ಕ್ಲೈಮ್ಯಾಕ್ಸ್ ತಲುಪಿದ ಪರಿಷತ್ ಫೈಟ್: ನೂರರಷ್ಟು ವೋಟಿಂಗ್, ವಿನಯ್ ಕಾರ್ತಿಕ್ vs ಗೋವಿಂದರಾಜು ಕದನದಲ್ಲಿ ಗೆಲ್ಲೋರು ಯಾರು? Karnataka Council Election

ಕ್ಲೈಮ್ಯಾಕ್ಸ್ ತಲುಪಿದ ಪರಿಷತ್ ಫೈಟ್: ನೂರರಷ್ಟು ವೋಟಿಂಗ್, ವಿನಯ್ ಕಾರ್ತಿಕ್ vs ಗೋವಿಂದರಾಜು ಕದನದಲ್ಲಿ ಗೆಲ್ಲೋರು ಯಾರು? Karnataka Council Election
ಕ್ಲೈಮ್ಯಾಕ್ಸ್ ತಲುಪಿದ ಪರಿಷತ್ ಫೈಟ್: ನೂರರಷ್ಟು ವೋಟಿಂಗ್, ವಿನಯ್ ಕಾರ್ತಿಕ್ vs ಗೋವಿಂದರಾಜು ಕದನದಲ್ಲಿ ಗೆಲ್ಲೋರು ಯಾರು? Karnataka Council Election
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ವಿಧಾನ ಪರಿಷತ್‌ನ 7 ಸ್ಥಾನಗಳಿಗಾಗಿ ಶಾಸಕರಿಂದ ಇಂದು ಅತ್ಯಂತ ಚುರುಕಿನ ಮತದಾನ
  • ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಪ್ರಕ್ರಿಯೆ ಪೂರ್ಣಗೊಂಡ ಮತದಾನ ಪ್ರಕ್ರಿಯೆ
  • ಮಧ್ಯಾಹ್ನ 2 ಗಂಟೆಯ ವೇಳೆಗೆ ಒಟ್ಟು 222 ಶಾಸಕರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ
  • ಸಂಜೆ 6 ಗಂಟೆಯ ಸುಮಾರಿಗೆ ಯಾರು ವಿಜಯಶಾಲಿಯಾಗಲಿದ್ದಾರೆ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ
ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್‌ನ 7 ಸ್ಥಾನಗಳಿಗಾಗಿ ಶಾಸಕರಿಂದ ಇಂದು ಅತ್ಯಂತ ಚುರುಕಿನ ಮತದಾನ ( Karnataka Council Election ) ನಡೆದಿದ್ದು, ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಪ್ರಕ್ರಿಯೆ ಪೂರ್ಣಗೊಂಡಿದೆ. ವಿಧಾನಸೌಧದಲ್ಲಿ ಬೆಳಗ್ಗೆ 9 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆಯಲ್ಲಿ ರಾಜ್ಯದ ಶಾಸಕರು ಉತ್ಸಾಹದಿಂದ ಭಾಗವಹಿಸಿದ್ದು, ಸಂಜೆ 4 ರವರೆಗೆ ಗಡುವು ಇದ್ದರೂ ಸಹ ಮಧ್ಯಾಹ್ನ 2 ಗಂಟೆಯ ವೇಳೆಗೆ ಒಟ್ಟು 222 ಶಾಸಕರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಇದರೊಂದಿಗೆ ಮಧ್ಯಾಹ್ನದ ಹೊತ್ತಿಗೇ ನೂರಕ್ಕೆ ನೂರರಷ್ಟು (ಶೇ. 100) ದಾಖಲೆಯ ಮತದಾನ ದಾಖಲಾಗಿದೆ.
ಈ ಬಾರಿಯ ಚುನಾವಣಾ ಕಣದಲ್ಲಿ ಕಾಂಗ್ರೆಸ್ ಐದು ಸ್ಥಾನಗಳಿಗೆ ಕಣ್ಣಿಟ್ಟಿದ್ದರೆ, ಬಿಜೆಪಿ ಎರಡು ಹಾಗೂ ಜೆಡಿಎಸ್ ಒಂದು ಸ್ಥಾನದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿವೆ. ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್‌ನ ನಾಲ್ವರು ಮತ್ತು ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಯಾವುದೇ ಆತಂಕವಿಲ್ಲದೆ ಸುಲಭವಾಗಿ ಗೆಲುವಿನ ದಡ ಸೇರುವುದು ನಿಶ್ಚಿತವಾಗಿದೆ. ಆದರೆ, ಕಣದಲ್ಲಿರುವ ಏಳನೇ ಸ್ಥಾನವನ್ನು ವಶಪಡಿಸಿಕೊಳ್ಳಲು ಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ರಾಜಕೀಯ ಜಟಾಪಟಿ ಮತ್ತು ಕುತೂಹಲ ಗರಿಷ್ಠ ಮಟ್ಟಕ್ಕೆ ತಲುಪಿದೆ.
ಕಾಂಗ್ರೆಸ್‌ನ ವಿನಯ್ ಕಾರ್ತಿಕ್ ಹಾಗೂ ಜೆಡಿಎಸ್‌ನ ಗೋವಿಂದರಾಜು ಅವರ ನಡುವಿನ ಪ್ರತಿಷ್ಠೆಯ ಹೋರಾಟದಿಂದಾಗಿ ಅಂತಿಮ ಸ್ಥಾನದ ಪೈಪೋಟಿ ಭಾರೀ ಕುತೂಹಲ ಕೆರಳಿಸಿದೆ. ಸಂಜೆ 4 ಗಂಟೆಗೆ ಮತದಾನ ಪ್ರಕ್ರಿಯೆ ಅಧಿಕೃತವಾಗಿ ಮುಕ್ತಾಯಗೊಂಡ ಬೆನ್ನಲ್ಲೇ ಮತಗಳ ಎಣಿಕೆ ಕಾರ್ಯ ಚಾಲನೆ ಪಡೆಯಲಿದ್ದು, ಇಬ್ಬರು ನಾಯಕರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಸಂಜೆ 6 ಗಂಟೆಯ ಸುಮಾರಿಗೆ ಯಾರು ವಿಜಯಶಾಲಿಯಾಗಲಿದ್ದಾರೆ ಎಂಬ ಸ್ಪಷ್ಟ ಚಿತ್ರಣ ಸಿಗಲಿದ್ದು, ಅಂತಿಮ ಫಲಿತಾಂಶ ಹೊರಬೀಳಲಿದೆ.

ನಮ್ಮ ಬಿಜೆಪಿ ಅಭ್ಯರ್ಥಿಗಳು ಗೆಲ್ತಾರೆ

ಪರಿಷತ್ ಚುನಾವಣೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರು, ಪಕ್ಷದಿಂದ ಉಚ್ಚಾಟನೆಗೊಂಡಿರುವ ಇಬ್ಬರು ಶಾಸಕರ ಮತಗಳು ಕಾಂಗ್ರೆಸ್ ಪಾಲಾಗಬಹುದೇ ವಿನಃ ಅದನ್ನು ಹೊರತುಪಡಿಸಿ ಬಿಜೆಪಿಯ ಬೇರೆ ಯಾವುದೇ ಮತಗಳು ಬೇರೆಡೆಗೆ ಹೋಗುವುದಿಲ್ಲ ಮತ್ತು ತಮ್ಮ ಪಕ್ಷದ ಇಬ್ಬರೂ ಅಭ್ಯರ್ಥಿಗಳು ನಿರಾಯಾಸವಾಗಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ನಿಲುವನ್ನು ಮುಕ್ತವಾಗಿ ಸ್ವಾಗತಿಸಿರುವ ಅವರು, ಯತ್ನಾಳ್ ಅವರಲ್ಲಿ ಹಿಂದುತ್ವ ಮತ್ತು ಬಿಜೆಪಿ ರಕ್ತಗತವಾಗಿದೆ; ಹೀಗಾಗಿ ಪಕ್ಷದ ಪರವಾಗಿ ನಿಂತಿರುವ ಅವರ ನಡೆ ಅತ್ಯಂತ ಸ್ವಾಗತಾರ್ಹ ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಗೆಲ್ಲಲಿದ್ದಾರೆ

ಮತದಾನದ ಬಳಿಕ ಮಾತನಾಡಿದ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರು, ನಾನು ನನ್ನ ಸ್ವಪಕ್ಷದ ಅಭ್ಯರ್ಥಿಯ ಪರವಾಗಿಯೇ ಮತ ಚಲಾಯಿಸಿದ್ದೇನೆ. ನಮ್ಮ ಪಕ್ಷದ ಇಬ್ಬರು ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ, ಅದರೊಂದಿಗೆ ನಮ್ಮ ಮೈತ್ರಿಕೂಟದ (ಜೆಡಿಎಸ್) ಅಭ್ಯರ್ಥಿಯೂ ಕೂಡ ವಿಜಯಶಾಲಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಈ ಗೆಲುವಿಗಾಗಿ ಈಗಾಗಲೇ ಆಂತರಿಕ ಕಾರ್ಯತಂತ್ರ ರೂಪಿಸಲಾಗಿದೆ ಎಂದು ತಿಳಿಸಿದ ಅವರು, ನಮ್ಮ ಪಕ್ಷದ ವರಿಷ್ಠರು ಈಗಾಗಲೇ ಕಾಂಗ್ರೆಸ್‌ನ ಕೆಲವು ಶಾಸಕರನ್ನು ಸಂಪರ್ಕಿಸಿ ಮಾತನಾಡಿದ್ದಾರೆ; ಹೀಗಾಗಿ ಕೊನೆಯ ಕ್ಷಣದಲ್ಲಿ ದೊಡ್ಡ ಚಮತ್ಕಾರ ನಡೆಯಲಿದ್ದು, ಜೆಡಿಎಸ್ ಅಭ್ಯರ್ಥಿ ಗೆಲುವಿನ ನಗೆ ಬೀರಲಿದ್ದಾರೆ ಎಂದು ಆಡಳಿತ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ.

ಜೆಡಿಎಸ್​ ಸೋಲು ಖಚಿತ

ಪರಿಷತ್ ಚುನಾವಣೆ ಕುರಿತು ಮಾತನಾಡಿದ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು, ಕಾಂಗ್ರೆಸ್‌ನ 5ನೇ ಅಭ್ಯರ್ಥಿ ಗೆಲ್ಲುವುದು ನೂರಕ್ಕೆ ನೂರರಷ್ಟು ನಿಶ್ಚಿತವಾಗಿದ್ದು, ಇಲ್ಲಿ ಯಾವುದೇ ಗೊಂದಲವಿಲ್ಲದ ಕಾರಣ ಈ ಕದನ ನಮಗೆ ಚುನಾವಣೆಯಂತೆ ಅನ್ನಿಸುತ್ತಲೇ ಇಲ್ಲ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಮ್ಮ ಪಕ್ಷದ ಶಾಸಕರೆಲ್ಲರೂ ಅತ್ಯಂತ ಎಚ್ಚರಿಕೆಯಿಂದ ಮತ ಚಲಾಯಿಸುತ್ತಿದ್ದಾರೆ ಎಂದು ತಿಳಿಸಿದ ಅವರು, ಜೆಡಿಎಸ್ ಪಕ್ಷದವರು ಯಾವ ಲೆಕ್ಕಾಚಾರದ ಮೇಲೆ ಇಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೋ ನನಗಂತೂ ತಿಳಿಯುತ್ತಿಲ್ಲ; ಅವರು ಬಿಜೆಪಿಯಿಂದ ಕೇವಲ 30 ಮತಗಳನ್ನು ನಂಬಿಕೊಂಡು ಈ ಸಾಹಸಕ್ಕೆ ಕೈಹಾಕಿದ್ದಾರೆ, ಹೀಗಾಗಿ ಜೆಡಿಎಸ್ ಅಭ್ಯರ್ಥಿ ಸೋಲುವುದು ಸೂರ್ಯ ಅಷ್ಟೇ ಸತ್ಯ ಎಂದು ಲೇವಡಿ ಮಾಡಿದ್ದಾರೆ.

ಬಿಜೆಪಿಗೆ ಮತ ಹಾಕಿದ್ದೇನೆ

ಮತದಾನದ ಬಳಿಕ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ನಾನು ಭಾರತೀಯ ಜನತಾ ಪಕ್ಷದ ಚಿಹ್ನೆಯ ಅಡಿಯಲ್ಲಿ ಸ್ಪರ್ಧಿಸಿ ಶಾಸಕನಾಗಿ ಆಯ್ಕೆಯಾಗಿ ಬಂದವನು. ಹೀಗಾಗಿ ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ, ಪಕ್ಷವು ಅಧಿಕೃತವಾಗಿ ಸೂಚಿಸಿದ ಅಭ್ಯರ್ಥಿಗೇ ನನ್ನ ಮತವನ್ನು ಚಲಾಯಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಮತದಾನಕ್ಕೂ ಮುನ್ನ ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ತಮಗೆ ಕರೆ ಮಾಡಿದ್ದರು ಎಂದು ಬಹಿರಂಗಪಡಿಸಿದ ಯತ್ನಾಳ್, ಅದರೊಂದಿಗೆ ಪಕ್ಷದ 49 ಶಾಸಕರು ಕೂಡ ತಮಗೆ ಲಿಖಿತ ಮನವಿ ಸಲ್ಲಿಸಿ, ಪಕ್ಷದ ಹಿತದೃಷ್ಟಿಯಿಂದ ಬಿಜೆಪಿ ಸೂಚಿಸಿರುವ ಅಭ್ಯರ್ಥಿಗೇ ಮತ ಹಾಕುವಂತೆ ವಿನಂತಿಸಿದ್ದರು, ಅವರ ಗೌರವಕ್ಕೆ ಹಾಗೂ ಪಕ್ಷದ ಶಿಸ್ತಿಗೆ ಕಟ್ಟುಬಿದ್ದು ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಅಂದಹಾಗೆ, ವಿಧಾನ ಪರಿಷತ್‌ನ ಈ ಪ್ರತಿಷ್ಠಿತ ಸಮರದಲ್ಲಿ ಕಾಂಗ್ರೆಸ್‌ನಿಂದ ತಿಪ್ಪಣ್ಣಪ್ಪ ಕಮಕನೂರು, ಪಿ.ವಿ.ಮೋಹನ್, ಶಿವಣ್ಣ ಬಿ.ಎಸ್., ಬಿ.ಕೆ.ಹರಿಪ್ರಸಾದ್ ಹಾಗೂ ವಿನಯ್ ಕಾರ್ತಿಕ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದರೆ, ಬಿಜೆಪಿ ರಘು ಆರ್. ಮತ್ತು ಲಿಂಗರಾಜ ಪಾಟೀಲ್ ಅವರಿಗೆ ಮಣೆ ಹಾಕಿದೆ. ಇತ್ತ ಜೆಡಿಎಸ್ ಪರವಾಗಿ ಗೋವಿಂದ ರಾಜು ಕಣದಲ್ಲಿದ್ದಾರೆ. ಪ್ರತಿಯೊಬ್ಬ ಅಭ್ಯರ್ಥಿಯ ಗೆಲುವಿಗೆ ಕನಿಷ್ಠ 28 ಮತಗಳ ಕೋಟಾ ನಿಗದಿಯಾಗಿದೆ. ಪ್ರಸ್ತುತ ಬಲಾಬಲದ ಪ್ರಕಾರ 135 ಶಾಸಕರನ್ನು ಹೊಂದಿರುವ ಕಾಂಗ್ರೆಸ್ 4 ಸ್ಥಾನಗಳನ್ನು ಹಾಗೂ 62 ಶಾಸಕರಿರುವ ಬಿಜೆಪಿ ತನ್ನೆರಡೂ ಸ್ಥಾನಗಳನ್ನು ಅತ್ಯಂತ ಸುಲಭವಾಗಿ ವಶಪಡಿಸಿಕೊಳ್ಳಲಿವೆ. 18 ಶಾಸಕರನ್ನು ಹೊಂದಿರುವ ಜೆಡಿಎಸ್ ಮತ್ತು ಆಡಳಿತ ರೂಢ ಕಾಂಗ್ರೆಸ್ ನಡುವೆ ಈಗ ಕೊನೆಯ ಸೀಟಿಗಾಗಿ ಅಸಲಿ ಫೈಟ್ ಶುರುವಾಗಿದೆ.
ಏಳನೇ ಸ್ಥಾನದ ಈ ರೋಚಕ ಕದನದಲ್ಲಿ ಕಾಂಗ್ರೆಸ್‌ನ ವಿನಯ್ ಕಾರ್ತಿಕ್ ಹಾಗೂ ಜೆಡಿಎಸ್‌ನ ಗೋವಿಂದ ರಾಜು ಪರಸ್ಪರ ಸೆಣಸಾಡುತ್ತಿದ್ದು, ಇಬ್ಬರಿಗೂ ಮ್ಯಾಜಿಕ್ ನಂಬರ್ 28 ತಲುಪಲು ಸ್ವಪಕ್ಷೀಯ ಮತಗಳ ಕೊರತೆಯಿದೆ. ಹೀಗಾಗಿ 3 ಪಕ್ಷೇತರರು, ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ 3 ಶಾಸಕರು ಹಾಗೂ ಈಗಷ್ಟೇ ಬಿಜೆಪಿ ಜೊತೆ ಗುರುತಿಸಿಕೊಂಡಿರುವ ಜನಾರ್ದನ ರೆಡ್ಡಿ ಅವರ ಮತಗಳು ಇಲ್ಲಿ ನಿರ್ಣಾಯಕ ಗೇಮ್ ಚೇಂಜರ್ ಆಗಲಿವೆ. ಪಕ್ಷೇತರರು ಹಾಗೂ ಉಚ್ಚಾಟಿತ ಶಾಸಕರು ಹಸ್ತ ಪಡೆಯತ್ತ ಒಲವು ತೋರಿದ್ದರೆ, ಯತ್ನಾಳ್ ಮತ್ತು ಜನಾರ್ದನ ರೆಡ್ಡಿ ಎನ್‌ಡಿಎ ಕೂಟಕ್ಕೆ ಬೆಂಬಲ ಘೋಷಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net