ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳ ಮಾರಾಟಕ್ಕೆ ಸರ್ಕಾರ ಕಡಿವಾಣ ಹಾಕಿ, ಪರಿಸರಸ್ನೇಹಿ ಜೇಡಿಮಣ್ಣಿನ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದ್ದರೂ, ಅವುಗಳ ತಯಾರಿಕೆಗೆ ಅಗತ್ಯವಾದ ಜೇಡಿಮಣ್ಣಿನ ಕೊರತೆ ಮೂರ್ತಿಕಾರರನ್ನು ಕಾಡುತ್ತಿದೆ. ಹಿಂದೆ ನಾಗವಾರ ಕೆರೆಯಲ್ಲಿ ಉತ್ತಮ ಗುಣಮಟ್ಟದ ಜೇಡಿಮಣ್ಣು ದೊರೆಯುತ್ತಿತ್ತು. ಇದೀಗ ನಗರೀಕರಣದಿಂದಾಗಿ ಆ ಅವಕಾಶವೂ ಇಲ್ಲದಂತಾಗಿದೆ. ಮಣ್ಣಿಗಾಗಿ ತಮಿಳುನಾಡು, ಕೊಲ್ಕತ್ತಾ ಇತ್ಯಾದಿ ಅನ್ಯ ರಾಜ್ಯಗಳನ್ನು ಅವಲಂಬಿಸಬೇಕಾಗಿದೆ. ಸಾಗಣೆ ವೆಚ್ಚ, ಕಾರ್ಮಿಕರ ಕೂಲಿ ಸೇರಿ ಉತ್ಪಾದನಾ ವೆಚ್ಚ ಹೆಚ್ಚಿದ್ದರೂ, ಗ್ರಾಹಕರಿಗೆ ನಿಗದಿತ ದರದಲ್ಲೇ ಮೂರ್ತಿ ಮಾರಾಟ ಮಾಡಬೇಕಾದ ಅನಿವಾರ್ಯತೆ ಮಾರಾಟಗಾರರಿಗೆ ಇದೆ. ಅಲ್ಲದೆ, ಈ ಹಿಂದೆ ಮಣ್ಣಿನಲ್ಲಿ ಸಾಂಪ್ರದಾಯಕವಾಗಿ ಮೂರ್ತಿ ತಯಾರಿಸಲು ಜನರೇ ಇಲ್ಲ ಎಂಬ ಪರಿಸ್ಥಿತಿಯೂ ಇದೆ ಎಂದು ಮಾರಾಟಗಾರರು ಅಳಲು ತೋಡಿಕೊಂಡಿದ್ದಾರೆ.