ವಾರ್ಡ್​​​​ವಾರು ಮೀಸಲು ನಿಗದಿಯಲ್ಲಿಲ್ಲ ಜಿಬಿಎ ಹಸ್ತಕ್ಷೇಪ

wardwisereservation
wardwisereservation
Published on

ಪ್ರಮುಖ ಮುಖ್ಯಾಂಶಗಳು

  • ಏ.6ಕ್ಕೆ ಮತದಾರರ ಅಂತಿಮ ಪಟ್ಟಿ ಬಿಡುಗಡೆಗೆ ಗಡುವು
  • ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಹೇಳಿಕೆ
ಬೆಂಗಳೂರು: ಪಂಚ ನಗರ ಪಾಲಿಕೆಗಳ ವಾರ್ಡ್‌ವಾರು ಮೀಸಲು ನಿಗದಿ ವಿಚಾರದಲ್ಲಿ ಸರ್ಕಾರದ ತೀರ್ಮಾನವೇ ಅಂತಿಮವಾಗಿರುತ್ತದೆ. ಹಾಗಾಗಿ ಅಂತಿಮ ಅಧಿಸೂಚನೆಯಲ್ಲಿ ಮಹಿಳೆ ಹಾಗೂ ಹಿಂದುಳಿದ ವರ್ಗಗಳಿಗೆ ನಿಗದಿಯಾಗಿರುವ ರಿಸರ್ವೇಷನ್‌ನಲ್ಲಿ ಜಿಬಿಎ ಬದಲಾಯಿಸುವ ಹಸ್ತಕ್ಷೇಪ ಮಾಡದು ಎಂದು ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಸರ್ಕಾರ ಈಗಾಗಲೇ ಮಹಿಳೆ ಹಾಗೂ ಹಿಂದುಳಿದ ವರ್ಗಕ್ಕೆ ಮೀಸಲನ್ನು ಅಂತಿಮ ಅಧಿಸೂಚನೆಯಲ್ಲಿ ಪ್ರಕಟಿಸಿದೆ. ಈ ಹಿಂದೆ ರಚಿಸಿದ್ದ ಮಾರ್ಗಸೂಚಿ ಆಧರಿಸಿ 2011ರ ಜನಗಣತಿ ಮಾಹಿತಿ ಆಧರಿಸಿ ಮೀಸಲನ್ನು ನಿಗದಿ ಮಾಡಿದೆ. ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆ ಆಲಿಸಿದ ಬಳಿಕವೇ ಅಂತಿಮ ಪಟ್ಟಿ ಬಿಡುಗಡೆಯಾಗಿದೆ. ಇದನ್ನೀಗ ರಾಜ್ಯ ಚುನಾವಣಾ ಆಯೋಗಕ್ಕೆ ರವಾನಿಸಲಾಗುವುದು ಎಂದು ಅವರು ಸೋಮವಾರ ತಿಳಿಸಿದರು.

ಏ.6ಕ್ಕೆ ಮತದಾರರ ಅಂತಿಮ ಪಟ್ಟಿ:

ಪ್ರಸ್ತುತ ಐದು ನಗರ ಪಾಲಿಕೆಗಳ ವಾರ್ಡ್‌ವಾರು ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 88.92 ಲಕ್ಷ ವೋಟರ್ಸ್‌ ಇದ್ದಾರೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಮಾ.16ರ ವರೆಗೆ ಕಾಲಾವಕಾಶ ನೀಡಲಾಗಿದೆ. ಆ ಬಳಿಕ ತಿದ್ದುಪಡಿ ಪ್ರಕ್ರಿಯೆ ಕೈಗೊಳ್ಳಲಾಗುವುದು. ಮತದಾರರ ಪಟ್ಟಿಯ ಮುದ್ರಣದ ಬಳಿಕ ಏ.6ರಂದು ಅಂತಿಮ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದರು.

8,024 ಮತಗಟ್ಟೆ ಸ್ಥಾಪನೆ:

ಜಿಬಿಎ ವ್ಯಾಪ್ತಿಯ ಕೇಂದ್ರ, ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಪಾಲಿಕೆಗಳು ಸೇರಿ ಒಟ್ಟು 5 ಕಾರ್ಪೋರೇಷನ್‌ಗಳ ವ್ಯಾಪ್ತಿಯಲ್ಲಿ 369 ವಾರ್ಡ್​​ಗಳು ರಚನೆಯಾಗಿದೆ. ಪರಿಷ್ಕೃತ ಕರಡು ಮತದಾರರ ಪಟ್ಟಿಯಲ್ಲಿ 45,69,752 ಪುರುಷರು, 43,21,143 ಮಹಿಳೆಯರು ಹಾಗೂ 1,635 ಇತರ ಮತದಾರರು ಸೇರಿ ಒಟ್ಟು 88,92,528 ಮತದಾರರು ಇದ್ದಾರೆ. ಈ ಸಂಖ್ಯೆಯನ್ನು ಆಧರಿಸಿ ಒಟ್ಟು 8,024 ಮತಟ್ಟೆಗಳನ್ನು ಸ್ಥಾಪಿಸಲಾಗುತ್ತದೆ ಎಂದರು.
ಸಭೆಯಲ್ಲಿ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಆರ್. ರಾಮಚಂದ್ರನ್, ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ರಾಜೇಂದ್ರ ಚೊಳನ್, ಡಿ.ಎಸ್. ರಮೇಶ್, ಪಿ.ಸುನೀಲ್ ಕುಮಾರ್, ಕೆ.ಎನ್. ರಮೇಶ್, ಡಾ. ಕೆ.ವಿ. ರಾಜೇಂದ್ರ, ಅಪರ ಆಯುಕ್ತರಾದ ಅಮರೇಶ್, ಮಂಜುನಾಥ ಸ್ವಾಮಿ, ರಂಗನಾಥ್, ಜಂಟಿ ಆಯುಕ್ತೆ ಪಲ್ಲವಿ ಉಪಸ್ಥಿತರಿದ್ದರು.

ಸುಬ್ರಮಣ್ಯಪುರದಲ್ಲಿ ಹೆಚ್ಚಿನ ಮತದಾರರು:

ದಕ್ಷಿಣ ಪಾಲಿಕೆಯ ವಾರ್ಡ್ ಸಂಖ್ಯೆ 51 ಸುಬ್ರಮಣ್ಯಪುರದಲ್ಲಿ ಅತಿ ಹೆಚ್ಚು 54,026 ಮತದಾರರನ್ನು ಹೊಂದಿದೆ. ಪೂರ್ವ ಪಾಲಿಕೆಯ ವಾರ್ಡ್ ಸಂಖ್ಯೆ 16 ಕೊತ್ತೂರು ಅತಿ ಕಡಿಮೆ 10,940 ಮತದಾರರನ್ನು ಹೊಂದಿರುತ್ತದೆ.

ವೆಬ್​ಸೈಟ್​ನಲ್ಲಿ ಮತದಾರರ ಪಟ್ಟಿ:

ಮತದಾರರು ವಾರ್ಡ್​​ವಾರು ವೋಟರ್ಸ್‌ ತಮ್ಮ ಹೆಸರನ್ನು ಆನ್‌ಲೈನ್‌ನಲ್ಲಿ ಎಪಿಕ್ ಸಂಖ್ಯೆ ಅಥವಾ ಅವರ ಹೆಸರಿನ ಮೂಲಕ ಹುಡುಕಲು ವ್ಯವಸ್ಥೆಯನ್ನು ಕಲ್ವಿಸುವ ನಿಟ್ಟಿನಲ್ಲಿ ವಾರ್ಡ್‌ವಾರು ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ಜಿಬಿಎ ಅಧಿಕೃತ ಜಾಲತಾಣದಲ್ಲಿ ಅಪ್‌ಲೋಡ್ ಮಾಡಲಾಗುವುದು. ಸಾರ್ವಜನಿಕರರು ತಮ್ಮ ಹೆಸರು ಸೇರ್ಪಡೆಯಾದ ಬಗ್ಗೆ ಪರಿಶೀಲಿಸಿಕೊಂಡು ಖಚಿತಪಡಿಸಿಕೊಳ್ಳಬಹುದಾಗಿದೆ.

ಪಾಲಿಕೆವಾರು ಮತದಾರರ ಸಹಾಯವಾಣಿ:

ಕೇಂದ್ರ : 080-22975803
ಉತ್ತರ : 080-22975936
ದಕ್ಷಿಣ : 9480685704
ಪೂರ್ವ : 9480685706
ಪಶ್ಚಿಮ : 9480685703

ಏ.1ರಿಂದ ಎಸ್‌ಐಆರ್ ಪ್ರಕ್ರಿಯೆ:

ಜಿಬಿಎ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗುತ್ತಿದೆ. ಇದರ ಜತೆಗೆ ರಾಜ್ಯ ಸರ್ಕಾರವು ಪ್ರತ್ಯೇಕ ಮತಪಟ್ಟಿ ಹೊಂದುವ ಹಿನ್ನೆಲೆಯಲ್ಲಿ ಸಮಗ್ರ ಪರಿಷ್ಕರಣೆಯನ್ನು ಏ.1ರಿಂದ ಆರಂಭಿಸಲಾಗುವುದು. ಈ ಬಗ್ಗೆ ಚುನಾವಣಾ ಆಯೋಗವು ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಿದೆ. ಇದರ ಹೊರತಾಗಿಯೂ ಕೇಂದ್ರ ಸರ್ಕಾರದ ಎಸ್‌ಐಆರ್ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಿದ್ದಲ್ಲಿ, ಅದನ್ನೂ ಮಾಡಲಾಗುವುದು. ಏಪ್ರಿಲ್‌ನಿಂದಲೇ ಸಾರ್ವತ್ರಿಕ ಜನಗಣತಿಯ ಚಟುವಟಿಕೆಯು ಹಂತಗಳಲ್ಲಿ ಕೈಗೊಳ್ಳಬೇಕಿದ್ದು, ಸರ್ಕಾರದ ನಿರ್ದೇಶನ ಪಾಲಿಸಲಾಗುವುದು ಎಂದು ಮುಖ್ಯ ಆಯುಕ್ತರು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net