ಶಕ್ತಿ ಯೋಜನೆಗೆ ಇವಿ ಬಸ್​ಗಳೇ ಸೂಕ್ತ| ev bus

ಬಿಎಂಟಿಸಿ
ಬಿಎಂಟಿಸಿ
Published on

ಪ್ರಮುಖ ಮುಖ್ಯಾಂಶಗಳು

  • ಖರೀದಿಗೆ ಬಿಎಂಟಿಸಿ ಮೀನಮೇಷ
  • ಕಚ್ಚಾ ತೈಲ ಕೊರತೆ ಆತಂಕ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ ಒದಗಿಸುವ "ಶಕ್ತಿ' ಯೋಜನೆ ಲಕ್ಷಾಂತರ ಜನರಿಗೆ ನೆರವಾಗಿದೆ. ಈ ಯೋಜನೆಯ ಹಣಕಾಸಿನ ಹೊಣೆಗಾರಿಕೆಯನ್ನು ಸರ್ಕಾರವೇ ಹೊತ್ತಿದ್ದು, ಸಾರಿಗೆ ನಿಗಮಗಳಿಗೆ ಉಚಿತ ಪ್ರಯಾಣದ ಹಣ ಬಿಡುಗಡೆ ಮಾಡುತ್ತಿದೆ. ಇಂಧನ ಬೆಲೆಗಳು ಏರಿಕೆಯಾಗುವ ಪರಿಸ್ಥಿತಿಯಲ್ಲಿ ಈ ವೆಚ್ಚವು ಸರ್ಕಾರಕ್ಕೆ ಮತ್ತಷ್ಟು  ಹೊರೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇವಿ ಬಸ್​ಗಳನ್ನು ಹೆಚ್ಚಿಸುವುದು ಮಾತ್ರ ಪರ್ಯಾಯ ಮಾರ್ಗವಾಗಿದೆ. 
ಇವಿ ಬಸ್​ಗಳು ಡೀಸೆಲ್​ ಅವಲಂಬನೆ ಕಡಿಮೆ ಮಾಡುವುದರ ಜತೆಗೆ ಕಾರ್ಯಾಚರಣೆ ವೆಚ್ಚವನ್ನು ದೀರ್ಘಾವಧಿಯಲ್ಲಿ ಕಡಿಮೆ ಮಾಡುತ್ತವೆ. ಇವು ಪರಿಸರಸ್ನೇಹಿಯಾಗಿದ್ದು, ನಗರಗಳಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೂ ಸಹಕಾರಿಯಾಗಿದೆ. ಕೇಂದ್ರ ಸರ್ಕಾರವೂ ಇವಿ ಬಸ್​ಗಳ ಖರೀದಿಗೆ ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದ್ದು, ರಾಜ್ಯಗಳು ಇದರ ಪ್ರಯೋಜನ ಪಡೆಯುವ ಅವಕಾಶವಿದೆ. ಹಂತಹಂತವಾಗಿ ಇವಿ ಬಸ್​ಗಳನ್ನು ಸಾರಿಗೆ ನಿಗಮಗಳಲ್ಲಿ ಅಳವಡಿಸಿದರೆ, ಶಕ್ತಿ ಯೋಜನೆಯ ಸ್ಥಿರತೆ ಕಾಪಾಡಬಹುದು. ಜತೆಗೆ ಇಂಧನ ಬೆಲೆ ಏರಿಕೆಯಿಂದ ಉಂಟಾಗುವ ಆರ್ಥಿಕ ಒತ್ತಡವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಹೀಗಾಗಿ ತೈಲ ಸಂಕಷ್ಟದ ನಡುವೆಯೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಲಪಡಿಸಲು ಇವಿ ಬಸ್​ಗಳತ್ತ ಮುಖ ಮಾಡುವುದು ಇಂದಿನ ಅನಿವಾರ್ಯ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಇವಿ ಬಸ್​ ಖರೀದಿಗೆ ಹಿಂದೇಟು?
ಈಗಾಗಲೇ ರಾಜ್ಯ ಸರ್ಕಾರವು ಬಿಎಂಟಿಸಿ ಮತ್ತು ಕೆಎಸ್​ಆರ್​ಟಿಸಿಯಲ್ಲಿ ಇವಿ ಬಸ್​ಗಳ ಸೇವೆ ಆರಂಭಿಸಿ ವರ್ಷಗಳೇ ಕಳೆದಿವೆ. ಆದರೆ, ಬಿಎಂಟಿಸಿಯಲ್ಲಿ ಪ್ರಸ್ತುತ ಅಳವಡಿಸಲಾಗಿರುವ ಇವಿ ಬಸ್​ಗಳ ಬಗ್ಗೆ ಸಾಕಷ್ಟು ದೂರು- ಬರುತ್ತಿವೆ. ಬ್ರೇಕ್​ಡೌನ್​, ಅಪಘಾತ ಹೀಗೆ ಹಲವು ಕಾರಣಗಳಿಂದ ಕುಖ್ಯಾತಿ ಪಡೆದಿವೆ. ಇದರಿಂದ ಬೇಸತ್ತಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬಿಎಂಟಿಸಿಗೆ ಸೇವೆ ನೀಡುತ್ತಿರುವ ಇವಿ ಬಸ್​ ಸಂಸ್ಥೆಗಳ ವಿರುದ್ಧ ಕೇಂದ್ರ ಸರ್ಕಾರಕ್ಕೆ ಲಿಖಿತ ದೂರು ನೀಡಿದ್ದಾರೆ. ಕೇಂದ್ರ ಸರ್ಕಾರದ ಸಬ್ಸಿಡಿ ದೊರಕುತ್ತಿದ್ದರೂ ಮತ್ತು ರಾಜ್ಯದವರೇ ಆದ ಕೇಂದ್ರ ಸಚಿವ ಎಚ್​.ಡಿ. ಕುಮಾರಸ್ವಾಮಿ ಅವರು ಇನ್ನಷ್ಟು ಇವಿ ಬಸ್​ಗಳ ಖರೀದಿಗೆ ಅನುಮತಿ ನೀಡಿದ್ದರೂ ಸಾರಿಗೆ ಇಲಾಖೆ ಹಿಂದೇಟು ಹಾಕುತ್ತಿದೆ.
ಟೆಂಡರ್​ ಪ್ರಕ್ರಿಯೆ ವಿಳಂಬ
ಕೇಂದ್ರ ಸರ್ಕಾರದ 'ಪಿಎಂ- ಇ ಡ್ರೈವ್​' ಯೋಜನೆಯಡಿ 4,500 ಬಸ್​ಗಳನ್ನು ಮಂಜೂರು ಮಾಡಲಾಗಿದೆ.   ದೊಡ್ಡಮಟ್ಟದ ಇವಿ ಬಸ್​ಗಳನ್ನು ರಸ್ತೆಗಿಳಿಸುವ ಮೂಲಕ ಸಾರಿಗೆ ಇಲಾಖೆ ಇವಿ ಕ್ರಾಂತಿಗೆ ಮುಂದಾಗಿದೆ. ಈ 4,500 ಬಸ್​ಗಳನ್ನು ಜಿಸಿಸಿ (ಗ್ರಾಸ್​ ಕಾಸ್ಟ್​ ಕಾಂಟ್ರಾಕ್ಟ್​) ಅಡಿಯಲ್ಲಿ ರಸ್ತೆಗಿಳಿಸುವ ಸಂಬಂಧ ಬಿಎಂಟಿಸಿ ಟೆಂಡರ್​ ಪ್ರಕ್ರಿಯೆ ಪೂರ್ಣಗೊಳಿಸಿದೆ. ಈ ಪೈಕಿ ಸಾಮಾನ್ಯ, ಹವಾನಿಯಂತ್ರಿತ ಮತ್ತು 12 ಮೀಟರ್​ ಬಸ್​ಗಳಿವೆ. ಆದರೆ, ಟೆಂಡರ್​ ಪ್ರಕ್ರಿಯೆ ಪೂರ್ಣಗೊಳಿಸಲು ಸಾರಿಗೆ ಇಲಾಖೆ ವಿಳಂಬ ಧೋರಣೆ ತಳೆದಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ.

ಈ ಹಿಂದೆ ಬಿಎಂಟಿಸಿ ಇವಿ ಬಸ್​ಗಳ ಖರೀದಿ ವೇಳೆ ಬಸ್​ಗಳ ಗುಣಮಟ್ಟ, ತಯಾರಿಕಾ ಸಂಸ್ಥೆಯ ಮೂಲಸೌಕರ್ಯ, ಸಂಸ್ಥೆಗೆ ಇರುವ ಅನುಭವ ಮತ್ತು ಬಳಕೆ ಮಾಡಿರುವ ತಂತ್ರಜ್ಞಾನಕ್ಕೆ ಒತ್ತು ನೀಡದೆ ಕಡಿಮೆ ಬೆಲೆ ಕೋಟ್​ ಮಾಡಿದ್ದನ್ನು ಮಾತ್ರ ಪರಿಗಣಿಸಿ ಒಪ್ಪಂದ ಮಾಡಿಕೊಂಡಿದ್ದರ ಪರಿಣಾಮ ಇಂದು ಬಿಎಂಟಿಸಿ ಇವಿ ಬಸ್​ಗಳು ರ್ನಿಲಕ್ಷ್ಯ ಚಾಲನೆ, ಬ್ರೇಕ್​ಡೌನ್​, ಉದ್ದೇಶಿತ ಮೈಲೇಜ್​ನಲ್ಲಿ ಭಾರೀ ಇಳಿಕೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net