ಟೋಯಿಂಗ್ ಮಾಡುವ ವಾಹನಗಳ ನಿಲುಗಡೆಗೆ ಸ್ಥಳ ಗುರುತಿಸಿ

towing-vehicles
towing-vehicles
Published on

ಪ್ರಮುಖ ಮುಖ್ಯಾಂಶಗಳು

  • ಜಿಬಿಎ ಮುಖ್ಯಸ್ಥರಿಂದ 5 ಪಾಲಿಕೆಗಳ ಆಯುಕ್ತರಿಗೆ ಸೂಚನೆ
  • ವಿವಿಧ ಇಲಾಖೆಗಳೊಂದಿಗೆ ಮಹೇಶ್ವರ್ ರಾವ್ ಸಮನ್ವಯ ಸಭೆ
ಬೆಂಗಳೂರು: ಐದು ನಗರ ಪಾಲಿಕೆಗಳಲ್ಲಿ ಟೋಯಿಂಗ್ ಮಾಡುವ ವಾಹನಗಳನ್ನು ನಿಲುಗಡೆಗೊಳಿಸಲು ಕಾರ್ಪೋರೇಷನ್‌ವಾರು ಸ್ಥಳಗಳನ್ನು ಅಂತಿಮಗೊಳಿಸುವಂತೆ ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಬಿಎ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳೊಂದಿಗೆ ಮಂಗಳವಾರ ಆಯೋಜಿದ್ದ ಸಮನ್ವಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಟೋಯಿಂಗ್ ಮಾಡಿದ ವಾಹನಗಳನ್ನು ನಿಲುಗಡೆಗೊಳಿಸುವ ಸಲುವಾಗಿ ಉತ್ತರ ಪಾಲಿಕೆಯಲ್ಲಿ ಈಗಾಗಲೇ ಸ್ಥಳವನ್ನು ಗುರುತಿಸಲಾಗಿದೆ. ಕೇಂದ್ರ ಮತ್ತು ದಕ್ಷಿಣ ಪಾಲಿಕೆಗಳಲ್ಲಿ ಸ್ಥಳ ಗುರುತಿಸುವ ಕಾರ್ಯ ಪೂರ್ಣಗೊಂಡಿದ್ದು, ಪೂರ್ವ ಹಾಗೂ ಪಶ್ಚಿಮ ಪಾಲಿಕೆಗಳಲ್ಲಿಯೂ ತ್ವರಿತವಾಗಿ ಸ್ಥಳಗಳನ್ನು ಗುರುತಿಸುವಂತೆ ಸೂಚನೆ ನೀಡಿದರು.

ವಾರದೊಳಗೆ ಸಮೀಕ್ಷಾ ವರದಿ ನೀಡಿ:

ಅರ್ಕಾವತಿ ಬಡಾವಣೆಗೆ ಹೊಂದಿಕೊಂಡಿರುವ ಜಕ್ಕೂರು ಕೆರೆಯ ಪಕ್ಕದಲ್ಲಿರುವ ಸಂಪಿಗೆಹಳ್ಳಿ ಮುಖ್ಯರಸ್ತೆಯ ಅಗಲೀಕರಣಕ್ಕೆ ಸಂಬಂಧಿಸಿ ಬಿಡಿಎ ಹಾಗೂ ಉತ್ತರ ಪಾಲಿಕೆಯ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ವಾರದೊಳಗೆ ಸಮೀಕ್ಷಾ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.
ಕೋಗಿಲು ಜಂಕ್ಷನ್‌ನ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್ ಬಳಿ ಕಲ್ವರ್ಟ್ ನಿರ್ಮಾಣ ಮಾಡುವ ಸಲುವಾಗಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ. ಅದಕ್ಕೆ ಕೂಡಲೇ ಅನುಮೋದನೆ ನೀಡುವಂತೆ ಎನ್‌ಎಚ್‌ಎಐ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಚಂದಾಪುರ ಹೊಸೂರು ರಸ್ತೆಯ ಬಳಿ ಪ್ರೀಕಾಸ್ಟ್ ಕಲ್ವರ್ಟ್ ಬಾಕ್ಸ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಸದರಿ ಸ್ಥಳದಲ್ಲಿ ಬೆಸ್ಕಾಂ ಕೇಬಲ್ ಸ್ಥಳಾಂತರಿಸಬೇಕಾಗಿದೆ. ಈ ಹಿನ್ನೆಲೆ ಎನ್‌ಎಚ್‌ಎಐ ಹಾಗೂ ಬೆಸ್ಕಾಂ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿ ಕೂಡಲೇ ಸಮಸ್ಯೆಯನ್ನು ಬಗೆಹರಿಸಿಕೊಂಡು ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಮಹೇಶ್ವರ್ ರಾವ್ ಸೂಚನೆ ನೀಡಿದರು.
ಈ ವೇಳೆ ನಗರ ಪಾಲಿಕೆಗಳ ಆಯುಕ್ತರಾದ ಡಿ.ಎಸ್. ರಮೇಶ್, ಕೆ.ಎನ್. ರಮೇಶ್, ಅಪರ ಆಯುಕ್ತರು, ಪ್ರಧಾನ ಅಭಿಯಂತರರು, ಮೆಟ್ರೋ, ಪೊಲೀಸ್, ಅಗ್ನಿಶಾಮಕ, ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ, ರೈಲ್ವೆ, ಜಲಮಂಡಳಿ, ಬೆಸ್ಕಾಂ ಮತ್ತು ಬೆಂಗಳೂರು ನಗರ ಜಿಲ್ಲಾಡಳಿತ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಜಲಮಂಡಳಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ:

ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಬೇಕಿರುವ ನಾಗವಾರ ರಸ್ತೆ, ಟ್ಯಾನರಿ ರಸ್ತೆ, ಲೋವರ್ ಅಗರಂ ರಸ್ತೆ, ತಿಮ್ಮಯ್ಯ ರಸ್ತೆ, ನೇತಾಜಿ ರಸ್ತೆ, ಸುಲ್ತಾನ್‌ಪಾಳ್ಯ ರಸ್ತೆ ಹಾಗೂ ನಾಗರಭಾವಿ ಮುಖ್ಯರಸ್ತೆಯಲ್ಲಿ ಕಾಮಗಾರಿ ಆರಂಭಿಸಬೇಕಿದೆ. ಆದರೆ, ಇದಕ್ಕೆ ಮುನ್ನ ಜಲಮಂಡಳಿ ವತಿಯಿಂದ ಕೈಗೆತ್ತಿಕೊಂಡಿರುವ ಪೈಪ್‌ಲೈನ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮುಖ್ಯ ಆಯುಕ್ತರು ಸೂಚನೆ ನೀಡಿದರು.

ಅಗ್ನಿಶಾಮಕ ವಿಭಾಗ:

ನಗರದಲ್ಲಿ 20 ಅಗ್ನಿಶಾಮಕ ಠಾಣೆಗಳು ಕಾರ್ಯನಿರ್ವಹಿಸಲಿದ್ದು, ಮಳೆಗಾಲ ಹಿನ್ನೆಲೆ ಆಯಾ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಅಗ್ನಿಶಾಮಕ ಠಾಣೆಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಅಗ್ನಿಶಾಮಕ ಠಾಣೆಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕಾರ್ಪೋರೇಷನ್‌ಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net