ಅನಾಥ ವಾಹನ ತೆರವಿಗೆ ಜಾಗದ ಸಮಸ್ಯೆ ಕಾರ್ಯಾಚರಣೆಗೆ ತಾತ್ಕಾಲಿಕ ಬ್ರೇಕ್​..!

ಜಿಬಿಎ
ಜಿಬಿಎ
Published on

ಪ್ರಮುಖ ಮುಖ್ಯಾಂಶಗಳು

  • ತೆರವುಗೊಂಡ ವಾಹನಗಳ ಸಂಗ್ರಹಕ್ಕೆ ಸ್ಥಳದ ಕೊರತೆ
  • ಜಾಗ ಗುರುತಿಸಿದ ಬಳಿಕ ಮತ್ತೆ ಕಾರ್ಯಾಚರಣೆಗೆ ವೇಗ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಗರದ ರಸ್ತೆ ಬದಿ ಹಾಗೂ ಪಾದಚಾರಿ ಮಾರ್ಗಗಳಲ್ಲಿ ವರ್ಷಗಳಿಂದ ಬಿದ್ದಿರುವ ಅನಾಥ ವಾಹನಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಜಾಗದ ಕೊರತೆ ಅಡ್ಡಿಯಾಗಿದ್ದು, ಗ್ರೇಟರ್​ ಬೆಂಗಳೂರು ಪ್ರಾಧಿಕಾರ (ಜಿಬಿಎ) ತಾತ್ಕಾಲಿಕವಾಗಿ ಕಾರ್ಯಾಚರಣೆಗೆ ಬ್ರೇಕ್​ ಹಾಕಿದೆ.
ಜು.10ರಿಂದ ಬೆಂಗಳೂರು ಉಸ್ತುವಾರಿ ಸಚಿವರ ಸೂಚನೆಯ ಮೇರೆಗೆ ಆರಂಭವಾಗಿದ್ದ ಕಾರ್ಯಾಚರಣೆ ಸಂಪೂರ್ಣ ಸ್ಥಗಿತಗೊಂಡಿಲ್ಲ, ಆದರೆ, ಜು.17ರಿಂದ ಕಾರ್ಯಾಚರಣೆಯ ಎರಡನೇ ಹಂತವಾಗಿ ಅನಾಥ ವಾಹನಗಳನ್ನು ಸ್ಥಳಾಂತರಿಸಲು ಸೂಕ್ತ ಜಾಗದ ವ್ಯವಸ್ಥೆಯಾಗುವವರೆಗೆ ಯೋಜನೆಗೆ ತಾತ್ಕಾಲಿಕ ಬ್ರೇಕ್​ ಬಿದ್ದಿದೆ.
ನಗರದ ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡಿದ್ದ ಅನಾಥ ವಾಹನಗಳನ್ನು ತೆರವುಗೊಳಿಸಿ ವಶಕ್ಕೆ ಪಡೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದರೆ ತೆರವುಗೊಳಿಸಿದ ವಾಹನಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಸೂಕ್ತ ಜಾಗದ ಕೊರತೆ ಎದುರಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮುಂದುವರಿಸುವುದು ಅಧಿಕಾರಿಗಳಿಗೆ ಸವಾಲಾಗಿದೆ.
ಕಾರ್ಯಾಚರಣೆಯ ಮೊದಲ ದಿನ ಕೆಲವು ಪಾಲಿಕೆಗಳು ಮಾತ್ರ ಕೆಲವೇ ವಾಹನಗಳನ್ನು ತೆರವುಗೊಳಿಸಿತ್ತು. ಬಳಿಕ ವಶಪಡಿಸಿಕೊಂಡ ವಾಹನಗಳನ್ನು ನಿಲ್ಲಿಸಲು ಸ್ಥಳವಿಲ್ಲದ ಕಾರಣ ಮುಂದಿನ ಹಂತದ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಪರಿಣಾಮವಾಗಿ ಐದು ನಗರಪಾಲಿಕೆಗಳ ವ್ಯಾಪ್ತಿಯಲ್ಲೂ ಅನಾಥ ವಾಹನಗಳ ತೆರವು ಕಾರ್ಯಕ್ಕೆ ವಿರಾಮ ನೀಡಲಾಗಿದೆ.
ಪ್ರಸ್ತುತ ತೆರವುಗೊಳಿಸಿದ ವಾಹನಗಳನ್ನು ಸಂಗ್ರಹಿಸಲು ಸೂಕ್ತ ಜಾಗ ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಸ್ಥಳದ ವ್ಯವಸ್ಥೆ ಪೂರ್ಣಗೊಂಡ ಬಳಿಕ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗುವುದು ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.
ಜಿಬಿಎ ಅಧಿಕಾರಿಗಳ ಪ್ರಕಾರ, ಅನಾಥ ವಾಹನಗಳನ್ನು ತೆರವುಗೊಳಿಸುವುದಕ್ಕಿಂತ ಅವುಗಳನ್ನು ಕಾನೂನುಬದ್ಧವಾಗಿ ವಶಕ್ಕೆ ಪಡೆದು ಸುರಕ್ಷಿತವಾಗಿ ಸಂಗ್ರಹಿಸಿ ನಿರ್ವಹಿಸುವುದೆ ದೊಡ್ಡ ಸವಾಲಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಬಳಿಕವೇ ನಗರಾದ್ಯಂತ ಅನಾಥ ವಾಹನಗಳ ತೆರವು ಕಾರ್ಯಾಚರಣೆಗೆ ಮತ್ತೆ ವೇಗ ಸಿಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net