ಕೆ.ಆರ್. ಮಾರ್ಕೆಟ್‌ನಲ್ಲಿ ಫೈರ್ ಆಡಿಟ್ ನಡೆಸಲು ಸೂಚನೆ

kr-market
kr-market
Published on

ಪ್ರಮುಖ ಮುಖ್ಯಾಂಶಗಳು

  • ಸ್ಥಳಪರಿಶೀಲನೆ ವೇಳೆ ಅಧಿಕಾರಿಗಳಿಗೆ ಜಿಬಿಎ ಮುಖ್ಯ ಆಯುಕ್ತರ ನಿರ್ದೇಶನ
ಬೆಂಗಳೂರು: ನಗರದ ಕೆ.ಆರ್. ಮಾರುಕಟ್ಟೆಯಲ್ಲಿ ಅಗ್ನಿ ಅವಘಡ ಸಂಭವಿಸುವುದನ್ನು ತಡೆಯುವ ಸಲುವಾಗಿ ಫೈರ್ ಆಡಿಟ್ ನಡೆಸುವಂತೆ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಕೆ.ಆರ್. ಮಾರುಕಟ್ಟೆಗೆ ಮಂಗಳವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ಅಗ್ನಿಯಿಂದ ಉಂಟಾಗಬಹುದಾದ ಅಪಾಯ, ಅಗ್ನಿಶಾಮಕ ವ್ಯವಸ್ಥೆ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೂಡಲೇ ಫೈರ್ ಆಡಿಟ್ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಸುರಕ್ಷಿತವಾಗಿ ಹೊರಬರಲು ತುರ್ತು ನಿರ್ಗಮನ ವ್ಯವಸ್ಥೆಗಳು ಸಮರ್ಪಕವಾಗಿರಬೇಕು. ಜತೆಗೆ ಅಗ್ನಿಯನ್ನು ತ್ವರಿತವಾಗಿ ನಿಯಂತ್ರಿಸಲು ಅಗ್ನಿಶಾಮಕ ಪೈಪ್‌ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಒತ್ತುವರಿ ತೆರವುಗೊಳಿಸಿ:

ಮಾರುಕಟ್ಟೆ ಕಟ್ಟಡದಲ್ಲಿರುವ ಮಳಿಗೆಗಳ ಮುಂಭಾಗದಲ್ಲಿನ ಒತ್ತುವರಿ ಗುರುತಿಸಿ, ಸಂಬಂಧಪಟ್ಟವರಿಗೆ ದುಪ್ಪಟ್ಟು ದಂಡ ವಿಧಿಸಿ ತೆರವುಗೊಳಿಸಬೇಕು. ಮಾರುಕಟ್ಟೆ ಮುಂಭಾಗದಲ್ಲಿರುವ ಮಾರಾಟಗಾರರು ಅವರಿಗೆ ಮೀಸಲಾದ ಸ್ಥಳಗಳಲ್ಲಿಯೇ ವ್ಯಾಪಾರ ನಡೆಸುವಂತೆ ಕ್ರಮವಹಿಸಬೇಕು. ನಾಗರಿಕರು ಸರಾಗವಾಗಿ ನಡೆಯಲು ಅಡಚಣೆ ಉಂಟಾಗದಂತೆ ನಿಗಾ ವಹಿಸುವ ಜತೆಗೆ, ವ್ಯಾಪಾರಿಗಳು ನಿಗದಿತ ಜಾಗದಲ್ಲಿಯೇ ವ್ಯಾಪಾರ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಸ್ಥಳಪರಿಶೀಲನೆ ವೇಳೆ ಕೇಂದ್ರ ಪಾಲಿಕೆ ಆಯುಕ್ತ ಜಿ. ಜಗದೀಶ್, ಅಭಿವೃದ್ಧಿ ಅಪರ ಆಯುಕ್ತ ವೆಂಕಟಾಚಲಪತಿ, ಜಂಟಿ ಆಯುಕ್ತ ಹೇಮಂತ್ ಶರಣ್ ಮುಖ್ಯ ಅಭಿಯಂತರರಾದ ವಿಜಯ್ ಕುಮಾರ್ ಹರಿದಾಸ್, ಅಧೀಕ್ಷಕ ಅಭಿಯಂತರರು ಉಪಸ್ಥಿತರಿದ್ದರು.

ಲೀಕೇಜ್-ಪ್ರೂಫ್​​ ಪೇಂಟಿಂಗ್ ಮಾಡಿ:

ಕೆ.ಆರ್. ಮಾರುಕಟ್ಟೆಯ ಮೇಲ್ಭಾಗದಲ್ಲಿ ಅಳವಡಿಸಿರುವ ಗಾಜುಗಳಿಗೆ ಲೀಕೇಜ್-ಪ್ರೂಫ್​​ ಪೇಂಟಿಂಗ್ ಮಾಡುವ ಮೂಲಕ ಮಳೆನೀರು ಸೋರಿಕೆ ಆಗದಂತೆ ಕ್ರಮವಹಿಸಬೇಕು. ಸಜ್ಜೆಗಳಿಂದ ನೀರು ಒಳಬಾರದಂತೆ ದುರಸ್ತಿಗೊಳಿಸಬೇಕು. ಮಾರುಕಟ್ಟೆ ಕಟ್ಟಡದ 3ನೇ ಮಹಡಿ ಬಳಕೆಯಾಗದೆ ಇರುವುದನ್ನು ಗಮನಿಸಿ, ಸಂಪೂರ್ಣ ಮಹಡಿ ಸದ್ಬಳಕೆ ಮಾಡಿಕೊಳ್ಳುವ ಸಲುವಾಗಿ ಯೋಜನೆ ರೂಪಿಸಬೇಕು. ಜತೆಗೆ ಮಾರುಕಟ್ಟೆ ಕಂದಾಯ ಕಚೇರಿ ಹಾಗೂ ತ್ಯಾಜ್ಯ ನಿರ್ವಹಣೆ ಕಚೇರಿ ಸ್ಥಾಪನೆಗೆ ಕ್ರಮ ವಹಿಸಲು ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net