ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಉತ್ತಮ ಕಾರ್ಯನಿರ್ವಹಣೆ ಇರಲಿ

campaignmeeting
campaignmeeting
Published on

ಪ್ರಮುಖ ಮುಖ್ಯಾಂಶಗಳು

  • ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚನೆ
  • ಅಭಿಯಾನಕ್ಕೆ ನೋಡಲ್ ಅಧಿಕಾರಿಗಳ ನಿಯೋಜನೆ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ (ಎಸ್‌ಎಸ್‌ಎಂ) ಉತ್ತಮ ಅಂಕ ಗಳಿಸುವಂತೆ ಎಲ್ಲ ಐದು ನಗರ ಪಾಲಿಕೆಗಳ ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಸೂಚಿಸಿದ್ದಾರೆ.
ಜಿಬಿಎ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಪ್ರತಿವರ್ಷ ಸ್ವಚ್ಛತಾ ಸರ್ವೇಕ್ಷಣ್ ಅಭಿಯಾನವನ್ನು ಆಯೋಜಿಸುತ್ತಿದೆ. ಪ್ರಸಕ್ತ ಸಾಲಿನಲ್ಲಿ ಜಿಬಿಎ ಉತ್ತಮ ಅಂಕಗಳನ್ನು ಪಡೆದುಕೊಳ್ಳಲು ಎಲ್ಲರೂ ಸಮನ್ವಯದೊಂದಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಅಭಿಯಾನದ ಭಾಗವಾಗಿ 5 ಪಾಲಿಕೆಗಳಲ್ಲಿ ತೀವ್ರ ಸ್ವಚ್ಛತಾ ಕಾರ್ಯಾಚರಣೆ ಕೈಗೊಳ್ಳಬೇಕು. ವಾಟರ್ ಜೆಟ್ಟಿಂಗ್ ಯಂತ್ರಗಳ ಮೂಲಕ ಪಾದಚಾರಿ ಮಾರ್ಗಗಳ ಸ್ವಚ್ಛತೆ, ಫುಟ್‌ಪಾತ್‌ನಲ್ಲಿರುವ ಸಸಿ/ಮರಗಳ ಸುತ್ತ ಗ್ರಾಸ್ ಫೇವರ್ ಅಳವಡಿಸಬೇಕು. ನಗರದ ಸ್ವಚ್ಛತೆಗಾಗಿ ಕಾರ್ಯನಿರ್ವಹಿಸುವ ಎಲ್ಲ ಪೌರಕಾರ್ಮಿಕರಿಗೆ ಸಮವಸ್ತ್ರ ವಿತರಿಸುವ ಜತೆಗೆ ಅಗತ್ಯ ಸುರಕ್ಷತಾ ಉಪಕರಣಗಳನ್ನು ಒದಗಿಸಬೇಕು. ಆಯಾ ಪಾಲಿಕೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿ ನಾಗರಿಕರಲ್ಲಿ ಅಭಿಯಾನದ ಕುರಿತು ಅರಿವು ಮೂಡಿಸಲು ಆದ್ಯತೆ ನೀಡಬೇಕೆಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಅಸೋಸಿಯೇಷನ್ ಜತೆ ಸಭೆ:

ಅಭಿಯಾನಕ್ಕೆ ಸಂಬಂಧಿಸಿ ನಗರದಲ್ಲಿನ ಸ್ಟಾರ್ ಹೋಟೆಲ್, ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳೊಂದಿಗೆ ಐದೂ ಪಾಲಿಕೆಗಳಲ್ಲಿ ಸಭೆಗಳನ್ನು ನಡೆಸಿ ಜಾಗೃತಿ ಮೂಡಿಸಬೇಕು. ಮಾರುಕಟ್ಟೆ ಪ್ರದೇಶಗಳಲ್ಲಿ ನಿರಂತರವಾಗಿ ಸ್ವಚ್ಛತಾ ಕಾರ್ಯಾಚರಣೆ ನಡೆಸಬೇಕು. ಅಭಿಯಾನ ಹಿನ್ನೆಲೆ 5 ಪಾಲಿಕೆ ಹಾಗೂ ಜಲಮಂಡಳಿಯಿಂದ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ಮಹೇಶ್ವರ್ ರಾವ್ ವಿವರಿಸಿದರು.
ಸಭೆಯಲ್ಲಿ ಘನತ್ಯಾಜ್ಯ ನಿರ್ವಹಣಾ ನಿಗಮದ ಸಿಇಒ ಕರೀಗೌಡ, ಪಾಲಿಕೆಗಳ ಆಯುಕ್ತರಾದ ಡಿ.ಎಸ್. ರಮೇಶ್, ಪಿ.ಸುನೀಲ್ ಕುಮಾರ್, ಕೆ.ಎನ್. ರಮೇಶ್, ಡಾ. ಕೆ.ವಿ. ರಾಜೇಂದ್ರ ಸೇರಿ ಇತರ ವಿಭಾಗಗಳ ಅಧಿಕಾರಿಗಳು ಹಾಜರಿದ್ದರು.
ಹೆಚ್ಚುವರಿ ಕಿಯೋಸ್ಕ್ ಸ್ಥಾಪನೆ:
ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಒಟ್ಟು 12,500 ಅಂಕಗಳಿದ್ದು, ವಿವಿಧ ವಿಭಾಗಗಳಿವೆ. ಕಸಮುಕ್ತ ನಗರ ಸೇರಿ ಪ್ರಮುಖ ವಿಭಾಗಗಳಲ್ಲಿ ಅಧಿಕ ಗಳಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಿದೆ. ಮುಖ್ಯವಾಗಿ ಸಾರ್ವಜನಿಕ ಶೌಚಾಲಯಗಳಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಕಸ ಸಂಗ್ರಹಣೆಗೆ 10 ಕಿಯೋಸ್ಕ್ ಅಳವಡಿಸಿದ್ದು, ಶೀಘ್ರವೇ ಇನ್ನೂ 60 ಸ್ಥಳಗಳಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯ ಆಯುಕ್ತರು ವಿವರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net