್ಲಿ ನಮ್ಮನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ವ್ಯಾಪಾರಿ ಸಮೂಹ ಕಾರ್ಪೋರೇಷನ್ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಪಾದಚಾರಿಗಳಿಗೆ ಅಡ್ಡಿ ಮಾಡುವ ಪ್ರಕರಣಗಳಲ್ಲಿ ತೆರವು ಕಾರ್ಯ ಸರಿಯಿದ್ದರೂ, ಇದೇ ನೆಪದಲ್ಲಿ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಿನೋಡುವ ರೀತಿ ಬೀದಿಬದಿ ವ್ಯಾಪಾರಿಗಳನ್ನು ಹೊರಹಾಕಲಾಗುತ್ತಿದೆ. ಸುಪ್ರೀಂಕೋರ್ಟ್ ಆದೇಶವನ್ನೇ ಎತ್ತೀ ತೋರಿಸುವ ಪಾಲಿಕೆಗಳು, ಅದೇ ನ್ಯಾಯಾಲಯದ ಇತರ ಆದೇಶದಂತೆ ವ್ಯಾಪಾರಿಗಳಿಗೆ ಗುರುತಿಸಿಚೀಟಿ ನೀಡಿ ಕಾಯಂ ಸ್ಥಾನವನ್ನು ಏಕೆ ನಿಗದಿ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ತೆರವು ಕಾರ್ಯಾಚರಣೆ ವೇಳೆ ಅಂಗಡಿಗಳ ಮುಂದೆ ಇರಿಸಿದ್ದ ವಸ್ತುಗಳನ್ನು ಎತ್ತಿಕೊಳ್ಳಲು ಅವಕಾಶ ನೀಡದೆ ಜಪ್ತಿ ಮಾಡುತ್ತಿರುವುದು ಬಡವರ ಹೊಟ್ಟೆ ಮೇಲೆ ಬರೆ ಹಾಕುವ ಕೆಲಸ ನಡೆಯುತ್ತಿದೆ. ಕಾರ್ಯಾಚರಣೆಗೂ ಮುನ್ನ ನೋಟಿಸ್ ನೀಡುವಂತೆ ಸಚಿವರು ಅಧಿಕಾರಿಗಳಿಗೆ ತಿಳಿಸಿದ್ದರೂ, ಆ ಸೂಚನೆ ಪಾಲನೆಯಾಗುತ್ತಿಲ್ಲ. ಜತೆಗೆ ಯಾವ ಸ್ಥಳವು ನಿಷೇಧಿತ ಜಾಗ ಎಂಬುದನ್ನು ಗುರುತು ಮಾಡಲು ಅಧಿಕಾರಿಗಳು ವಿಫಲರಾಗಿದ್ದಾರೆ. ಅವರ ವೈಫಲ್ಯದಿಂದ ನಮಗೆಲ್ಲ ತೊಂದರೆ ಆಗುತ್ತಿದೆ ಎಂದು ಹಲವು ವ್ಯಾಪಾರಿಗಳು ದೂರಿದ್ದಾರೆ.

ನಾಳೆಯಿಂದ ಮತ್ತೆ ಕಾರ್ಯಾಚರಣೆ:

ಭಾನುವಾರ ವಾರದ ರಜೆ ಕಾರಣ ತೆರವು ಕಾರ್ಯಚರಣೆಗೆ ಬಿಡುವು ನೀಡಲಾಗಿತ್ತು. ಸೋಮವಾರದಿಂದ ಮತ್ತೆ ಆಪರೇಷನ್ ಫುಟ್‌ಪಾತ್ ಮುಂದುವರಿಸಲು ಐದೂ ಪಾಲಿಕೆಗಳು ಸಜ್ಜಾಗಿವೆ. ಈಗಾಗಲೇ ಒಟ್ಟು 266.13 ಕಿ.ಮೀ. ಉದ್ದದ ಫುಟ್‌ಪಾತ್ ಮೇಲಿದ್ದ ಒತ್ತುವರಿಯನ್ನು ಮುಕ್ತಗೊಳಿಸಿದ್ದು, ಜು.10ರವರೆಗೂ ಮುಂದುವರಿಯಲಿದೆ.
ತೆರವು ಕಾರ್ಯದ ಜತೆ ಜತೆಯಲ್ಲೇ ಫುಟ್‌ಪಾತ್ ದುರಸ್ತಿಯತ್ತಲೂ ಪಾಲಿಕೆಗಳು ಗಮನ ಹರಿಸಿವೆ. ಪ್ರಮುಖ ಸ್ಥಳಗಳಲ್ಲಿ ಕಿತ್ತುಹೋಗಿರುವ ಟೈಲ್ಸ್, ಕಾಬೂಲ್‌ಸ್ಟೋನ್ಸ್ ಹಾಗೂ ಮೀಡಿಯನ್ ಸರಿಪಡಿಸುವ ಕೆಲಸವನ್ನು ಕೈಗೆತ್ತಿಕೊಳ್ಳುವಂತೆ ಜಿಬಿಎ ಮುಖ್ಯಸ್ಥರು ಸೂಚಿಸಿರುವ ಹಿನ್ನೆಲೆಯಲ್ಲಿ ಪಾದಚಾರಿ ಮಾರ್ಗಗಳನ್ನು ನಾಗರಿಕ ಸ್ನೇಹಿಯಾಗಿಸುವ ಕಾರ್ಯವೂ ನಡೆದಿದೆ. ಇದಕ್ಕಾಗಿ ಸರ್ಕಾರ 70 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಮುಂದಿನ ಒಂದು ತಿಂಗಳಲ್ಲಿ ಹೆಚ್ಚಿನ ಫುಟ್‌ಪಾತ್‌ಗಳನ್ನು ದುರಸ್ತಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net