ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನ; ನೋಡಲ್ ಅಧಿಕಾರಿ ನಿಯೋಜಿಸಿ

nodal-officer
nodal-officer
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಸೂಚನೆ
  • ಕಟ್ಟಡ ಅವಶೇಷ ತೆರವು ಕಾರ್ಯಾಚರಣೆ ಸಂಬಂಧ ವರ್ಚುಯಲ್ ಸಭೆ
ಬೆಂಗಳೂರು: ಮಹಾನಗರದಲ್ಲಿ ಆ.1ರಿಂದ ಆರಂಭವಾಗಲಿರುವ ‘ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನ’ಕ್ಕೆ ಇಲಾಖಾವಾರು ನೋಡಲ್ ಅಧಿಕಾರಿಗಳನ್ನು ನಿಯೋಜಿಸುವಂತೆ ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಬಿಎ ವ್ಯಾಪ್ತಿಯಲ್ಲಿ ಬೃಹತ್ ತ್ಯಾಜ್ಯ, ಕಟ್ಟಡ ಭಗ್ನಾವಶೇಷಗಳು ಹಾಗೂ ಗಿಡ-ಗಂಟಿಗಳ ತೆರವು ಕಾರ್ಯಾಚರಣೆಗೆ ಸಂಬಂಧಿಸಿ ವಿವಿಧ ಇಲಾಖೆಗಳೊಂದಿಗೆ ಬುಧವಾರ ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆ.1ರಿಂದ 31ರವರೆಗೆ ಅಭಿಯಾನ ನಡೆಯಲಿದೆ. ಇದಕ್ಕೆ ಎಲ್ಲ ಇಲಾಖೆಗಳು ಅಗತ್ಯ ಸಿದ್ಧತೆ ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿದರು.
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮ (ಬಿಎಸ್‌ಡಬ್ಲುೃಎಂಎಲ್) ಈಗಾಗಲೇ ನಗರದಲ್ಲಿ 1,616 ಸ್ಥಳಗಳಲ್ಲಿ 22 ಸಾವಿರ ಟನ್‌ಗಿಂತ ಹೆಚ್ಚಿನ ಬೃಹತ್ ತ್ಯಾಜ್ಯ ಹಾಗೂ ಭಗ್ನಾವಶೇಷ ಗುರುತಿಸಿದೆ. ಇದೇ ಮಾದರಿಯಲ್ಲಿ ಇತರ ಇಲಾಖೆಗಳೂ ತಮ್ಮ ವ್ಯಾಪ್ತಿಯಲ್ಲಿರುವ ತ್ಯಾಜ್ಯದ ಸ್ಥಳಗಳನ್ನು ಗುರುತಿಸಿ, ಅವುಗಳ ಪ್ರಮಾಣವನ್ನು ಅಂದಾಜಿಸಿ ಮ್ಯಾಪಿಂಗ್ ನಡೆಸಿ ವಿವರಪಟ್ಟಿಯನ್ನು ತಕ್ಷಣವೇ ಸಲ್ಲಿಸಬೇಕೆಂದು ತಾಕೀತು ಮಾಡಿದರು.
ನಗರದ ಹೊರ ವರ್ತುಲ ರಸ್ತೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆಗಳು, ಪ್ರಮುಖ ರಸ್ತೆಗಳು ಹಾಗೂ ಪ್ರಮುಖ ಜಂಕ್ಷನ್‌ಗಳಲ್ಲಿ ಸಮಗ್ರ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಬೇಕು. ತ್ಯಾಜ್ಯ ತೆರವು ಕಾರ್ಯಾಚರಣೆಯೊಂದಿಗೆ ಫುಟ್‌ಪಾತ್ ಹಾಗೂ ರಸ್ತೆ ಬದಿಯಲ್ಲಿ ಬೆಸ್ಕಾಂನ ಬಳಕೆಯಲ್ಲಿಲ್ಲದ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವುದು, ಟ್ರಾನ್ಸ್‌ಫಾರ್ಮರ್ ಮತ್ತು ವಿದ್ಯುತ್ ತಂತಿಗಳನ್ನು ಸ್ಥಳಾಂತರಿಸಬೇಕು. ಜತೆಗೆ ಜಲಮಂಡಳಿಯ ರಸ್ತೆ ಬದಿಯಲ್ಲಿರುವ ಪೈಪ್‌ಗಳನ್ನು ತೆರವುಗೊಳಿಸುವಂತೆ ಮುಖ್ಯ ಆಯುಕ್ತರು ಸೂಚಿಸಿದರು.
ಸಭೆಯಲ್ಲಿ ಬಿಡಿಎ ಆಯುಕ್ತ ಪಿ.ಮಣಿವಣ್ಣನ್, ಜಲಮಂಡಳಿ ಅಧ್ಯಕ್ಷೆ ಎನ್.ಮಂಜುಳಾ, ಬೆಸ್ಕಾಂ ಎಂಡಿ ಶಿವಶಂಕರ್, ಸಂಚಾರ ಪೊಲೀಸ್ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ, ನಗರ ಪಾಲಿಕೆಗಳ ಆಯುಕ್ತರಾದ ಪಿ.ಸುನೀಲ್ ಕುಮಾರ್, ಡಿ.ಎಸ್. ರಮೇಶ್, ಕೆ.ಎನ್. ರಮೇಶ್, ಡಾ. ಕೆ.ವಿ. ರಾಜೇಂದ್ರ, ಅಪರ ಆಯುಕ್ತೆ ಕವಿತಾ ರಾಜಾರಾಂ, ವಿಶೇಷ ಆಯುಕ್ತ ನಿತೀಶ್, ಬಿಎಸ್‌ಡಬ್ಲುೃಎಂಎಲ್ ಸಿಇಒ ಕರೀಗೌಡ, ಮೆಟ್ರೋ, ರೈಲ್ವೆ, ಕೆ-ರೈಡ್, ಎನ್‌ಎಚ್‌ಎಐ, ಕೆಐಎಡಿಬಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಹೆಬ್ಬಾಳದಲ್ಲಿ ಸ್ವಚ್ಛತೆಗೆ ಜಂಟಿ ಪರಿಶೀಲನೆ ನಡೆಸಿ:

ಏರ್‌ಪೋರ್ಟ್ ರಸ್ತೆಯ ಹೆಬ್ಬಾಳ ಜಂಕ್ಷನ್ ಸುತ್ತಮುತ್ತಲಿನ ಪ್ರದೇಶ ಹಾಗೂ ಮೇಲ್ಸೇತುವೆಯ ಕೆಳಭಾಗವನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಉತ್ತರ ಪಾಲಿಕೆ, ಬಿಡಿಎ ಹಾಗೂ ಎನ್‌ಎಚ್‌ಎಐ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ನಗರದ ರೈಲ್ವೆ ಹಳಿಗಳ ಪಕ್ಕದಲ್ಲಿ ಗಿಡ-ಗಂಟಿಗಳು ವ್ಯಾಪಕವಾಗಿ ಬೆಳೆದಿದದು, ಇವುಗಳನ್ನು ರೈಲ್ವೆ ಹಾಗೂ ಕೆ-ರೈಡ್ ಅಧಿಕಾರಿಗಳು ಸಮಗ್ರ ಯೋಜನೆ ರೂಪಿಸಿ ತೆರವು ಕಾರ್ಯ ಕೈಗೊಳ್ಳುವಂತೆ ಮುಖ್ಯ ಆಯುಕ್ತರು ಸೂಚಿಸಿದರು.

ತ್ಯಾಜ್ಯ ಸಂಗ್ರಹ ಸ್ಥಳಗಳನ್ನು ಗುರುತಿಸಿ:

ಬೃಹತ್ ಪ್ರಮಾಣದಲ್ಲಿ ತ್ಯಾಜ್ಯ ತೆರವು ಕಾರ್ಯಾಚರಣೆ ನಡೆಯಲಿರುವ ಹಿನ್ನೆಲೆಯಲ್ಲಿ, ತ್ಯಾಜ್ಯವನ್ನು ವಿಲೇವಾರಿ ಮಾಡಲು ಯರಪ್ಪನಹಳ್ಳಿ, ಮಾರೇನಹಳ್ಳಿ, ವೆಂಕಟಪುರ, ವಿಟ್ಟಸಂದ್ರ ಹಾಗೂ ಕಲ್ಲುಬಾಳು ಸೇರಿ 5 ಕ್ವಾರಿಗಳನ್ನು ಗುರುತಿಸಲಾಗಿದೆ. ಈ ಸಂಬಂಧ ಪಾಲಿಕೆ ಹಾಗೂ ವಿವಿಧ ಇಲಾಖೆಗಳು ಮಧ್ಯಂತರ ತ್ಯಾಜ್ಯ ಸಂಗ್ರಹ ಸ್ಥಳಗಳನ್ನು ಗುರುತಿಸಿ ಅವುಗಳ ಪಟ್ಟಿಯನ್ನು ಸಲ್ಲಿಸಬೇಕು. ಮೊದಲು ಆ ಜಾಗಗಳಲ್ಲಿ ತಾತ್ಕಾಲಿಕವಾಗಿ ತ್ಯಾಜ್ಯವನ್ನು ಸಂಗ್ರಹಿಸಿ, ನಂತರ ಅಲ್ಲಿಂದ ಅನಾಥ ಕ್ವಾರಿಗಳಿಗೆ ಸಾಗಿಸಿ ವಿಲೇವಾರಿ ಮಾಡುವ ವ್ಯವಸ್ಥೆ ಕಲ್ಪಿಸಬೇಕೆಂದು ಮಹೇಶ್ವರ ರಾವ್ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net