ಜಿಬಿಎ, 5 ಪಾಲಿಕೆಗಳಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ

independence-day
independence-day
Published on

ಪ್ರಮುಖ ಮುಖ್ಯಾಂಶಗಳು

  • ಉತ್ತರ ಕಾರ್ಪೋರೇಷನ್‌ನಲ್ಲಿ ಪೌರಕಾರ್ಮಿಕರಿಗೆ ಸನ್ಮಾನ
  • ಸಸಿ ನೆಟ್ಟು ಪರಿಸರ ಸಂರಕ್ಷಣೆ ಸಂದೇಶ ಸಾರಿದ ಮಹೇಶ್ವರ ರಾವ್

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಪಂಚ ನಗರ ಪಾಲಿಕೆಗಳಲ್ಲಿ 80ನೇ ಸ್ವಾತಂತ್ರ್ಯೋತ್ಸವ ದಿನವನ್ನು ಆಚರಿಸಲಾಯಿತು.

ಜಿಬಿಎ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್ ಅವರು ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಿದರು. ಇದೇ ವೇಳೆ ‘ಬೆಂಗಳೂರು ಹಸಿರೂರು ಅಭಿಯಾನ’ದ ನಿಮಿತ್ತ ಅವರು ಸಸಿಯೊಂದನ್ನು ನೆಟ್ಟು ಪರಿಸರ ಸಂರಕ್ಷಣೆ ಹಾಗೂ ಹಸಿರು ನಗರ ನಿರ್ಮಾಣದ ಸಂದೇಶವನ್ನು ರವಾನಿಸಿದರು. ಈ ವೇಳೆ ವಿಶೇಷ ಆಯುಕ್ತ ನಿತೀಶ್, ಆಡಳಿತ ವಿಭಾಗದ ಉಪ ಆಯುಕ್ತ ರವೀಂದ್ರ ಕರಲಿಂಗಣ್ಣವರ್ ಸೇರಿ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪಾಲಿಕೆಗಳಲ್ಲೂ ರಾಷ್ಟ್ರಧ್ವಜಾರೋಹಣ:

ಪಂಚ ನಗರ ಪಾಲಿಕೆಗಳ ಕಚೇರಿಯಲ್ಲಿ ಆಯಾ ಕಾಪೋರೇಷನ್‌ನ ಆಯುಕ್ತರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಉತ್ತರ ಪಾಲಿಕೆಯಲ್ಲಿ ಪಿ. ಸುನೀಲ್ ಕುಮಾರ್, ದಕ್ಷಿಣ ಪಾಲಿಕೆಯಲ್ಲಿ ಕೆ.ಎನ್. ರಮೇಶ್, ಪೂರ್ವ ಪಾಲಿಕೆಯಲ್ಲಿ ಡಿ.ಎಸ್. ರಮೇಶ್, ಪಶ್ಚಿಮ ಪಾಲಿಕೆಯಲ್ಲಿ ಡಾ. ಕೆ.ವಿ. ರಾಜೇಂದ್ರ ಹಾಗೂ ಕೇಂದ್ರ ಪಾಲಿಕೆಯಲ್ಲಿ ಜಿ.ಜಗದೀಶ್ ಧ್ವಜಾರೋಹಣ ಮಾಡಿದರು.
ಉತ್ತರ ಕಾಪೋರೇಷನ್‌ನ ಆಯುಕ್ತರು ಪೌರಕಾರ್ಮಿಕರನ್ನು ಸನ್ಮಾನಿಸಿದರೆ ಪಶ್ಚಿಮ ಪಾಲಿಕೆಯ ಆಯುಕ್ತರು ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಹಾಗೂ ಲೇಖನ ಸಾಮಗ್ರಿಯನ್ನು ವಿತರಿಸಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಹಲವಾರು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಹೋರಾಡಿದ್ದಾರೆ. ಆದರಿಂದು ನಾವು, ನಮ್ಮ ಕುಟುಂಬದ ಒಳಿತಿನ ಬಗ್ಗೆ ಮಾತ್ರ ಯೋಚಿಸುವುದಕ್ಕಿಂತ ರಾಷ್ಟ್ರ ನಿರ್ಮಾಣದಲ್ಲಿ ನಮ್ಮ ಪಾತ್ರವೇನು ಎಂಬುದನ್ನು ಅರಿತು ಕರ್ತವ್ಯ ನಿರ್ವಹಿಸಬೇಕಿದೆ.
- ಪಿ. ಸುನೀಲ್ ಕುಮಾರ್, ಉತ್ತರ ಪಾಲಿಕೆ ಆಯುಕ್ತ
ಸ್ವಾತಂತ್ರ್ಯ ಎಂದರೆ ಕೇವಲ ಹಕ್ಕುಗಳನ್ನು ಚಲಾಯಿಸುವುದಷ್ಟೇ ಅಲ್ಲದೆ ಪ್ರತಿಯೊಬ್ಬರೂ ನಾಗರಿಕನು ಕರ್ತವ್ಯ ನಿರ್ವಹಿಸಿದಾಗ ಮಾತ್ರ ದೇಶ ಹಾಗೂ ಸಮಾಜ ಸುಭಿಕ್ಷವಾಗಿರಲು ಸಾಧ್ಯ. ಶಾಲಾ ಹಂತದಲ್ಲೇ ಮಕ್ಕಳಿಗೆ ನಾಗರಿಕ ಪ್ರಜ್ಞೆ ಹಾಗೂ ಜವಾಬ್ದಾರಿಯ ಪಾಠ ಕಲಿಸಬೇಕಾದ ಅಗತ್ಯವಿದೆ. ಮನೆಗಳಲ್ಲೂ ಪಾಲಕರು ತಮ್ಮ ಮಕ್ಕಳಿಗೆ ದೇಶದ ಮೇಲಿನ ಪ್ರೀತಿ, ಗೌರವ ಹಾಗೂ ನಾಗರಿಕ ಜವಾಬ್ದಾರಿ ಬಗ್ಗೆ ತಿಳಿವಳಿಕೆ ಮೂಡಿಸಬೇಕು.
- ಕೆ.ಎನ್. ರಮೇಶ್, ದಕ್ಷಿಣ ಪಾಲಿಕೆ ಆಯುಕ್ತ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net