ವಡೋದರ: ಮಾಜಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (Royal Challengers Bengaluru) ವುಮೆನ್ಸ್ ಪ್ರೀಮಿಯರ್ ಲೀಗ್ (WPL) ನಾಲ್ಕನೇ ಆವೃತ್ತಿಯಲ್ಲಿ ನೇರವಾಗಿ ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಆಲ್ರೌಂಡರ್ ನಾಡಿನ್ ಡಿ ಕ್ಲರ್ಕ್ (22ಕ್ಕೆ 4) ಕರಾರುವಾಕ್ ಬೌಲಿಂಗ್ ಹಾಗೂ ಗ್ರೇಸ್ ಹ್ಯಾರಿಸ್ (75 ರನ್, 37 ಎಸೆತ, 13 ಬೌಂಡರಿ, 2 ಸಿಕ್ಸರ್ ಮತ್ತು 22ಕ್ಕೆ 2 ವಿಕೆಟ್) ಆಲ್ರೌಂಡ್ ಆಟದ ಬಲದಿಂದ ಸ್ಮೃತಿ ಮಂದನಾ (Smriti Mandhana) ಪಡೆ ತನ್ನ 8ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಎದುರು 8 ವಿಕೆಟ್ಗಳ ಗೆಲುವು ದಾಖಲಿಸಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡ ಆರ್ಸಿಬಿ, 2024ರ ಬಳಿಕ ಎರಡನೇ ಬಾರಿಗೆ ಪ್ರಶಸ್ತಿ ಸುತ್ತಿಗೇರಿತು. 2-3ನೇ ಸ್ಥಾನಿಗಳ ನಡುವಿನ ಎಲಿಮಿನೇಟರ್ ಪಂದ್ಯದ (ಫೆ.3) ವಿಜೇತರ ವಿರುದ್ಧ ಫೆಬ್ರವರಿ 5ರಂದು ಆರ್ಸಿಬಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದೆ. ಇದರೊಂದಿಗೆ ಐಪಿಎಲ್-ಡಬ್ಲ್ಯುಪಿಎಲ್ನಲ್ಲಿ (IPL) ಏಕಕಾಲದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶೇಷ ಅವಕಾಶ ಆರ್ಸಿಬಿಗೆ ಎದುರಾಗಿದೆ.
ಕೋಟಂಬಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಟೂರ್ನಿಯ 18ನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಯುಪಿಗೆ ನಾಯಕಿ ಮೆಗ್ ಲ್ಯಾನಿಂಗ್ (41) ಹಾಗೂ ಆಲ್ರೌಂಡರ್ ದೀಪ್ತಿ ಶರ್ಮ (55 ರನ್, 43 ಎಸೆತ, 6 ಬೌಂಡರಿ, 1 ಸಿಕ್ಸರ್) ಮೊದಲ ವಿಕೆಟ್ಗೆ 49 ಎಸೆತಗಳಲ್ಲಿ 74 ರನ್ಗಳಿಸಿ ಉತ್ತಮ ಆರಂಭ ಒದಗಿಸಿದರು. ನಂತರ ಡಿ ಕ್ಲರ್ಕ್ ಮತ್ತು ಹ್ಯಾರಿಸ್ ಬಿಗಿ ಬೌಲಿಂಗ್ ಎದುರು ನಿರಂತರ ವಿಕೆಟ್ ಕಳೆದುಕೊಂಡ ಯುಪಿ 8 ವಿಕೆಟ್ಗೆ 143 ರನ್ಗಳಿಗೆ ಸಮಾಧಾನ ಕಂಡಿತು. ಪ್ರತಿಯಾಗಿ ಗ್ರೇಸ್ ಹ್ಯಾರಿಸ್ ಮತ್ತು ಸ್ಮೃತಿ ಮಂದನಾ (54*ರನ್, 27 ಎಸೆತ, 8 ಬೌಂಡರಿ, 2 ಸಿಕ್ಸರ್) ನಡೆಸಿದ ಶತಕದ ಜತೆಯಾಟದ ನೆರವಿನಿಂದ 13.1 ಓವರ್ಗಳಲ್ಲಿ 2 ವಿಕೆಟ್ಗೆ 147 ರನ್ ಕಲೆಹಾಕಿದ ಆರ್ಸಿಬಿ ಸುಲಭ ಗೆಲುವು ದಾಖಲಿಸಿ ಲಯಕ್ಕೆ ಮರಳಿತು.