ಮಳೆನೀರು ಹರಿವಿಗೆ ಚರಂಡಿ ವ್ಯವಸ್ಥೆ ಕಲ್ಪಿಸಲು ಸೂಚನೆ

drainage-system
drainage-system
Published on

ಪ್ರಮುಖ ಮುಖ್ಯಾಂಶಗಳು

  • ಕದಿರೇನಹಳ್ಳಿ ಅಂಡರ್‌ಪಾಸ್‌ನಲ್ಲಿ ಶಾಶ್ವತ ಸಮಸ್ಯೆಗೆ ಪರಿಹಾರ
ಬೆಂಗಳೂರು: ನಗರದ ಕದಿರೇನಹಳ್ಳಿ ಕೆಳಸೇತುವೆಯಲ್ಲಿ ಮಳೆನೀರು ಹರಿವಿಗೆ ಚರಂಡಿ ವ್ಯವಸ್ಥೆ ಕಲ್ಪಿಸಿ ಪರಿಹಾರ ಒದಗಿಸುವಂತೆ ದಕ್ಷಿಣ ಪಾಲಿಕೆಯ ಅಭಿವೃದ್ಧಿ ವಿಭಾಗದ ಅಪರ ಆಯುಕ್ತ ಡಾ. ನವೀನ್ ಕುಮಾರ್ ರಾಜು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜೋರು ಮಳೆಯಾದಾಗ ಕದಿರೇನಹಳ್ಳಿ ಕೆಳಸೇತುವೆ, ಕದಿರೇನಹಳ್ಳಿ ಕ್ರಾಸ್, ಯಲಚೇನಹಳ್ಳಿ ಕೆರೆ ಬಳಿಯಲ್ಲಿನ ತ್ಯಾಜ್ಯ ವರ್ಗಾವಣೆ ಜಾಗಗಳಿಗೆ ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಪ್ರಗತಿಯಲ್ಲಿರುವ ಕಾಮಗಾರಿ ತ್ವರಿತಗೊಳಿಸುವಂತೆ ಅಧಿಕಾರಿ ವರ್ಗಕ್ಕೆ ನಿರ್ದೇಶಿಸಿದರು.

ಅಂಡರ್‌ಪಾಸ್ ಜಲಾವೃತಕ್ಕೆ ಶಾಶ್ವತ ಪರಿಹಾರ:

ಕದಿರೇನಹಳ್ಳಿ ಅಂಡರ್‌ಪಾಸ್‌ನಲ್ಲಿ ಸಮರ್ಪಕ ಡ್ರೈನೇಜ್ ವ್ಯವಸ್ಥೆ ಇಲ್ಲದ ಕಾರಣ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ಈ ಹಿನ್ನೆಲೆ ಸ್ಥಳ ಪರಿಶೀಲನೆ ನಡೆಸಿದ ಅಪರ ಆಯುಕ್ತರು ಮಳೆ ನೀರು ಸರಾಗವಾಗಿ ಹರಿದು ಹೋಗಲು ಮತ್ತು ಶಾಶ್ವತವಾದ ಡ್ರೈನೇಜ್ ವ್ಯವಸ್ಥೆಯನ್ನು ಕಲ್ಪಿಸುವಂತೆ ಸ್ಥಳದಲ್ಲಿದ್ದ ಅಭಿಯಂತರರಿಗೆ ಸೂಚನೆ ನೀಡಿದರು.
ಅಂಡರ್‌ಪಾಸ್ ಗೋಡೆಗಳಿಂದ ಸೋರುವ ನೀರನ್ನು ತಡೆಗಟ್ಟಲು ಸೂಕ್ತ ತಾಂತ್ರಿಕ ಕ್ರಮ ಕೈಗೊಳ್ಳಬೇಕು. ಡ್ರೈನೇಜ್ ಪೈಪ್‌ಲೈನ್ ಅಳವಡಿಕೆಗಾಗಿ ರಸ್ತೆ ಅಗೆದಿರುವ ಜಾಗಗಳಲ್ಲಿ ತಕ್ಷಣವೇ ಸಮರ್ಪಕವಾಗಿ ಕಾಂಕ್ರೀಟ್ ಮರು ಮೇಲ್ಮೈ ಕಾಮಗಾರಿ ನಡೆಸಿ ರಸ್ತೆಯನ್ನು ದುರಸ್ತಿಗೊಳಿಸಬೇಕು ಎಂದು ಅವರು ಅಧಿಕಾರಿಗಳಿಗೆ ಆದೇಶಿಸಿದರು.
ಪರಿಶೀಲನೆ ವೇಳೆ ಪದ್ಮನಾಭನಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸ್, ಘನತ್ಯಾಜ್ಯ ನಿರ್ವಹಣಾ ನಿಗಮದ ಎಜಿಎಂ ಶ್ವೇತಾ ಹಾಗೂ ಪಾಲಿಕೆಯ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net