ಬರಡಾಗ್ತಿದೆ ಅಂತರ್ಜಲ, ಕಾದಿದೆ ಸಮಸ್ಯೆಯ ಶೂಲ!| bwssb

ಜಲಮಂಡಳಿ
ಜಲಮಂಡಳಿ
Published on

ಪ್ರಮುಖ ಮುಖ್ಯಾಂಶಗಳು

  • ಆತಂಕ ಹೆಚ್ಚಿಸಿದ ಭೂಗರ್ಭ ಜಲ ಮೌಲ್ಯಮಾಪನ ವರದಿ
  • ಬೆಂಗಳೂರು ಸುತ್ತಮುತ್ತನ ಜಿಲ್ಲೆಗಳಲ್ಲೂ ಸ್ಥಿತಿ ಗಂಭೀರ
  • ಮಳೆನೀರು ಸಂಗ್ರಹಕ್ಕೆ ಆದ್ಯತೆ ಅನಿವಾರ್ಯ
ಪವನ್​ ಆಚಾರ್ಯ ನೀರ್ಚಾಲು ಬೆಂಗಳೂರು
ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದರೂ ಹಲವೆಡೆ ಕುಡಿಯುವ ನೀರಿನ ಆತಂಕ ಸೃಷ್ಟಿಸಿದೆ. ಇದಕ್ಕೆ ಕಾರಣ ಮಳೆಯ ಕೊರತೆಯಲ್ಲ, ನೀರಿನ ನಿರ್ವಹಣೆಯ ವೈಫಲ್ಯ ಎಂಬುದು ದೃಢಪಟ್ಟಿದೆ. ರಾಜಧಾನಿಯೆಡೆ ಕಣ್ಣು ಹಾಯಿಸಿದರೆ, "ಆದಾಯ 50 ಪೈಸೆ& ಖರ್ಚು ರೂಪಾಯಿ' ಎಂಬ ನಾಣ್ನಡಿಯಂತಾಗಿದೆ ಇಲ್ಲಿನ ಸ್ಥಿತಿ. ಹಾಸಿಗೆ ಇದ್ದಷ್ಟನ್ನು ಮೀರಿ ಕಾಲು ಚಾಚುವ ನಗರವಾಸಿಗಳ ಗುಣವು ಅಂತರ್ಜಲಕ್ಕೆ ಭಾರಿ ಪೆಟ್ಟು ಕೊಟ್ಟಿದೆ. ಹಣಬಲದಿಂದ ಎಲ್ಲವನ್ನೂ ಕೊಂಡುಕೊಳ್ಳುವ ಹುಕಿಗೆ ಬಿದ್ದ ನಗರ ತನ್ನ ವ್ಯಾಪ್ತಿ ಮೀರಿ ಬೆಳೆಯುತ್ತಲೇ ಇದೆ. ಆದರೆ ನಗರ ಬೆಳೆದಷ್ಟೂ ನಿರಿನ ಸಮಸ್ಯೆಯ ಬೃಹದಾಕಾರವಾಗುತ್ತಿದೆ. 2025ರ ಭೂಗರ್ಭ ಜಲ ಮೌಲ್ಯಮಾಪನ ವರದಿಯಲ್ಲಿರುವ ಅಂಕಿಅಂಶಗಳು ಈ ಆತಂಕಕ್ಕೆ ಮುಖ್ಯ ಕಾರಣ.
ಆ ವರದಿ ಪ್ರಕಾರ, ರಾಜ್ಯದ ಒಟ್ಟಾರೆ ಭೂಗರ್ಭ ಜಲ ಬಳಕೆ ಪ್ರಮಾಣ ಶೇ.66.49 ಇದ್ದು ಸುರಕ್ಷಿತ ಮಟ್ಟದಲ್ಲಿದೆ. ಆದರೆ, ಈ ಸರಾಸರಿಯ ಹಿಂದೆ ಭಾರೀ ಪ್ರಾದೇಶಿಕ ಅಸಮಾನತೆ ಅಡಗಿದೆ. ರಾಜಧಾನಿಯ ಮಟ್ಟಿಗೆ ಈ ವೈಪರೀತ್ಯ ಕಣ್ಣಿಗೆ ಭಯ ಹುಟ್ಟಿಸುವಂತಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಅಂತರ್ಜಲ ಬಳಕೆ ಶೇ.177 ಇದ್ದರೆ,  ಬೆಂಗಳೂರು ಗ್ರಾಮಾಂತರದಲ್ಲಿ ಶೇ.147 ದಾಖಲಾಗಿದೆ. ಅಕ್ಕಪಕ್ಕದ ಜಿಲ್ಲೆಗಳತ್ತ ಕಣ್ಣುಹಾಯಿಸಿದರೆ, ಅಲ್ಲೂ ಪರಿಸ್ಥಿತಿ ಚಿಂತಾಜನಕವಾಗಿದೆ. ಚಿಕ್ಕಬಳ್ಳಾಪುರದಲ್ಲಿ ಭೂಗರ್ಭ ಜಲ ಬಳಕೆ ಶೇ.166, ಕೋಲಾರ ಜಿಲ್ಲೆಯಲ್ಲಿ ಶೇ.184 ತಲುಪಿದೆ. ಮರುಪೂರಣವಾಗುವ ನೀರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರತೆಗೆದು ಭೂಮಿತಾಯಿಯ ಮಡಿಲನ್ನು ಹಿಂಡಿ ಹಿಪ್ಪೆ ಮಾಡಲಾಗುತ್ತಿದೆ.
ರಾಜ್ಯದ 237 ತಾಲೂಕುಗಳ ಪೈಕಿ 45ರಲ್ಲಿ ಅತಿಯಾದ ಭೂಗರ್ಭ ಜಲ ಶೋಷಣೆಯ ಪಟ್ಟಿಗೆ ಸೇರಿವೆ. ಅವುಗಳಲ್ಲಿ ಬಹುಪಾಲು ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳೇ ಆಗಿವೆ. ಬೆಂಗಳೂರಿನ ಮಟ್ಟಿಗೆ ಕೆಲ ಪ್ರದೇಶಗಳಲ್ಲಿ ಮರುಪೂರಣವಾಗುವ ನೀರಿನ ಪ್ರಮಾಣಕ್ಕಿಂತ ಮೂರು ಪಟ್ಟು ಹೆಚ್ಚು ನೀರನ್ನು ಹೊತೆಗೆಯಲಾಗುತ್ತಿದೆ. ಬೆಂಗಳೂರು ಪೂರ್ವ ವಲಯದಲ್ಲಿ ಅಂತರ್ಜಲ ಬಳಕೆ ಪ್ರಮಾಣ ಶೇ.378 ತಲುಪಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.
ರಾಜಧಾನಿಯ ನೀರಿನ ಬೇಡಿಕೆ ಹೆಚ್ಚಳ:
ನಗರದ ನೀರಿನ ಬೇಡಿಕೆ ದಿನದಿನಕ್ಕೆ ಏರುತ್ತಿದೆ. ಕಾವೇರಿ ನದಿಯಿಂದ ಪ್ರತಿದಿನ ಸುಮಾರು 1,450 ದಶಲಕ್ಷ ಲೀಟರ್​ ನೀರನ್ನು 100 ಕಿ.ಮೀ. ದೂರದಿಂದ ಹಾಗೂ ಸುಮಾರು 600 ಮೀಟರ್​ ಎತ್ತರಕ್ಕೆ ಪಂಪ್​ ಮಾಡಿ ರಾಜಧಾನಿಗೆ ತರಲಾಗುತ್ತಿದೆ. ಆದರೂ ನಗರದ ಅನೇಕ ಹೊಸ ಬಡಾವಣೆಗಳು ಮತ್ತು ಹೊರವಲಯಗಳು ಇನ್ನೂ ಬೋರ್​ವೆಲ್​ ಹಾಗೂ ಟ್ಯಾಂಕರ್​ ನೀರಿನ ಮೇಲೆ ಅವಲಂಬಿತವಾಗಿವೆ. ಸಮಸ್ಯೆ ಉಂಟಾಗಿರುವ ಪ್ರದೇಶಗಳಲ್ಲಿ ಜಲಮಂಡಳಿಯು "ಸಂಚಾರಿ ಕಾವೇರಿ' ಟ್ಯಾಂಕರ್​ ಮೂಲ ನೀರು ಪೂರೈಕೆ ಮಾಡಲಾಗಿದೆ.
ಇನ್ನೊಂದೆಡೆ, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್​ಸಿ) ನಡೆಸಿದ ಅಧ್ಯಯನದ ಪ್ರಕಾರ ಬೆಂಗಳೂರಿನ ಸುಮಾರು ಶೇ.93 ಭೂಭಾಗ ಕಾಂಕ್ರೀಟ್​ ಆವರಿಸಿದೆ. 1973ರಲ್ಲಿ 2,324 ಹೆಕ್ಟೇರ್​ ಇದ್ದ ಜಲಮೂಲಗಳ ವಿಸ್ತೀರ್ಣ 2023ರಲ್ಲಿ ಕೇವಲ 696 ಹೆಕ್ಟೇರ್​ಗೆ ಕುಸಿದಿದೆ. ಕೆರೆಗಳು ಮತ್ತು ನೈಸರ್ಗಿಕ ಜಲಮೂಲಗಳ ನಾಶದಿಂದ ಭೂಗರ್ಭ ಜಲ ಮರುಪೂರಣ ಸಾಮರ್ಥ್ಯ ಕುಸಿದಿದೆ ಎಂಬುದು ಆತಂಕ ಹುಟ್ಟಿಸಿದೆ.
ಜಲ ಬಿಕ್ಕಟ್ಟಿನತ್ತ ರಾಜ್ಯ
ಮುಂದಿನ ದಶಕದಲ್ಲಿ ಕರ್ನಾಟಕದ ಅಭಿವೃದ್ಧಿಯನ್ನು ನಿರ್ಧರಿಸುವುದು ಮೆಟ್ರೋ, ಎಕ್ಸ್​ಪ್ರೆಸ್​ ವೇ ಅಥವಾ ಐಟಿ ಪಾರ್ಕ್​ಗಳಲ್ಲ, ಬದಲಾಗಿ ನೀರಿನ ಭದ್ರತೆಯಾಗಿರುತ್ತದೆ. ಮಳೆನೀರು ಸಂಗ್ರಹ, ಕೆರೆಗಳ ಪುನರುಜ್ಜೀವನ, ತ್ಯಾಜ್ಯ ನೀರಿನ ಮರುಬಳಕೆ ಹಾಗೂ ಭೂಗರ್ಭ ಜಲ ಸಂರಕ್ಷಣೆಗೆ ಆದ್ಯತೆ ನೀಡದಿದ್ದರೆ ಉತ್ತಮ ಮಳೆಯ ನಡುವೆಯೇ ರಾಜ್ಯ ನೀರಿನ ಬಿಕ್ಕಟ್ಟಿನತ್ತ ಸಾಗುವ ಅಪಾಯವಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
20 ಜಿಲ್ಲೆಗಳಲ್ಲಿ ಕುಡಿವ ನೀರಿನ ಕೊರತೆ
ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕ್ರಮೇಣ ಣಿಸುತ್ತಿದೆ. ಕಳೆದ ಬೇಸಿಗೆ ವೇಳೆ ಪ್ರಮುಖ ಜಲಾಶಯಗಳಲ್ಲಿ ಒಟ್ಟಾರೆ ನೀರಿನ ಸಂಗ್ರಹ ಸಾಮರ್ಥ್ಯ ಶೇ.43 ಇತ್ತು. 20 ಜಿಲ್ಲೆಗಳ 324 ಗ್ರಾಮಗಳು ಕುಡಿಯುವ ನೀರಿನ ಕೊರತೆಯನ್ನು ಎದುರಿಸುತ್ತಿವೆ ಎಂದು ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ಈ ಮಳೆಗಾಲದಲ್ಲಿಯಾದರೂ ನೀರಿನ ಸಂರಕ್ಷಣೆಯ ಕುರಿತು ಎಚ್ಚೆತ್ತುಕೊಳ್ಳಬೇಕಿದೆ ಎನ್ನುತ್ತಾರೆ ಜಲ ತಜ್ಞರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net