ಗಾಂಧಿನಗರ, ಗಾಂಧಿಬಜಾರ್‌ನಲ್ಲಿ ಫುಟ್​​​ಪಾತ್​​​ ಒತ್ತುವರಿ ತೆರವು

gandhi-bazaar
gandhi-bazaar
Published on

ಪ್ರಮುಖ ಮುಖ್ಯಾಂಶಗಳು

  • ಜನನಿಬಿಡ ಸ್ಥಳಗಳಲ್ಲಿ ಕಾರ್ಯಾಚರಣೆಗೆ ವ್ಯಾಪಾರಿಗಳ ವಿರೋಧ
  • ಮಂಗಳವಾರ 17 ಕಿ.ಮೀ. ಉದ್ದದ ಫುಟ್‌ಪಾತ್ ಒತ್ತುವರಿಮುಕ್ತ
ಬೆಂಗಳೂರು: ಪಾದಚಾರಿ ಮಾರ್ಗಗಳಲ್ಲಿನ ಒತ್ತುವರಿ ಭಾಗಗಗಳನ್ನು ತೆರವುಗೊಳಿಸುವಲ್ಲಿ ನಿರತವಾಗಿರುವ ಪಂಚ ಪಾಲಿಕೆಗಳು ಮಂಗಳವಾರ ಜನನಿಬಿಡ ಸ್ಥಳಗಳನ್ನೇ ಗುರಿಯಾಗಿಸಿ ಕಾರ್ಯಾಚರಣೆ ನಡೆಸಿದವು. ಒಟ್ಟು 17 ಕಿ.ಮೀ. ಉದ್ದದ ಫುಟ್‌ಪಾತ್‌ಗಳ ಒತ್ತುವರಿಮುಕ್ತಗೊಳಿಸಲಾಯಿತು. ಕಾರ್ಪೋರೇಷನ್‌ಗಳ ಈ ನಡೆಗೆ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಜಿಬಿಎ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಐದು ಪಾಲಿಕೆಗಳ ಪೈಕಿ ಕೇಂದ್ರ ಕಾರ್ಪೋರೇಷನ್‌ನಲ್ಲಿ ತೆರವು ಕಾರ್ಯ ತೀವ್ರತರವಾಗಿತ್ತು. ಹೆಚ್ಚು ಜನದಟ್ಟಣೆವುಳ್ಳ ಗಾಂಧಿನಗರ ಹಾಗೂ ಗಾಂಧಿಬಜಾರ್‌ನ ಪ್ರಮುಖ ಸ್ಥಳಗಳಲ್ಲಿ ಕಾರ್ಯಾಚರಣೆ ಕೈಗೊಂಡ ಕಾರ್ಪೋರೇಷನ್ ಅಧಿಕಾರಿಗಳು ಹತ್ತಾರು ಅಂಗಡಿ-ಮುಂಗಟ್ಟುಗಳು ಸೇರಿ ರಸ್ತೆಬದಿ ವ್ಯಾಪಾರ ಮಾಡುತ್ತಿದ್ದ ಬೀದಿಬದಿ ವರ್ತಕರಿಗೆ ಸೇರಿದ ಅಪಾರ ಪ್ರಮಾಣದ ವಸ್ತುಗಳನ್ನು ಜಪ್ತಿ ಮಾಡಲಾಯಿತು. ಇದಕ್ಕೆ ವರ್ತಕ ಸಮುದಾಯ ತೀವ್ರ ಅಸಮಾಧಾನ ಹೊರಹಾಕಿದ್ದು, ಜೀವನೋಪಾಯಕ್ಕಾಗಿ ವ್ಯಾಪಾರ ಮಾಡಲು ನಮಗೆ ಸ್ಥಳವನ್ನು ಗೊತ್ತು ಮಾಡಬೇಕು ಎಂದು ಪಟ್ಟುಹಿಡಿದರು. ಇದರ ಹೊರತಾಗಿಯೂ ಅಧಿಕಾರಿಗಳು ತೆರವು ಕಾರ್ಯವನ್ನು ಮುಂದುವರಿಸಿದರು.
ಕೇಂದ್ರ ಪಾಲಿಕೆ ವ್ಯಾಪ್ತಿಯ 14 ಪ್ರಮುಖ ರಸ್ತೆಗಳ ಒಟ್ಟು 11.62 ಕಿ.ಮೀ. ಪಾದಚಾರಿ ಮಾರ್ಗದ ಒತ್ತುವರಿ ತೆರವುಗೊಳಿಸಲಾಯಿತು. ಇದಕ್ಕಾಗಿ 60 ಕಾರ್ಮಿಕರು, 5 ಜೆಸಿಬಿ, 22 ಟ್ರ್ಯಾಕ್ಟರ್ ಹಾಗೂ 4 ಟಿಪ್ಪರ್‌ಗಳನ್ನು ಬಳಸಿಕೊಳ್ಳಲಾಯಿತು. ಕಾರ್ಯಾಚರಣೆಯಲ್ಲಿ 12 ಪೆಟ್ಟಿ ಅಂಗಡಿಗಳು, 29 ತಳ್ಳುವ ಗಾಡಿಗಳು, 30 ಶೀಟ್/ಮೇಲ್ಛಾವಣಿಗಳು, 8 ಮೆಟ್ಟಿಲುಗಳು, 2 ಜಾಹೀರಾತು ಫಲಕ ಹಾಗೂ 23 ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಇದೇ ವೇಳೆ ಗಾಂಧಿನಗರದ ರಸ್ತೆಯೊಂದರಲ್ಲಿ ಕನ್ನಡ ಧ್ವಜಸ್ತಂಭವನ್ನೂ ತೆರವುಗೊಳಿಸಲಾಯಿತು.
ಸರ್ ಸಿ.ವಿ. ರಾಮನ್‌ನಗರ, ಶಾಂತಿನಗರ, ಗಾಂಧಿನಗರ, ಶಿವಾಜಿನಗರ, ಚಿಕ್ಕಪೇಟೆ ಹಾಗೂ ಚಾಮರಾಜಪೇಟೆ ವಿಭಾಗದಲ್ಲಿ ತೆರವು ಕಾರ್ಯವನ್ನು ಕೈಗೊಳ್ಳಲಾಯಿತು ಎಂದು ಕೇಂದ್ರ ಪಾಲಿಕೆಯ ಆಯುಕ್ತ ಜಿ.ಜಗದೀಶ್ ತಿಳಿಸಿದ್ದಾರೆ.

ಉತ್ತರ ಪಾಲಿಕೆಯಲ್ಲಿ 2.85 ಕಿ.ಮೀ. ತೆರವು:

ಉತ್ತರ ಕಾರ್ಪೋರೇಷನ್ ವ್ಯಾಪ್ತಿಯ ಸರ್ವಜ್ಞನಗರ, ಯಲಹಂಕ ಹಾಗೂ ದಾಸರಹಳ್ಳಿ ವಿಭಾಗದ ಕೆಲವೆಡೆ ಪಾದಚಾರಿ ಮಾರ್ಗಗಳ ಮೇಲಿದ್ದ ಒತ್ತುವರಿ ಭಾಗಗಳನ್ನು (2.85 ಕಿ.ಮೀ. ಉದ್ದ) ತೆರವುಗೊಳಿಸಲಾಯಿತು. ಕಾರ್ಯಾಚರಣೆ ವೇಳೆ 30 ಅಂಗಡಿಗಳು/ಪೆಟ್ಟಿ ಅಂಗಡಿಗಳನ್ನು ತೆರವುಗೊಳಿಸಲಾಯಿತು. 36 ಶೀಟ್/ಮೇಲ್ಛಾವಣಿ/ಕ್ಯಾನೋಪಿಗಳು, 54 ಮೆಟ್ಟಿಲುಗಳು, 40 ಜಾಹೀರಾತು ನಾಮಫಲಕಗಳಲ್ಲದೆ 78 ಟನ್ ನಿರ್ಮಾಣ ತ್ಯಾಜ್ಯ/ಮಣ್ಣು ತೆರವುಗೊಳಿಸಲಾಯಿತು. ಇದಕ್ಕಾಹ ಹಲವು ಜೆಸಿಬಿ/ಟ್ರ್ಯಾಕ್ಟರ್‌ಗಳ ಜತೆಗೆ 50ಕ್ಕೂ ಹೆಚ್ಚಿನ ಕಾರ್ಮಿಕರನ್ನು ಬಳಸಿಕೊಳ್ಳಲಾಯಿತು.

ಜಯನಗರದಲ್ಲಿ ಮತ್ತೆ ತೆರವುಕಾರ್ಯ:

ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ ಜಯನಗರದ 9, 10ನೇ ಮುಖ್ಯರಸ್ತೆ, ಬೆಂಗಳೂರು ದಕ್ಷಿಣ ವಿಭಾಗದ ನಾರಾಯಣನಗರದ 3ನೇ ಬ್ಲಾಕ್‌ನ ಡಬಲ್ ರಸ್ತೆ ಸೇರಿ ಒಟ್ಟು 1.60 ಕಿ.ಮೀ. ಉದ್ದದ ಪಾದಚಾರಿ ಮಾರ್ಗದ ಅತಿಕ್ರಮಣವನ್ನು ಮುಕ್ತ ಮಾಡಲಾಗಿದೆ.
ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ ಮಹಾಲಕ್ಷ್ಮೀಪುರ ವಿಭಾಗದಲ್ಲಿ ಉಲ್ಲಾಸ ಚಿತ್ರಮಂದಿರ ರಸ್ತೆಯ ಶಂಕರನಗರ ರಸ್ತೆಯಿಂದ ಯಶವಂತಪುರ ಸರ್ವಿಸ್ ರಸ್ತೆ ಕಡೆ ಉದ್ದಕ್ಕೂ ಒಟ್ಟು 1.10 ಕಿ.ಮೀ. ಉದ್ದದಷ್ಟು ತೆರವುಗೊಳಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net