ರಸ್ತೆ ಅಗಲೀಕರಣಕ್ಕೆ ಅಗತ್ಯ ಜಮೀನು ಹಸ್ತಾಂತರಿಸಿ

road-widening
road-widening
Published on

ಪ್ರಮುಖ ಮುಖ್ಯಾಂಶಗಳು

  • ಪೂರ್ವ ಪಾಲಿಕೆ ಆಯುಕ್ತರಿಂದ ಅಧಿಕಾರಿಗಳಿಗೆ ಸೂಚನೆ
  • ಕೆಐಎಡಿಬಿ ಪ್ರಮುಖರ ಜತೆ ಡಿ.ಎಸ್. ರಮೇಶ್ ಸಮನ್ವಯ ಸಭೆ
ಬೆಂಗಳೂರು: ರಸ್ತೆ ಅಗಲೀಕರಣ ಹಾಗೂ ಅಂಡರ್‌ಪಾಸ್ ಯೋಜನೆಗಳ ಜಾರಿಗಾಗಿ ಈಗಾಗಲೇ ಕಾಯ್ದಿರಿಸಿರುವ ಜಾಗಗಳನ್ನು ಪರಿತ್ಯಾಜನಾ ಪತ್ರದ ಮೂಲಕ ಪಾಲಿಕೆಗೆ ಹಸ್ತಾಂತರಿಸಿಕೊಳ್ಳುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಸಂಬಂಧ ಪಾರ್ಕ್ ಮತ್ತು ಮುಕ್ತ ಸ್ಥಳಗಳಿಗಾಗಿ ಮೀಸಲಿಟ್ಟಿರುವ ಸಿ.ಎ. ಸ್ವತ್ತುಗಳನ್ನು ಕಾರ್ಪೋರೇಷನ್‌ಗೆ ಹಸ್ತಾಂತರಿಸುವ ಕುರಿತು ಕೆಐಎಡಿಬಿ ಹಿರಿಯ ಅಧಿಕಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಮನ್ವಯ ಸಭೆಯಲ್ಲಿ ಪಾಲ್ಗೊಂಡು ಅವರು ಈ ನಿರ್ದೇಶನವನ್ನು ನೀಡಿದರು.
ಸಭೆಯಲ್ಲಿ ಕೆಐಎಡಿಬಿ ಅಭಿವೃದ್ಧಿಪಡಿಸಿರುವ ಕೈಗಾರಿಕಾ ಪ್ರದೇಶಗಳಲ್ಲಿನ ಪ್ರಮುಖ ರಸ್ತೆಗಳಿಗೆ ಸಂಬಂಧಿಸಿ ರಸ್ತೆ ಅಗಲೀಕರಣ ಮತ್ತು ಭೂ ಹಸ್ತಾಂತರ ಪ್ರಕ್ರಿಯೆಗಳ ಕುರಿತು ವಿವರವಾಗಿ ಚರ್ಚಿಸಲಾಯಿತು. ಐಟಿಪಿಎಲ್ ಮುಖ್ಯರಸ್ತೆ ವೈಟ್‌ಫೀಲ್ಡ್ ಮುಖ್ಯರಸ್ತೆ ಸೇರಿ ಐದು ಪ್ರಮುಖ ರಸ್ತೆಗಳನ್ನು 45/12 ಮೀ. ಅಗಲಕ್ಕೆ ವಿಸ್ತರಿಸುವ ಕುರಿತು ಚರ್ಚೆ ನಡೆಸಲಾಯಿತು. ಈ ರಸ್ತೆಗಳ ಎರಡೂ ಬದಿ ಖಾಸಗಿ ಸ್ವತ್ತುಗಳಿಗೆ ನಕ್ಷೆ ಮಂಜೂರಾತಿ ನೀಡುವ ವೇಳೆ ರಸ್ತೆ ಅಗಲೀಕರಣ, ಪಾರ್ಕ್ ಹಾಗೂ ಮುಕ್ತ ಜಾಗದ ಉದ್ದೇಶಕ್ಕಾಗಿ ಕಾಯ್ದಿರಿಸಿರುವ ಜಾಗಗಳನ್ನು ಪರಿತ್ಯಾಜನಾ ಪತ್ರದ ಮೂಲಕ ಪಾಲಿಕೆಗೆ ಹಸ್ತಾಂತರಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಂಚಾರ ದಟ್ಟಣೆ ನಿವಾರಣೆಗೆ ಆದ್ಯತೆ:

ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ ವಾಹನಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದ್ದು, ಪ್ರಮುಖ ರಸ್ತೆಗಳಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ರಸ್ತೆ ಅಗಲೀಕರಣ, ಅಂಡರ್‌ಪಾಸ್ ನಿರ್ಮಾಣ ಹಾಗೂ ಪರ್ಯಾಯ ರಸ್ತೆ ಜಾಲದ ಅಭಿವೃದ್ಧಿ ಅತ್ಯಗತ್ಯವಾಗಿದೆ. ಹಾಗಾಗಿ ರಸ್ತೆ ಅಭಿವೃದ್ಧಿಗೆ ಮೀಸಲಾದ ಜಾಗಗಳನ್ನು ತ್ವರಿತವಾಗಿ ಪಾಲಿಕೆಗೆ ಹಸ್ತಾಂತರಿಸುವ ಮೂಲಕ ಯೋಜನೆಗಳನ್ನು ಗಡುವಿನೊಳಗೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದು ಆಯುಕ್ತರು ತಿಳಿಸಿದರು.
ಸಭೆಯಲ್ಲಿ ಕೆಐಎಡಿಬಿ ಸಿಇಒ ಹಾಗೂ ಕಾರ್ಯನಿರ್ವಾಹಕ ಸದಸ್ಯ ಗೋವಿಂದ ರೆಡ್ಡಿ, ಅಪರ ಆಯುಕ್ತರು (ಅಭಿವೃದ್ಧಿ), ಮುಖ್ಯ ಅಭಿಯಂತರರು, ಮುಖ್ಯ ನಗರ ಯೋಜಕರು ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ಇಲಾಖೆಗಳ ನಡುವೆ ಸಮನ್ವಯಕ್ಕೆ ಸೂಚನೆ

ಕೆಐಎಡಿಬಿ, ಕಂದಾಯ ಇಲಾಖೆ, ನಗರ ಯೋಜನಾ ವಿಭಾಗ, ಟಿಡಿಆರ್ ವಿಭಾಗ ಹಾಗೂ ಪಾಲಿಕೆಯ ಸಂಬಂಧಿತ ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವ ಮೂಲಕ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಯುಕ್ತರು ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net