ರೈತರಿಗೆ ಕೃಷಿ ತಂತ್ರಜ್ಞಾನ ಮಾಹಿತಿ ತಲುಪಿಸಿ

agricultural-technology
agricultural-technology
Published on

ಪ್ರಮುಖ ಮುಖ್ಯಾಂಶಗಳು

  • ಯುಎಎಸ್-ಬಿ ಕುಲಪತಿ ಡಾ. ಎಸ್.ವಿ. ಸುರೇಶ್ ಅಭಿಮತ
  • ಜಿಕೆವಿಕೆಯಲ್ಲಿ ಕ್ಷೇತ್ರ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮ ಉದ್ಘಾಟನೆ
ಬೆಂಗಳೂರು: ಪ್ರಸ್ತುತ ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಆವಿಷ್ಕಾರಗಳಾಗುತ್ತಿದ್ದು, ಕೃಷಿ ಸಂಬಂಧಿತ ತಂತ್ರಜ್ಞಾನಗಳ ಮಾಹಿತಿ ಹಾಗೂ ಅವುಗಳ ಬಳಕೆಯ ವಿಧಾನವನ್ನು ರೈತರಿಗೆ ತಲುಪಿಸಬೇಕಾದ ಅಗತ್ಯ ಇದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ (ಯುಎಎಸ್-ಬಿ) ಕುಲಪತಿ ಡಾ. ಎಸ್.ವಿ. ಸುರೇಶ್ ತಿಳಿಸಿದರು.
ಕೃಷಿ ವಿವಿ ಕ್ಯಾಂಪಸ್ ಜಿಕೆವಿಕೆಯಲ್ಲಿ ವಿಸ್ತರಣಾ ನಿರ್ದೇಶನಾಲಯವು ಕ್ಷೇತ್ರ ಸಿಬ್ಬಂದಿಗಳಿಗೆ ಆಯೋಜಿಸಿದ್ದ ‘ಮುಂಗಾರು ಹಂಗಾಮಿನಲ್ಲಿ ಪ್ರಮುಖ ಬೆಳೆಗಳ ಸುಧಾರಿತ ಉತ್ಪಾದನಾ ತಂತ್ರಜ್ಞಾನ’ ಕುರಿತ 2 ದಿನಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಬುಧವಾರ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ರೈತರು ರಾಸಾಯನಿಕ ರಸಗೊಬ್ಬರಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ಮಣ್ಣಿನಲ್ಲಿರುವ ಸಾವಯವ ಅಂಶವು ಕುಂಠಿತವಾಗುತ್ತಿದೆ. ಇದರಿಂದಾಗಿ ಮಣ್ಣು ಹಾಗೂ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಹಾಗಾಗಿ ರಸಗೊಬ್ಬರದ ಜತೆಗೆ ಸಾವಯವ ಗೊಬ್ಬರಗಳನ್ನೂ ಬಳಸಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕೈಗೊಳ್ಳಬೇಕಿದೆ ಎಂದು ಅವರು ಕಿವಿಮಾತು ಹೇಳಿದರು.

ರೈತರಿಗೆ ಸಕಾಲದಲ್ಲಿ ಮಾಹಿತಿ ನೀಡಬೇಕು:

ವಿಸ್ತರಣಾ ನಿರ್ದೇಶಕ ಡಾ. ವೈ.ಎನ್. ಶಿವಲಿಂಗಯ್ಯ ಮಾತನಾಡಿ, ಮಣ್ಣು ಪರೀಕ್ಷೆಯ ಪ್ರಾಮುಖ್ಯತೆ ಹಾಗೂ ಸಾವಯವ ಗೊಬ್ಬರ, ಸೂಕ್ಷ್ಮ ಪೋಷಕಾಂಶಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು. ಹಾಲಿ ಮುಂಗಾರಿಗೆ ಸೂಕ್ತವಾದ ಬೆಳೆಗಳ ಬಗ್ಗೆ ರೈತರಿಗೆ ಸಕಾಲದಲ್ಲಿ ಮಾಹಿತಿ ನೀಡುವುದು ಕೃಷಿ ವಿವಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಗಳ ಜವಾಬ್ದಾರಿಯಾಗಿದೆ. ಕ್ಷೇತ್ರ ಸಿಬ್ಬಂದಿಗಳಿಗೆ ಬೆಳೆಗಳ ಆಧುನಿಕ ಬೇಸಾಯ ಕ್ರಮಗಳ ಬಗ್ಗೆ ವಿಜ್ಞಾನಿಗಳಿಂದ ಮಾಹಿತಿ ನೀಡಲು ತರಬೇತಿ ಕಾರ್ಯಕ್ರಮವನ್ನು ವಿವಿಯು ಹಮ್ಮಿಕೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಯ ಸಿಬ್ಬಂದಿ ತರಬೇತಿ ಘಟಕದ ಮುಖ್ಯಸ್ಥ ಡಾ. ಆರ್.ನಾರಾಯಣರೆಡ್ಡಿ, ಕೋರಮಂಡಲ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ ಡಿಜಿಎಂ ಎಚ್.ವಿ. ರಮೇಶ್‌ಕುಮಾರ್ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net