ಮಾಣೆಕ್​ ಷಾ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ

ಜಿಬಿಎ
ಜಿಬಿಎ
Published on

ಪ್ರಮುಖ ಮುಖ್ಯಾಂಶಗಳು

  • ನಗರದಾದ್ಯಂತ ಬಿಗಿ ಪೊಲೀಸ್​ ಭದ್ರತೆ
  • ಬೆಳಗ್ಗೆ 9 ಗಂಟೆಗೆ ಸಿಎಂ ಧ್ವಜಾರೋಹಣ

ವಿಜಯವಾಣಿ ಸುದ್ದಿಜಾಲ ಬೆಂಗಳೂರು


ಸ್ವಾತಂತ್ರ್ಯೋತ್ಸವದ 80ನೇ ಆಚರಣೆಗೆ ನಗರದ ಫೀಲ್ಡ್​ ಮಾರ್ಷಲ್​ ಮಾಣೆಕ್​ ಷಾ ಪರೇಡ್​ ಮೈದಾನದಲ್ಲಿ ಸಕಲ ಸಿದ್ಧತೆ ನಡೆಯುತ್ತಿದ್ದು, ಶನಿವಾರ (ಆ.15) ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಈ ಕುರಿತು ಶುಕ್ರವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ್​ ರಾವ್​, ನಗರ ಪೊಲೀಸ್​ ಆಯುಕ್ತ ಸೀಮಂತ್​ಕುಮಾರ್​ ಸಿಂಗ್​ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿ ಪಿ.ಎಸ್​. ಕಾಂತರಾಜು ಮಾಹಿತಿ ನೀಡಿದರು.
ಈ ಬಾರಿ ಸ್ವಾತಂತ್ರ್ಯೋತ್ಸವವನ್ನು ಅದ್ಧೂರಿಯಿಂದ ಆಚರಿಸುವುದಕ್ಕೆ ತೀರ್ಮಾನಿಸಲಾಗಿದ್ದು, ಅದಕ್ಕಾಗಿ ಜಿಬಿಎ ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತ, ಪೊಲೀಸ್​ ಇಲಾಖೆ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಧ್ವಜಾರೋಹಣ ಬಳಿಕ ಸಿಎಂ ತೆರೆದ ಜೀಪಿನಲ್ಲಿ ಪೆರೇಡ್​ ಪರಿವೀಣೆ ಮತ್ತು ಗೌರವ ರೆ ಸ್ವೀಕರಿಸಿ ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವವದ ಸಂದೇಶ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಗೀತೆ "ವಂದೇ ಮಾತರಂ' ಮೊಳಗಲಿದ್ದು, ಕಾರ್ಯಕ್ರಮಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ. ಇದೇ ಪ್ರಪ್ರಥಮ ಬಾರಿಗೆ ಸ್ವಾತಂತ್ರ್ಯೋತ್ಸವವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ "ವಂದೇ ಮಾತರಂ' ರಾಷ್ಟ್ರಗೀತೆಯ ಜತೆ ಪೂರ್ತಿ ಎರಡು ಬಾರಿ ಹಾಡಲಿದ್ದಾರೆ.
ಕೆಎಸ್​ಆರ್​ಪಿ, ಸಿಆರ್​ಪಿಎಫ್​, ಬಿಎಸ್​ಎಫ್​, ಸಿಎಎಆರ್​, ತೆಲಂಗಾಣ ಪೊಲೀಸ್​ ತಂಡ ಸೇರಿ ಒಟ್ಟು 37 ತುಕಡಿಗಳಲ್ಲಿ 1,360 ಮಂದಿ ಪಥ ಸಂಚಲನ ನಡೆಸಿಕೊಡಲಿದ್ದಾರೆ. ನಗರದ ಸರ್ಕಾರಿ ಮತ್ತು ಜಿಬಿಎ ಶಾಲೆಗಳ 2,200 ವಿದ್ಯಾರ್ಥಿಗಳು ಸಾಂಸತಿಕ ಕಾರ್ಯಕ್ರಮ ನೀಡಲಿದ್ದು, "ವಂದೇ ಮಾತರಂ ಶಾಂತಿ ಮಂತ್ರ ನೃತ್ಯ ರೂಪಕ' ಸಾಂಸತಿಕ ಕಾರ್ಯಕ್ರಮದಲ್ಲಿ ಅನಾವರಣಗೊಳ್ಳಲಿದೆ ಎಂದು ವಿವರಿಸಿದರು.
ಪೊಲೀಸರಿಂದ ಬಿಗಿ ಭದ್ರತೆ:
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಸಾವಿರಾರು ಪೊಲೀಸ್​ ಸಿಬ್ಬಂದಿಯನ್ನು ಭದ್ರತೆ ಮತ್ತು ನಿಗಾ ವಹಿಸುವ ಕಾರ್ಯಗಳಿಗೆ ನಿಯೋಜಿಸುವ ಮೂಲಕ ನಗರದಾದ್ಯಂತ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಪೊಲೀಸ್​ ಇಲಾಖೆ ಮಾಡಿದೆ. ಪರೇಡ್​ ಮೈದಾನ ಆವರಣದ ಒಳಗೆ ಮತ್ತು ಹೊರಗೆ ಒಟ್ಟು 110 ಸಿಸಿ ಕ್ಯಾಮರಾಗಳನ್ನು ಅಳವಡಿಸಿ, ಭದ್ರತೆಯ ದೃಷ್ಟಿಯಿಂದ ಪ್ರದೇಶವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಕಾರ್ಯಕ್ರಮದ ಸುಗಮ ನಿರ್ವಹಣೆ ಮತ್ತು ಸ್ಥಳದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು, ಪರೇಡ್​ ಮೈದಾನದಲ್ಲಿ ನಿಗಾ ವಹಿಸಲು ಕಳೆದ 15 ದಿನಗಳಿಂದ ಪೊಲೀಸ್​ ಸಿಬ್ಬಂದಿ ನಿಯೋಜಿಸಲಾಗಿದೆ. ನಗರದಾದ್ಯಂತ ಇರುವ ಹೋಟೆಲ್​ಗಳು, ಲಾಡ್ಜ್​ಗಳು, ಆಶ್ರಯ ತಾಣಗಳು ಮತ್ತು ಇತರ ವಸತಿ ಸೌಕರ್ಯಗಳಲ್ಲಿ ಅನುಮಾನಾಸ್ಪದವಾಗಿ ತಂಗಿರುವ ವ್ಯಕ್ತಿಗಳ ಮೇಲೂ ಸೂಕ್ತ ನಿಗಾ ವಹಿಸಲಾಗುತ್ತಿದೆ. 
1,100 ಪೊಲೀಸ್​ ಅಧಿಕಾರಿಗಳು, ಸಿಬ್ಬಂದಿ ನಿಯೋಜನೆ:
ನಗರದ ಎಲ್ಲ ವಿಭಾಗಗಳಿಂದ ಒಟ್ಟು 1,100 ಪೊಲೀಸ್​ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇದರಲ್ಲಿ 9 ಡಿಸಿಪಿಗಳು, 17 ಎಸಿಪಿಗಳು, 49 ಪಿಐಗಳು, 106 ಪಿಎಸ್​ಐಗಳು, 49 ಎಎಸ್​ಐಗಳು, 594 ಹೆಡ್​ಕಾನ್ಸ್​ಟೇಬಲ್​/ಕಾನ್ಸ್​ಟೇಬಲ್​ಗಳು, 80 ಮಹಿಳಾ ಪೊಲೀಸ್​ ಸಿಬ್ಬಂದಿ, 153 ಸಿವಿಲ್​ ಅಧಿಕಾರಿಗಳು/ಸಿಬ್ಬಂದಿ ಮತ್ತು 29 ಕ್ಯಾಮರಾ ಸಿಬ್ಬಂದಿ ಸೇರಿದ್ದಾರೆ. ಸಂಚಾರ ನಿರ್ವಹಣೆಗಾಗಿ 3&ಡಿಸಿಪಿಗಳು, 6&ಎಸಿಪಿಗಳು, 19&ಪಿಐಗಳು, 32&ಪಿಎಸ್​ಐಗಳು, 111&ಎಎಸ್​ಐಗಳು ಮತ್ತು 430 ಎಚ್​ಸಿ/ಪಿಸಿಗಳನ್ನು ನಿಯೋಜಿಸಲಾಗಿದೆ. ಹೀಗಾಗಿ, ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಭದ್ರತೆ (ಬಂದೋಬಸ್ತ್​) ಮತ್ತು ಸಂಚಾರ ನಿರ್ವಹಣೆಗಾಗಿ ಒಟ್ಟಾರೆ 1,583 ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಜತೆಗೆ, ಪರೇಡ್​ ಮೈದಾನದಲ್ಲಿ ಭದ್ರತಾ ಕರ್ತವ್ಯಕ್ಕಾಗಿ ರಾಜ್ಯ ಮೀಸಲು ಪೊಲೀಸ್​ ಅಥವಾ ನಗರ ಸಶಸ್ತ್ರ ಮೀಸಲು ಪಡೆಯ 7 ತುಕಡಿಗಳು, 4 ಅಗ್ನಿಶಾಮಕ ವಾಹನಗಳು, 3 ಆಂಬ್ಯುಲೆನ್ಸ್​ಗಳು, 4 ಮೀಸಲು ವಾಹನಗಳು, ಒಂದು ತ್ವರಿತ ಪ್ರತಿಕ್ರಿಯೆ ತಂಡ, ಒಂದು ಡಿ-ಸ್ವಾಟ್​ ಮತ್ತು ಒಂದು ತ್ವರಿತ ಮಧ್ಯಪ್ರವೇಶ ವಾಹನವನ್ನು ನಿಯೋಜಿಸಲಾಗಿದೆ. ಒಂದು ಗರುಡ ಪಡೆ ಘಟಕವನ್ನು ಮೀಸಲಾಗಿ ಇರಿಸಲಾಗಿದೆ ಎಂದು ತಿಳಿಸಲಾಗಿದೆ.
ಪರೇಡ್​ ಮೈದಾನದ ಸುತ್ತಮುತ್ತಲಿನ ಎಲ್ಲ ಚಟುವಟಿಕೆಗಳನ್ನು ಸೂಕ್ಷ$್ಮವಾಗಿ ಗಮನಿಸಲು 100 ಸಿಸಿ ಕ್ಯಾಮರಾಗಳು, 4 ಬ್ಯಾಗೇಜ್​ ಸೆನ್ಸಾರ್​ಗಳು, 20 ಡಿಎಫ್​ಎಂಡಿ ಮತ್ತು 40 ಎಚ್​ಎಚ್​ಎಂಡಿ ಉಪಕರಣಗಳನ್ನು ಅಳವಡಿಸಲಾಗಿದೆ. ಆಹ್ವಾನಿತರು ಮತ್ತು ಸಾರ್ವಜನಿಕರಿಗೆ ಪಾಸ್​ಗಳನ್ನು ನೀಡಲಾಗಿದ್ದು, ಪ್ರವೇಶ ದ್ವಾರಗಳಲ್ಲಿ ಭದ್ರತಾ ತಪಾಸಣೆಗೆ ಒಳಪಡುವಂತೆ ಹಾಗೂ ಪೊಲೀಸ್​ ಸಿಬ್ಬಂದಿಗೆ ಸಂಪೂರ್ಣ ಸಹಕಾರ ನೀಡುವಂತೆ ಕೋರಲಾಗಿದೆ.
* ಥಣಿಸಂದ್ರ ಸರ್ಕಾರಿ ಪ್ರೌಢಶಾಲೆಯ 800 ಮಕ್ಕಳಿಂದ ವಂದೇ ಮಾತರಂ ಶಾಂತಿ ಮಂತ್ರ ನೃತ್ಯ ರೂಪಕ
* ಪಿಳ್ಳಣ್ಣ ಗಾರ್ಡನ್​ ಸಂಯುಕ್ತ ಪದವಿ ಪೂರ್ವ ಕಾಲೇಜಿನ 750 ವಿದ್ಯಾರ್ಥಿಗಳಿಂದ ಸ್ವಾತಂತ್ರ$್ಯ ಸಂಗ್ರಾಮದ ವೈಭವ
* ಬೀದರ್​ ಹಾಗೂ ಬೆಂಗಳೂರಿನ 170 ಮಹಿಳಾ ಪೊಲೀಸ್​ ಸಿಬ್ಬಂದಿಯಿಂದ ಅಕ್ಕ ಪಡೆಯ ಕಾರ್ಯಕ್ರಮ
* ಶೇಷಾದ್ರಿಪುರಂ, ರಾಜೀವ್​ ಗಾಂಧಿ ಯುನಿವರ್ಸಿಟಿ, ರೇವಾ ಯುನಿವರ್ಸಿಟಿ, ಬೆಂಗಳೂರು ಸಿಟಿ ಯುನಿವರ್ಸಿಟಿ, ಹಾಗೂ ವಿಟಿಯು ಕಾಲೇಜಿನ ಸುಮಾರು 600 ವಿದ್ಯಾರ್ಥಿಗಳಿಂದ ಭಾರತ್​ ಜೋಡೋ ಯುವ ಸಂ ಯೋಜನೆ ಕಾರ್ಯಕ್ರಮ
* ಮೃತ್ಯುಂಜಯ ದೊಡ್ಡವಾಡ, ಸುಮಾ ಪ್ರಸಾದ್​ ಮತ್ತು ತಂಡದವರಿಂದ ನಾಡಗೀತೆ ಮತ್ತು ರೈತಗೀತೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net