ಬೆಂಗಳೂರು: ರಾಜಧಾನಿಯಲ್ಲಿ ರಸ್ತೆ ಬದಿ ಹಾಗೂ ಖಾಲಿ ಜಾಗಗಳಲ್ಲಿ ಅನಧಿಕೃತವಾಗಿ ಸುರಿಯಲಾಗುತ್ತಿದ್ದ ಕಟ್ಟಡ ಮತ್ತು ಭಗ್ನಾವಶೇಷ (ಸಿ ಆ್ಯಂಡ್ ಡಿ) ತ್ಯಾಜ್ಯಕ್ಕೆ ಕಡಿವಾಣ ಹಾಕಲು ಜಿಬಿಎ ಯೋಜನೆ ರೂಪಿಸಿದೆ. ನಗರದ ಹೊರವಲಯದಲ್ಲಿರುವ ಬಳಕೆಯಲ್ಲಿಲ್ಲದ ಸರ್ಕಾರಿ ಕಲ್ಲು ಕ್ವಾರಿಗಳನ್ನು ಗುರುತಿಸಿ, ಮರುಬಳಕೆಗೆ ಯೋಗ್ಯವಲ್ಲದ ಸಿ ಆ್ಯಂಡ್ ಡಿ ಹಾಗೂ ಇನರ್ಟ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಮುಂದಾಗಿದೆ. ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯ ನಿರ್ವಹಣಾ ನಿಯಮ&-2025ರಡಿ ಪಿಪಿಪಿ ಮಾದರಿಯಲ್ಲಿ ಆರು ಪ್ಯಾಕೇಜ್ಗಳಿಗೆ ಗುತ್ತಿಗೆದಾರರನ್ನು ನೇಮಿಸಲಾಗಿದ್ದು, ಸಂಸ್ಕರಣಾ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಿಸುವವರೆಗೆ ಈ ತಾತ್ಕಾಲಿಕ ವ್ಯವಸ್ಥೆ ಜಾರಿಯಲ್ಲಿರಲಿದೆ. ಬಿದರಹಳ್ಳಿ, ಮಾರೇನಹಳ್ಳಿ, ಯಲಹಂಕ, ವೆಂಕಟಾಪುರ, ದಾಸನಪುರ, ವಿಟ್ಟಸಂದ್ರ, ಆನೇಕಲ್, ಜಿಗಣಿ ಹಾಗೂ ಬೇಗೂರು ಪ್ರದೇಶಗಳ ಕಲ್ಲು ಕ್ವಾರಿಗಳನ್ನು ಈ ಉದ್ದೇಶಕ್ಕಾಗಿ ಗುರುತಿಸಲಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮೋದನೆಯೂ ದೊರೆತಿದ್ದು, ರಸ್ತೆ ಬದಿಯ ಧೂಳು ಮಾಲಿನ್ಯ ತಗ್ಗಿಸಿ ಸಾರ್ವಜನಿಕ ಆರೋಗ್ಯ ಹಾಗೂ ನಗರ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಇದು ಮಹತ್ವದ ಕ್ರಮವೆಂದು ಅಧಿಕಾರಿಗಳು ತಿಳಿಸಿದ್ದಾರೆ.