ಕ್ಲಾಸ್​ "ಇ' ಕೆರೆಗಳ ಸುಧಾರಣೆ ಕ್ರಮ|gba

ಜಿಬಿಎ
ಜಿಬಿಎ
Published on

ಪ್ರಮುಖ ಮುಖ್ಯಾಂಶಗಳು

  • ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್​ ಸೂಚನೆ
  • ನೀರಿನ ಗುಣಮಟ್ಟ ಪರಿಶೀಲಿಸಿ ವರದಿ ನೀಡಲು ನಿರ್ದೇಶನ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಗರದಲ್ಲಿ ಪಾಲಿಕೆ ಒಡೆತನದ 182 ಕೆರೆಗಳಿದ್ದು, ಅವುಗಳಲ್ಲಿ 32 ಕೆರೆಗಳ ನೀರಿನ ಗುಣಮಟ್ಟವು ಕ್ಲಾಸ್​ "ಇ' ವರ್ಗಕ್ಕೆ ಸೇರಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಏಪ್ರಿಲ್​-2026ರಲ್ಲಿ ನೀಡಿರುವ ವರದಿಯಲ್ಲಿ ಉಲ್ಲೇಖಿಸಿದೆ. ಈ ಸಂಬಂಧ ಆಯಾ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಕ್ಲಾಸ್​ "ಇ' ವರ್ಗದ ಕೆರೆಗಳನ್ನು ಪರಿಶೀಲಿಸಿ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಗ್ರೇಟರ್​ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್​ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಬಿಎ ವ್ಯಾಪ್ತಿಯ ಕೆ&-100 ರಾಜಕಾಲುವೆ, ಕ್ಲಾಸ್​ "ಇ' ವರ್ಗಕ್ಕೆ ಸೇರಿರುವ ಕೆರೆಗಳು ಹಾಗೂ ರಸ್ತೆ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದರು.
ಜಿಬಿಎ ವ್ಯಾಪ್ತಿಯಲ್ಲಿ ಕೇಂದ್ರ ಪಾಲಿಕೆಯಲ್ಲಿ 1 ಕೆರೆ, ಉತ್ತರ& 8, ದಕ್ಷಿಣ &7, ಪೂರ್ವ &12 ಹಾಗೂ ಪಶ್ಚಿಮ &4 ಕೆರೆಗಳು ಸೇರಿ ಒಟ್ಟು 32 ಕೆರೆಗಳು ಕ್ಲಾಸ್​ "ಇ' ವರ್ಗದಲ್ಲಿವೆ. ಈ ಸಂಬಂಧ ಪಾಲಿಕೆ ಹಾಗೂ ಜಲಮಂಡಳಿ ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ನಡೆಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿದು ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.
ಕೆ-&100 ರಾಜಕಾಲುವೆ ಮಾರ್ಗದಲ್ಲಿ 19 ಸ್ಥಳಗಳಲ್ಲಿ ಕೊಳಚೆ ನೀರು ಸೇರುತ್ತಿದ್ದು, ಅದನ್ನು ಸಂಪೂರ್ಣವಾಗಿ ತಡೆಯಬೇಕಿದೆ. ಈ ಸಂಬಂಧ ಜಲಮಂಡಳಿ ಹಾಗೂ ಪಾಲಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸಮಸ್ಯೆಯ ಮೂಲವನ್ನು ಗುರುತಿಸಿ ರಾಜಕಾಲುವೆಗೆ ಕೊಳಚೆ ನೀರು ಸೇರುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ವಿಶೇಷ ಆಯುಕ್ತೆ ಸುಷಮಾ ಗೋಡಬೋಲೆ, ಆಯುಕ್ತರಾದ ಡಿ.ಎಸ್​.ರಮೇಶ್​ , ಪಿ. ಸುನೀಲ್​ ಕುಮಾರ್​, ಜಿ. ಜಗದೀಶ್​, ಡಾ. ಕೆ.ವಿ.ರಾಜೇಂದ್ರ , ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್​ ಸುಧಾಕರ್​ ಇದ್ದರು.
ರಾಜಕಾಲುವೆ ಮೇಲಿರುವ ಕಟ್ಟಡ ತೆರವುಗೊಳಿಸಿ
ಕೆ-&100 ಮಾರ್ಗದ ಜೆಸಿ ರಸ್ತೆ ಸಮೀಪ ರಾಜಕಾಲುವೆ ಮೇಲಿರುವ ಎರಡು ಕಟ್ಟಡಗಳನ್ನು ತೆರವುಗೊಳಿಸಬೇಕು. ಈ ಸಂಬಂಧ ಕೇಂದ್ರ ನಗರ ಪಾಲಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಕಟ್ಟಡಗಳನ್ನು ನೆಲಸಮಗೊಳಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net