ಜಿಬಿಎ: 3 ವಾರದಲ್ಲಿ 3,275 ಅರ್ಜಿಗಳ ವಿಲೇವಾರಿ

applications disposal
applications disposal
Published on

ಪ್ರಮುಖ ಮುಖ್ಯಾಂಶಗಳು

  • ನನ್ನ ಇ-ಖಾತಾ ನನ್ನ ಹಕ್ಕು ಅಭಿಯಾನಕ್ಕೆ ನಾಗರಿಕರ ಸ್ಪಂದನೆ
  • ತಿದ್ದುಪಡಿ ಪ್ರಕರಣಗಳಿಗೆ ಹೆಚ್ಚುವರಿ ಸಿಬ್ಬಂದಿ ಬಳಸಲು ಆಗ್ರಹ
ಬೆಂಗಳೂರು: ರಾಜ್ಯ ಸರ್ಕಾರದ ಭೂ ಗ್ಯಾರಂಟಿ ಯೋಜನೆಯಡಿ ಆರಂಭಿಸಿರುವ ‘ನನ್ನ ಇ-ಖಾತಾ, ನನ್ನ ಹಕ್ಕು’ ಅಭಿಯಾನಕ್ಕೆ ನಾಗರಿಕರಿಂದ ಉತ್ತಮ ಸ್ಪಂದನೆ ಸಿಗುತ್ತಿದ್ದು, ಶನಿವಾರ ನಡೆದ ಕಾಯಕ್ರಮದಲ್ಲಿ 1,842 ಮಂದಿ ಭೇಟಿ ನೀಡಿದ್ದು, ಈ ಪೈಕಿ ಸ್ಥಳದಲ್ಲಿಯೇ 947 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.
ಶನಿವಾರ ಐದೂ ಕಾರ್ಪೋರೇಷನ್‌ಗಳ ವ್ಯಾಪ್ತಿಯ 50 ಸ್ಥಳಗಳಲ್ಲಿ ಆಯೋಜಿಸಿದ್ದ ಅಭಿಯಾನದಲ್ಲಿ ಇ-ಖಾತಾ, ಮ್ಯುಟೆಷನ್, ತಿದ್ದುಪಡಿ, ಹೊಸ ಇ-ಖಾತಾ, ಬಿ-ಟು-ಎ ಖಾತಾ ಹಾಗೂ ದೂರುಗಳ ಅರ್ಜಿಗಳು ಸೇರಿ ಇತರ ವಿಷಯಗಳಿಗಾಗಿ ಜನರು ಹೆಲ್ಪ್‌ಡೆಸ್ಕ್‌ನಲ್ಲಿ ವಿಚಾರಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ 50 ಸ್ಥಳಗಳಲ್ಲಿ ಆಯೋಜಿಸಿದ್ದ ವಿಶೇಷ ಅಭಿಯಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡಿ ಇ-ಖಾತಾ ಸಂಬಂಧಿತ ಸೇವೆಗಳ ಪ್ರಯೋಜನ ಪಡೆದರು. ನಾಗರಿಕರಿಗೆ ಇ-ಖಾತಾ ಪಡೆಯುವ ಪ್ರಕ್ರಿಯೆಯನ್ನು ಸರಳ ಮತ್ತು ಸುಲಭಗೊಳಿಸಲಾಗಿದ್ದು, ಖಾತಾ ಸಂಬಂಧಿತ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲಾಗುತ್ತಿದೆ. ಅರ್ಜಿಗಳ ಪರಿಶೀಲನೆ, ದಾಖಲೆಗಳ ತಪಾಸಣೆ, ತಾಂತ್ರಿಕ ದೋಷಗಳ ನಿವಾರಣೆ, ಮಾಹಿತಿ ತಿದ್ದುಪಡಿ ಹಾಗೂ ಇತರ ಸಮಸ್ಯೆಗಳಿಗೆ ಪರಿಹಾರ ನೀಡಲಾಯಿತು ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.
ದಾಖಲೆಗಳ ಡಿಜಿಟಲೀಕರಣಕ್ಕೆ ಉತ್ತೇಜನ:
ಇ-ಖಾತಾ ಕುರಿತು ನಾಗರಿಕರಲ್ಲಿ ಅರಿವು ಮೂಡಿಸುವ ಜತೆಗೆ ಅರ್ಜಿಗಳ ತ್ವರಿತ ವಿಲೇವಾರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಾಗರಿಕರು ವಿವಿಧ ಕಚೇರಿಗಳಿಗೆ ಭೇಟಿ ನೀಡದೆ ಒಂದೇ ಸ್ಥಳದಲ್ಲಿ ಅಗತ್ಯ ಸೇವೆಗಳನ್ನು ಪಡೆಯುತ್ತಿರುವುದು ಅಭಿಯಾನದ ಪ್ರಮುಖ ವಿಶೇಷತೆಯಾಗಿದೆ. ಈ ಅಭಿಯಾನವು ನಾಗರಿಕರ ಆಸ್ತಿ ದಾಖಲೆಗಳ ಡಿಜಿಟಲೀಕರಣಕ್ಕೆ ಉತ್ತೇಜನ ನೀಡುವುದರೊಂದಿಗೆ, ಪಾರದರ್ಶಕ ಮತ್ತು ಜನಸ್ನೇಹಿ ಆಡಳಿತದತ್ತ ಮಹತ್ವದ ಹೆಜ್ಜೆಯಾಗಿದೆ ಎಂದು ಕಂದಾಯ ವಿಭಾಗದ ಅಧಿಕಾರಿಗಳು ಪ್ರತಿಕ್ರಿಯಸಿದರು.
ಅಭಿಯಾನದಲ್ಲಿ 9,457 ಮಂದಿ ಭಾಗಿ:
ಐದು ಪಾಲಿಕೆಗಳಲ್ಲಿ ನಡೆದಿರುವ ನನ್ನ ಇ-ಖಾತಾ ನನ್ನ ಹಕ್ಕು ಅಭಿಯಾನದಲ್ಲಿ 3 ವಾರದಲ್ಲಿ ಒಟ್ಟು 9,457 ಮಂದಿ ಭೇಟಿ ನೀಡಿದ್ದಾರೆ. ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ 3,275 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net